Kannada NewsKarnataka NewsLatest

ಖಾನಾಪುರ ಬಳಿ ಹುಲಿ ಪತ್ತೆ ಸುಳ್ಳು ಸುಳ್ಳು ಸುಳ್ಳು

https://www.facebook.com/1311162719047344/videos/678903956344938/

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಖಾನಾಪುರ ಬಳಿ ಬುಧವಾರ ಹುಲಿ ಪತ್ತೆಯಾಗಿದೆ ಎನ್ನುವ ಸುದ್ದಿ ಮತ್ತು ವಿಡೀಯೋ ಸಂಪೂರ್ಣ ಸುಳ್ಳು ಎನ್ನುವುದು ಬಟಾ ಬಯಲಾಗಿದೆ.

ಖಾನಾಪುರದ ಪಾರವಾಡ ಬಳಿ ಬುಧವಾರ ಬೈಕ್ ನಲ್ಲಿ ಹೋಗುತ್ತಿದ್ದವರಿಗೆ ಹುಲಿ ಪತ್ತೆಯಾಗಿದೆ. ಅವರು ಅದನ್ನು ವಿಡೀಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎನ್ನುವ ದಟ್ಟ ಸುದ್ದಿ ಹರಡಿತ್ತು. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಿ, ಜನರಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿರುವುದಾಗಿಯೂ, ಜಾನುವಾರುಗಳನ್ನು ಬಿಡದಂತೆ ಸೂಚನೆ ನೀಡಿರುವುದಾಗಿಯೂ ತಿಳಿಸಿದ್ದರು.

ಇದನ್ನು ಅನುಸರಿಸಿ ಬಹುತೇಕ ಮಾಧ್ಯಮಗಳು ಸುದ್ದಿ ಪ್ರಕಟಿಸಿದ್ದವು. ಸುದ್ದಿ ಎಲ್ಲ ಕಡೆ ಕಾಡ್ಗಿಚ್ಚಿನಂತೆ ಹರಡಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ಆದರೆ ಈ ವಿಡೀಯೋ ಸಂಪೂರ್ಣ ನಕಲಿ. ಇದು ಖಾನಾಪುರದ್ದಲ್ಲ, ಸಂಜಯ ಗಾಂಧಿ ನ್ಯಾಶನಲ್ ಪಾರ್ಕ್ ವಿಡೀಯೋ ಎನ್ನುವುದು ಖಚಿತವಾಗಿದೆ. ಈ ವಿಡೀಯೋ ವನ್ನು ಆಗಸ್ಟ್ 16ರಂದೇ ಎಸ್.ಬಿ.ಸ್ನೇಕ್ ಫ್ರೆಂಡ್ ಎನ್ನುವವರೊಬ್ಬರು ಫೇಸ್ ಬುಕ್ ನಲ್ಲಿ ಹಾಕಿದ್ದಾರೆ. ಆ ವಿಡೀಯೋದ ಲಿಂಕ್ ನ್ನು ಪ್ರಗತಿವಾಹಿನಿ ಇಲ್ಲಿ ಹಾಕಿದೆ.

ಈ ಕುರಿತು ಬೆಳಗಾವಿ ಅರಣ್ಯ ಸಂರಕ್ಷಣಾಧಿಕಾರಿ ಬಿ.ವಿ.ಪಾಟೀಲ ಅವರನ್ನು ಪ್ರಗತಿವಾಹಿನಿ ಸಂಪರ್ಕಿಸಿದಾಗ, ಹುಲಿ ಪತ್ತೆಯಾಗಿದೆ ಎಂದು ನಮ್ಮ ಸಿಬ್ಬಂದಿ ತಿಳಿಸಿದ್ದಾರೆ. ನನಗೆ ವಿಡೀಯೋವನ್ನು ಕಳಿಸಿದ್ದಾರೆ, ನಾನು ನೋಡಿದ್ದೇನೆ. ಆದರೆ ಹುಲಿ ಪತ್ತೆಯಾದರೆ ಅದರಲ್ಲಿ ವಿಶೇಷವೇನೂ ಇಲ್ಲ. ಆ ಪ್ರದೇಶದಲ್ಲಿ 8 ಹುಲಿಗಳಿವೆ ಎಂದು 2018ರ ಗಣತಿ ವೇಳೆ ಪತ್ತೆಯಾಗಿದೆ. ಅದು ಸಹಜವಾಗಿ ಓಡಾಡಲೇ ಬೇಕು.  ಜನರು ಎಚ್ಚರಿಕೆಯಿಂದಿರಬೇಕು ಎನ್ನುವ ಕುರಿತು ತಿಳಿವಳಿಕೆ ಮೂಡಿಸುತ್ತೇವೆ. ಹುಲಿ ಮುಕ್ತವಾಗಿ ಓಡಾಡಲು ಅವಕಾಶ ಮಾಡಿಕೊಡಬೇಕು ಎಂದರು.

ಆದರೆ ವಿಡೀಯೋದ ಅಸಲಿ, ನಕಲಿ ಬಗ್ಗೆ ನಾನು ವಿಚಾರಿಸಿಲ್ಲ. ಹುಲಿ ಅಲ್ಲೆಲ್ಲ ಸಂಚರಿಸುವುದು ಸಹಜ ಪ್ರಕ್ರಿಯೆ. ಅದೇನು ದೊಡ್ಡ ವಿಷಯವಲ್ಲ ಎಂದೂ ಅವರು ತೇಳಿಸಿದರು.

ವಿಪರ್ಯಾಸವೆಂದರೆ, ಎಲ್ಲಿಯದೋ ವಿಡೀಯೋವನ್ನು ಹರಿಬಿಟ್ಟು ಇದು ಖಾನಾಪುರ ಅರಣ್ಯದ್ದು, ದಾಂಡೇಲಿ ಅರಣ್ಯದ್ದು ಎಂದು ಸುದ್ದಿ ಹಬ್ಬಿಸುವ ಕೃತ್ಯ ಕಳೆದ ಕೆಲವು ವರ್ಷಗಳಿಂದಲೂ ನಡೆಯುತ್ತಿದೆ. ಇದೇ ರೀತಿಯ ಘಟನೆ ಈಗಿನದ್ದು ಕೂಡ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button