Latest

ದೇವಕ್ಷೇತ್ರಗಳು ಶ್ರೀಮಠದ ನೇತೃತ್ವದಲ್ಲಿದ್ದರೆ ಧರ್ಮ ಜಾಗೃತಿಯಾಗುತ್ತದೆ -ರಾಘವೇಶ್ವರ ಭಾರತಿ ಸ್ವಾಮಿಗಳು

ಗುರು, ಗೋವು, ಗೀತೆಗಳ ಸಂಗಮ ಶ್ರೀ ವೀರಭದ್ರೇಶ್ವರ ವಿಶಾಳಿ ಜಾತ್ರೆ

 

 ಪ್ರಗತಿವಾಹಿನಿ ಸುದ್ದಿ, ಯಕ್ಸಂಬಾ

 ವಿಶ್ವಗುರುವಾಗಿರುವ ನಮ್ಮ ಭಾರತೀಯ ಸಂಸ್ಕೃತಿ ಸಾವಿರ ಚೂರಾಗದೇ ಒಟ್ಟುಗೂಡಬೇಕು. ನಮ್ಮ ಭಾರತೀಯ ಪರಂಪರೆ ಉಳಿದು ಬೆಳೆಯಬೇಕು. ನಮ್ಮ ಉಜ್ವಲ ಭವಿಷ್ಯಕ್ಕಾಗಿ ಹಿಂದೂ ಧರ್ಮ ಹಾಗೂ ಗೋವು ಉಳಿಸಿ ಬೆಳೆಸಬೇಕಾಗಿದೆ. ಬೇಕಾದ್ದನ್ನು, ಬೇಕಾದಾಗ, ಬೇಕಾಗುವಷ್ಟು ತಿನ್ನುವುದು ನಾವು, ಆದರೆ, ಕೊಟ್ಟಿದ್ದನ್ನು, ಕೊಟ್ಟಾಗ, ಕೊಟ್ಟಷ್ಟು ತಿನ್ನುವುದೇ ಗೋವು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ಹೇಳಿದರು.

ಸುಕ್ಷೇತ್ರ ಯಡೂರಿನ ವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವ ಅಂಗವಾಗಿ ನಡೆದ ಮಹಾದ್ವಾರ, ಮುಖಮಂಟಪ ಹಾಗೂ ಧ್ವಜಸ್ಥಂಭದ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿಕೊಂಡು ಮಾತನಾಡಿದರು.

ಸುಕ್ಷೇತ್ರ ಯಡೂರು ಶ್ರೀಶೈಲ ಜಗದ್ಗುರುಗಳ ನೇತೃತ್ವದಲ್ಲಿ ಅಭಿವೃಧ್ಧಿ ಹೊಂದಿದ್ದು ಗುರು, ಗೋವು, ಗೀತೆಗಳ ಸಂಗಮ ಶ್ರೀ ವೀರಭದ್ರೇಶ್ವರ ವಿಶಾಳಿ ಜಾತ್ರೆಯಾಗಿದೆ. ದೇವಕ್ಷೇತ್ರಗಳು ಸರಕಾರದ ಕಪಿಮುಷ್ಠಿಯಲ್ಲಿರುವುದಕ್ಕಿಂತ ಶ್ರೀಮಠದ ನೇತೃತ್ವದಲ್ಲಿದ್ದರೆ ಧರ್ಮ ಜಾಗೃತಿಯಾಗುತ್ತದೆ ಎಂದರು.

ಸಮಾರಂಭದ ದಿವ್ಯಸಾನಿಧ್ಯವನ್ನುವಹಿಸಿಕೊಂಡು ಮಾತನಾಡಿದ ಶ್ರೀಶೈಲ ಜಗದ್ಗುರು ಶ್ರೀ ಡಾ ಚನ್ನಸಿಧ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ನಮ್ಮ ಧರ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗುವುದು ಭಾರತೀಯರ ಕರ್ತವ್ಯವಾಗಿದೆ. ಸಮಾಜಕ್ಕಾಗಿ ಶ್ರಮಿಸಿದವರನ್ನು ಸಮಾಜ ಎಂದಿಗೂ ಗೌರವಿಸುತ್ತದೆ. ಧರ್ಮದ ನಡೆ ಸಮಾಜದ ಉನ್ನತಿಗಾಗಿರುತ್ತದೆ. ಅಧರ್ಮ ಯಾವುತ್ತೂ ಅವನತಿಯಡೆಗೆ ಒಯ್ಯುತ್ತದೆ. ಅದ್ದರಿಂದ ಎಲ್ಲರೂ ಧರ್ಮವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಎಲ್ಲರೂ ಸಮಾಜದ ಉನ್ನತಿಗಾಗಿ ಶ್ರೆಮಿಸಬೇಕೆಂದರು.

ದಿವ್ಯಸಾನಿಧ್ಯವಹಿಸಿಕೊಂಡು ಕಾಶಿಯ ಜಗದ್ಗುರುಗಳಾದ ಶ್ರೀ ಡಾ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಸುಕ್ಷೇತ್ರ ಯಡೂರು ಕ್ಷೇತ್ರ ಧರ್ಮ ಸಮನ್ವಯದ ಸಾಕ್ಷಾತ್ಕಾರ ಮೂಡಿಸುತ್ತಿದೆ. ಶ್ರೀಶೈಲ ಶ್ರೀಗಳ ನೇತೃತ್ವದಲ್ಲಿ ಯಡೂರು ಕ್ಷೇತ್ರದ ಅಭಿವೃಧ್ಧಿ ಜತೆಗೆ ಧರ್ಮ ಜಾಗೃತಿಯಾಗುತ್ತಿದೆ ಎಂದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ವಿಜಯ ಸಂಕೇಶ್ವರ ವೀರಶೈವ-ಲಿಂಗಾಯತ ಎಂದೂ ಬೇರೆ ಬೇರೆಯಲ್ಲ. ನಾವೆಲ್ಲರೂ ಒಂದು, ನಾವೆಲ್ಲರೂ ಹಿಂದೂ ಎಂಬ ಭಾವನೆಯೊಂದಿಗೆ ಒಂದಾಗಿ ಧರ್ಮ ಜಾಗೃತಿ ಮಾಡಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಹಿಂದೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು.

ಹುಬ್ಬಳ್ಳಿಯ ಡಾ ಅಶೋಕ ಶೆಟ್ಟರ ಧ್ವಜಸ್ಥಂಬವನ್ನು ಉದ್ಘಾಟಿಸಿ ಮಾತನಾಡಿದರು. ಹೊನ್ನಾಳಿಯ ಶ್ರೀ ಡಾ ಒಡೆಯರ ಚನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ ನೇತೃತ್ವವಹಿಸಿಕೊಂಡಿದ್ದರು. ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಚಾರ್ಯ ಮಹಾಸ್ವಾಮೀಜಿ ಸಮ್ಮುಖವನ್ನುವಹಿಸಿಕೊಂಡು ಮಾತನಾಡಿದರು.

ಸಮಾರಂಭದಲ್ಲಿ ಶ್ರೀಶೈಲ ಜಗದ್ಗುರುಗಳಿಂದ ಸಂಶೋಧಿತ ಮಹಾಪ್ರಬಂಧ ಶ್ರೀಮದ್ ಭಗವದ್ಗೀತಾ ಶ್ರೀ ಸಿಧ್ಧಾಂತ ಶಿಖಾಮಣಿ ಸಮನ್ವಯ ಗ್ರಂಥವನ್ನು ಲೋಕಾರ್ಪಣೆ ಗೊಳಿಸಲಾಯಿತು. ಸಮಾರಂಭದಲ್ಲಿ ಜ್ಞಾನೇಶನ ಹಾಡು ಹಾಗೂ ಯಡೂರು ಸಂಸ್ಕೃತ ಪಾಠಶಾಲೆಯ ಮಕ್ಕಳು ಪ್ರಸ್ತುತಪಡಿಸಿದ ರೂಪಕ ಜನಮನ ಸೆಳೆಯಿತು.

ವೇದಿಕೆ ಮೇಲೆ ಬಂಡಿಗಣಿಯ ಶ್ರೀ ದಾನೇಶ್ವರ ಸ್ವಾಮೀಜಿ, ರಾಜಶೇಖರ ಹೆಬ್ಬಾರ, ಲಲೀತಾ ಸಂಕೇಶ್ವರ, ಪ್ರಶಾಂತ ರಿಪ್ಪನಪೇಟೆ, ಎ.ಬಿ.ಪಾಟೀಲ ಸೇರಿದಂತೆ ಅನೇಕ ಗಣ್ಯರು, ವಿವಿಧ ಸ್ವಾಮೀಜಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಿ.ಜಿಮಠಪತಿ ಸ್ವಾಗತಿಸಿದರು. ಅಮರಯ್ಯಾ ಸ್ವಾಮಿ ನಿರೂಪಿಸಿ ವಂದಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button