ಪ್ರಗತಿವಾಹಿನಿ ಸುದ್ದಿ, ಮಂಗಳೂರು – ವಿದ್ಯಾಗಮದಿಂದ ಕೊರೋನಾ ಸೋಂಕು ತಗುಲಿತ್ತೆನ್ನಲಾದ ಮೂಡಬಿದ್ರೆಯ ಶಿಕ್ಷಕಿ ಪದ್ಮಾಕ್ಷಿ ಸಾವು- ಬದುಕಿನ ನಡುವೆ ಹೋರಾಡಿ ಕೊನೆಗೂ ಕೊನೆಯುಸಿರೆಳೆದಿದ್ದಾರೆ.
ಶಿಕ್ಷಕರಾಗಿದ್ದ ಪತಿ, ಪತ್ನಿ ಇಬ್ಬರಿಗೂ ಕೊರೋನಾ ಸೋಂಕು ತಗುಲಿತ್ತು. ಇಬ್ಬರೂ ವಿದ್ಯಾಗಮ ಯೋಜನೆಯಡಿ ಪಾಠ ಮಾಡಲು ಹೋದಾಗ ಸೋಂಕು ತಗುಲಿತ್ತೆನ್ನಲಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತಿ ಕೊರೋನಾ ಗೆದ್ದು ಗುಣಮುಖರಾದರು. ಆದರೆ ಪತ್ನಿಗೆ ಕೊರೋನಾ ಗೆಲ್ಲಲಾಗಲಿಲ್ಲ.
ಪದ್ಮಾಕ್ಷಿ ದಿನವೂ 7 -8 ಕಿಮೀ ನಡೆದು ಹೋಗಿ ಪಾಠ ಮಾಡುತ್ತಿದ್ದರು. ಸೆ.29ರಂದು ಅವರಿಗೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕೊರೋನಾ ಸಂದರ್ಭದಲ್ಲಿ ರಿಸ್ಕ್ ತೆಗೆದುಕೊಳ್ಳಬೇಡಿ ಎಂದರೆ, ನಮಗೆ ಸರಕಾರ ಸಂಬಳ ಕೊಡುತ್ತದೆ. ನಮ್ಮ ಕರ್ತವ್ಯ ಮಾಡಲೇಬೇಕು. ಇದೊಂದು ದೇಶಸೇವೆಗೆ ಸಿಕ್ಕ ಅವಕಾಶ ಎನ್ನುತ್ತ ಅಪ್ಪ ಅಮ್ಮ ಇಬ್ಬರೂ ಹೋಗುತ್ತಿದ್ದರು ಎಂದು ಮಗಳು ಐಶ್ವರ್ಯ ಹೇಳುತ್ತಾಳೆ.
ನನ್ನ ಅಮ್ಮನ ಜೀವಕ್ಕೆ ಅಪಾಯವಾದರೆ ಸರಕಾರವೇ ಹೊಣೆ. 6 ಲಕ್ಷ ರೂ.ಗಳಿಗಿಂತ ಹೆಚ್ಚು ಹಣ ಖರ್ಚಾಗಿದೆ. ಹೆಚ್ಚಿನ ಚಿಕಿತ್ಸೆಗೆ ಹಣವಿಲ್ಲ ಎಂದು ಐಶ್ವರ್ಯ ಅಳಲು ತೋಡಿಕೊಂಡಿದ್ದಳು. ಇದಕ್ಕೆ ಸ್ಪಂದಿಸಿದ್ದ ಶಿಕ್ಷಣ ಸಚಿವ ಸುರೇಶ ಕುಮಾರ ಚಿಕಿತ್ಸೆಯ ವೆಚ್ಚ ಭರಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು.
ಆದರೆ ಪದ್ಮಾಕ್ಷಿ ಬದುಕುಳಿಯಲಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ