ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಶ್ವಕ್ಕೆ ಮಾದರಿಯಾಗಿ ನಿಲ್ಲಬಲ್ಲ ಸಂಸ್ಕೃತಿ ಇದ್ದರೆ ಅದು ಶರಣ ಸಂಸ್ಕೃತಿ. ಹನ್ನೆರಡನೆಯ ಶತಮಾನದ ಶರಣರು ಸುಂದರ, ಸದೃಢ ಸಮಾಜ ನಿರ್ಮಾಣದಲ್ಲಿ ಕಾಯಕ ದಾಸೋಹ ಮಹತ್ವವನ್ನು ಆಚರಿಸುವ ಮೂಲಕ ಸರ್ವರಿಗೂ ಮಾರ್ಗದರ್ಶಿ ಸೂತ್ರಗಳನ್ನು ವಚನಗಳ ಮೂಲಕ ಸಮಾಜಕ್ಕೆ ನೀಡಿದ್ದಾರೆ ಎಂದು ಲೇಖಕಿ ಸುನಂದಾ ಎಮ್ಮಿ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕ ಹಾಗೂ ರಾಷ್ಟ್ರೀಯ ಬಸವಸೇನಾ ಜಿಲ್ಲಾ ಘಟಕ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಮಹಾಂತೇಶ ನಗರದ ಮಹಾಂತ ಭವನದಲ್ಲಿ ನಡೆದ ಮಾಸಿಕ ಅನುಭಾವ ಸತ್ಸಂಗ ಕಾರ್‍ಯಕ್ರಮದಲ್ಲಿ ಅವರು ಶರಣ ಸಂಸ್ಕೃತಿಯ ಉಳಿವಿನಲ್ಲಿ ಮಹಿಳೆಯರ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮೊದಲಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳಿರುತ್ತಿದ್ದವು. ಮನೆಯಲ್ಲಿರುವ ಮಹಿಳೆಯರು ಮಕ್ಕಳಿಗೆ ಶರಣ ಸಂಸ್ಕೃತಿಯ ಕುರಿತು ಅರಿವು ಮೂಡಿಸಿ ಅದರಂತೆ ನಡೆದುಕೊಳ್ಳುವಂತೆ ನೋಡಿಕೊಳ್ಳುತ್ತಿದ್ದರು. ಇಂದು ವೃದ್ಧಾಶ್ರಮಗಳು ಹೆಚ್ಚಾಗುತ್ತಿದ್ದು ಹಿರಿಯರಿಲ್ಲದ ಮನೆಗಳಾಗುತ್ತಿರುವುದು ಖೇದದ ಸಂಗತಿ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಕಡೋಲಿ ವಿರಕ್ತಮಠದ ಗುರು ಬಸವಸ್ವಾಮಿಜಿ ಮಾತನಾಡಿ, ಆಧ್ಯಾತ್ಮಿಕ ಪರಿಸರ ನಿರ್ಮಾಣದಲ್ಲಿ ಇಂಥ ಸಂಘಟನೆಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಶೈಲಜಾ ಭಿಂಗೆಯವರನ್ನು ಸನ್ಮಾನಿಸಲಾಯಿತು. ಆನಂದ ಮತ್ತು ಶ್ರೀಮತಿ ವಿದ್ಯಾ ಕರ್ಕಿ ದಂಪತಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಅರವಿಂದ ಪರುಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅನಸೂಯ ಬಸೆಟ್ಟಿ ಹಾಗೂ ವೀಣಾ ನಾಗಮೋತಿ ಪರಿಚಯಿಸಿದರು. ಅಶೋಕ ಮಳಗಲಿ ಸ್ವಾಗತಿಸಿದರು. ಶಂಕರ ಗುಡಗನಟ್ಟಿ ನಿರೂಪಿಸಿದರು.
ದೀಪಾ ತೊಲಗಿ, ಜ್ಯೋತಿ ಬದಾಮಿ, ಲಲಿತಾ ಪಾಟೀಲ, ಅಡಿವೆಪ್ಪ ಬೆಂಡಿಗೇರಿ, ಸತೀಶ ಚೌಗಲಾ, ನಿಂಗಪ್ಪ ಕಡೆಪ್ನವರ, ಡಾ. ಗೋಮಾಡಿ, ಶಂಕರ ಗುಡುಸ, ಗೀತಾ ಬೆಣಚಮರಡಿ ಮುಂತಾದವರು ಉಪಸ್ಥಿತರಿದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ಬೆಲ್ ಐಕಾನ್ ಒತ್ತಿ ಸಬ್ ಸ್ಕ್ರೈಬ್ ಆಗಿ ಮತ್ತು ನಿಮ್ಮ ಪರಿಚಿತರಿಗೆ ಶೇರ್ ಮಾಡಿ)
ಹೆಚ್ಚಿನ ಸುದ್ದಿಗಳಿಗಾಗಿ ಪ್ರಗತಿವಾಹಿನಿ ವೆಬ್ ಸೈಟ್ ಗೆ ಭೇಟಿ ನೀಡಿ – https://pragati.taskdun.com
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ