Kannada NewsKarnataka NewsLatest

ಸವದತ್ತಿಯಲ್ಲಿ ಶನಿವಾರ ಸಂಜೆ ಘಟಸ್ಥಾಪನೆ: ಮರೆಯಾದ ವೈಭವ

ಪ್ರಗತಿವಾಹಿನಿ ಸುದ್ದಿ, ಉಗರಗೋಳ(ತಾ.ಸವದತ್ತಿ): ಮಹಾಮಾರಿ ಕರೊನಾ ವೈರಸ್ ಆತಂಕದ ಮಧ್ಯೆ ಈ ಬಾರಿ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಅ.17ರಿಂದ 25ರವರೆಗೆ ಸರಳವಾಗಿ ನವರಾತ್ರಿ ಉತ್ಸವ ಜರುಗಲಿದೆ.
ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ 17ರಂದು ಸಂಜೆ 6.30 ಕ್ಕೆ ಘಟ್ಟಸ್ಥಾಪನೆ ಕಾರ್ಯಕ್ರಮ ನಡೆಯಲಿದೆ. ಒಂಭತ್ತು ದಿನಗಳ ಕಾಲ ನಿತ್ಯ ಬೆಳಗ್ಗೆ ಮತ್ತು ಸಂಜೆ ರೇಣುಕಾ ದೇವಿಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ಮತ್ತು ನೈವೇದ್ಯ ಅರ್ಪಣೆಯಾಗಲಿದೆ. ಕೋವಿಡ್ ನಿಯಂತ್ರಣ ಮಾರ್ಗಸೂಚಿ ಅನುಸಾರ ಅಧಿಕಾರಿಗಳು, ಅರ್ಚಕರು ಹಾಗೂ ಕೆಲವೇ ಗಣ್ಯರ ಸಮ್ಮುಖದಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದು ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೊಟಾರಗಸ್ತಿ ಹೇಳಿದ್ದಾರೆ.
ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಅ.31ರವರೆಗೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ. ಹಾಗಾಗಿ, ಭಕ್ತಾಧಿಗಳು ತಮ್ಮ ಮನೆಗಳಲ್ಲೇ ದೇವಿಗೆ ಪೂಜೆ ಸಲ್ಲಿಸಬೇಕು. ಭಾರತ ಬಹುಬೇಗ ಕರೊನಾ ಮುಕ್ತವಾಗಲಿ ಎಂದು ಪ್ರಾರ್ಥಿಸಬೇಕು. ಯಾವುದೇ ಕಾರಣಕ್ಕೂ ದೇವಸ್ಥಾನಕ್ಕೆ ಬರಬಾರದು ಎಂದು ಅವರು ಕೋರಿದ್ದಾರೆ.
ಕರೊನಾ ಸೋಂಕು ಹರಡುವಿಕೆ ನಿಯಂತ್ರಣ ಸಂಬಂಧ ಯಲ್ಲಮ್ಮ ದೇವಸ್ಥಾನದಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಕರ್ತವ್ಯ ನಿರ್ವಹಣೆಗಾಗಿ ದೇವಸ್ಥಾನಕ್ಕೆ ಬರುವ ಸಿಬ್ಬಂದಿಗೆ ಥರ್ಮಲ್ ಸ್ಕೀನಿಂಗ್ ಮಾಡುವ ಜತೆಗೆ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ನವರಾತ್ರಿ ಉತ್ಸವದ ಸಂದರ್ಭ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ಹೇರಿದ್ದು, ಪ್ರತಿಯೊಬ್ಬರೂ ಇದಕ್ಕೆ ಸಹಕರಿಸಬೇಕು ಎಂದು ವಿಧಾನಸಭೆ ಉಪಸಭಾಪತಿಯೂ ಆಗಿರುವ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ ಮಾಮನಿ ಮನವಿ ಮಾಡಿದ್ದಾರೆ.
ಕರೊನಾ ಸೋಂಕಿನ ಆತಂಕದ ನಡುವೆಯೂ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ಮಹಾರಾಷ್ಟ್ರದಿಂದಲೂ ಭಕ್ತರು ಯಲ್ಲಮ್ಮನಗುಡ್ಡಕ್ಕೆ ಆಗಮಿಸುತ್ತಿದ್ದಾರೆ. ದೇವಸ್ಥಾನದಿಂದ ದೂರದಲ್ಲೇ ನಿಂತು, ದೇವಿಗೆ ನಮಸ್ಕರಿಸಿ ಹೋಗುತ್ತಿದ್ದಾರೆ. ಅದಕ್ಕೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಸವದತ್ತಿ ಹಾಗೂ ಜೋಗುಳಬಾವಿ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಿದೆ. ಹತ್ತಾರು ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಿದೆ.

ಮರೆಯಾದ ವೈಭವ:

ಪ್ರತಿವರ್ಷ ಯಲ್ಲಮ್ಮನಗುಡ್ಡದಲ್ಲಿ ನಡೆಯುವ ನವರಾತ್ರಿ ಉತ್ಸವದ ಸಂಭ್ರಮ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲುತ್ತಿರಲಿಲ್ಲ. ಸಾಗರದಂತೆ ಹರಿದುಬರುತ್ತಿದ್ದ ಭಕ್ತರ ದಂಡು, ಭಕ್ತಿಯಿಂದ ದೀಪಕ್ಕೆ ಎಣ್ಣೆ ಹಾಕುತ್ತಿದ್ದ ಭಕ್ತರ ದೃಶ್ಯ ಮನ ಸೆಳೆಯುತ್ತಿದ್ದವು. ಯಲ್ಲಮ್ಮ ದೇವಸ್ಥಾನದಲ್ಲಿ ನವರಾತ್ರಿ ವೇಳೆಯೇ, 80ರಿಂದ 100 ಬ್ಯಾರೇಲ್ ಗಾಣದ ಎಣ್ಣೆ ಸಂಗ್ರಹವಾಗುತ್ತಿತ್ತು. ಸ್ಥಳೀಯ ವ್ಯಾಪಾರಸ್ಥರು ಎಣ್ಣೆ ಮಾರಾಟ ಮಾಡಿ, ಕೋಟ್ಯಂತರ ರೂ. ವ್ಯಾಪಾರ-ವಹಿವಾಟು ನಡೆಸುತ್ತಿದ್ದರು. ಆದರೀಗ, ಕರೊನಾ ವೈರಸ್‍ನಿಂದಾಗಿ ನವರಾತ್ರಿ ಉತ್ಸವದ ಸಂಭ್ರಮ ಮರೆಯಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button