ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಖಾನಾಪುರ ತಾಲೂಕಿನ ಹಿರೇಮುನವಳ್ಳಿಯ ಶ್ರೀ ಸಿದ್ಧಶಿವಯೋಗಿ ಶಾಂಡಿಲೇಶ್ವರ ಮಠದ ಪಾರಿಶ್ವಾಡ ಶಾಖಾ ಮಠದ ವಾಸ್ತುಶಾಂತಿ ಹಾಗೂ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ಶಾಂಡಿಲೇಶ್ವರ ಜ್ಯೋತಿ ಯಾತ್ರೆಗೆ ತಾಲೂಕಿನ ಕಕ್ಕೇರಿಯ ಬಿಷ್ಟಾದೇವಿ ದೇವಸ್ಥಾನದ ಎದುರು ಭವ್ಯ ಸ್ವಾಗತ ಕೋರಲಾಯಿತು.
ಕಕ್ಕೇರಿ ಬಿಷ್ಟಾದೇವಿ ಟ್ರಸ್ಟ್ ಸಮಿತಿ ಅಧ್ಯಕ್ಷ ಸಿ.ಬಿ. ಅಂಬೋಜಿ ಜ್ಯೋತಿ ಬರಮಾಡಿಕೊಂಡು ಶ್ರೀಗಳ ಪಾದಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಂಡಿಲೇಶ್ವರ ಮಠದ ಪೂಜಾ ಮೂರ್ತಿ ನಮ್ಮ ಗ್ರಾಮಕ್ಕೆ ಶ್ರೀಗಳ ಜೊತೆಗೆ ಆಗಮಿಸಿದ್ದು ಕ್ಷೇತ್ರದ ಸೌಭಾಗ್ಯ. ಸಮಾಜದಲ್ಲಿ ಶಾಂತಿ, ಸಹಬಾಳ್ವೆಯ ಮೂಲ ಮಂತ್ರವನ್ನು ಬಿತ್ತುತ್ತಾ ಸಾಗಿದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಎಲ್ಲ ಮಂಗಲ ಕಾರ್ಯಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಶ್ರೀ ಸಿದ್ಧಶಿವಯೋಗಿ ಶಾಂಡಿಲೇಶ್ವರ ಮೂರ್ತಿಯನ್ನು ಬೆಂಗಳೂರಿನ ಬಳಿ ಶಿವಾರ ಪಟ್ಟಣದ ಶಿಲ್ಪಿ ಭಾನುಪ್ರಕಾಶ ಪಟ್ಟೇಹಾಳ ಕೃಷ್ಣ ಕಲ್ಲಿನಲ್ಲಿ ಕೆತ್ತನೆ ಮಾಡಿದ್ದಾರೆ. ಜ್ಯೋತಿ ಯಾತ್ರೆಯು ಶ್ರೀ ಕ್ಷೇತ್ರ ಗೋಕರ್ಣದ ಸಮುದ್ರ ದಡದಲ್ಲಿರುವ ರಾಮ ಮಂದಿರದಿಂದ ಆರಂಭವಾಗಿದ್ದು, ಹಳಿಯಾಳ, ತೇರಗಾಂವ, ಮದ್ನಳ್ಳಿ, ಅಳ್ನಾವರ ಮಾರ್ಗವಾಗಿ ಖಾನಾಪುರ ತಾಲೂಕಿನ ಲಿಂಗನಮಠ, ಸುರಪುರ, ಕೇರವಾಡ, ಬೈಲೂರು, ಗಂದಿಗವಾಡ, ಇಟಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚರಿಸಿ ಪಾರಿಶ್ವಾಡದ ಮಠಕ್ಕೆ ಸಾಗಲಿದೆ. ಫೆ.೧೦ ರಂದು ನೂತನ ಮಠದ ವಾಸ್ತು ಶಾಂತಿ, ಶ್ರೀ ದೇವರ ಪ್ರಾಣ ಪ್ರತಿಷ್ಠಾಪನೆ, ಉದ್ಘಾಟನೆ ಹಾಗೂ ಗುರುಗಳ ಪಟ್ಟಾಭಿಷೇಕ, ಪೀಠಾರೋಹಣ, ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.
ವಿಜಯಕುಮಾರ ವಿಜಾಪೂರ, ಸುಜಾತಾ ಸುಣಗಾರ, ಲತಾ ವಿಜಾಪೂರ, ರಾಜೇಶ್ವರಿ ಹಿರೇಮಠ, ಈಶ್ವರ ಚವ್ಹಾಣ, ಯಲ್ಲಪ್ಪಾ, ಎಸ್.ಆರ್. ತಾರಿಹಾಳ, ಸುರಪುರ ಕೇರವಾಡ ಗ್ರಾಮದ ಪ್ರಭು ಅಡವಿಸಿದ್ಧೇಶ್ವರ ಸ್ವಾಮೀಜಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ