ಪ್ರಗತಿವಾಹಿನಿ ಸುದ್ದಿ; ಕಲಬುರಗಿ: ಒಂದೆಡೆ ಶಾಲೆ ಆರಂಭದ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಡೆಡ್ಲಿ ಕೊರೊನಾ ಸೋಂಕು ಮಕ್ಕಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕಲಬುರಗಿಯಲ್ಲಿ ಶಾಲೆಗೆ ಹೋಗಿದ್ದ ನಾಲ್ಕು ಮಕ್ಕಳಲ್ಲಿ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ.
ವಿದ್ಯಾಗಮ ಯೋಜನೆ ಅಡಿಯಲ್ಲಿ ಮಕ್ಕಳನ್ನು ವಠಾರ ಶಾಲೆಗೆ ಕಳುಹಿಸಲಾಗಿತ್ತು. ಈ ವೇಳೆ ಶಾಲೆಯ 250 ಮಕ್ಕಳಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿದ್ದು, ಅವರಲ್ಲಿ ಮೂವರು ವಿದ್ಯಾರ್ಥಿಗಳು ಹಾಗೂ ಓರ್ವ ವಿದ್ಯಾರ್ಥಿನಿ ಸೇರಿ ನಾಲ್ವರಿಗೆ ಕೊರೊನಾ ಪಾಸಿಟೀವ್ ಬಂದಿದೆ.
ಈ ಹಿಂದೆ ವಠಾರ ಶಾಲೆಯ ಮುಖ್ಯಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಶಿಕ್ಷಕರಿಂದಲೇ ಮಕ್ಕಳಿಗೂ ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಕ್ಕಳಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಬೆನ್ನಲ್ಲೇ ಇದೀಗ ವಠಾರ ಶಾಲೆಯನ್ನು ಸ್ಥಗಿತಗೊಳಿಸಲಾಗಿದೆ.
ರಾಜ್ಯಾದ್ಯಂತ ಶಾಲೆಗಳನ್ನು ಆರಂಭಿಸುವ ಕುರಿತು ಚರ್ಚೆ ನಡೆಸುತ್ತಿರುವ ಬೆನ್ನಿಗೇ ಈ ಸುದ್ದಿ ಹೊರಬಿದ್ದಿರುವುದು ಆತಂಕ ಹೆಚ್ಚಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ