ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಬಿ.ಎನ್. ತುಕ್ಕಾರ ಸ್ಪಷ್ಟನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಲೆನಾಡಿನ ಜಿಲ್ಲೆಗಳಲ್ಲಿ ಈ ವರ್ಷ ಮಂಗನ ಕಾಯಿಲೆ ಕಂಡು ಬಂದಿದೆ. ಕಳೆದ ೨೦೧೬ನೇ ಸಾಲಿನಿಂದ ಖಾನಾಪುರ ತಾಲೂಕಿನ ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ೧೭ ಗ್ರಾಮಗಳಲ್ಲಿ ೧೬ ಮಂಗನ ಕಾಯಿಲೆ ಪ್ರಕರಣಗಳು ಕಂಡುಬಂದಿದ್ದು ಅಲ್ಲಿಂದ ಪ್ರತಿವರ್ಷ ಖಾನಾಪುರ ಪಶ್ಚಿಮ ಭಾಗದ ಹಳ್ಳಿಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಗದಿಪಡಿಸಿರುವ ಲಸಿಕೆಯನ್ನು ಪ್ರತಿ ವರ್ಷ ನೀಡಲಾಗುತ್ತಿದೆ ಎಂದು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಬಿ.ಎನ್. ತುಕ್ಕಾರ ಹೇಳಿದರು.
ಬುಧವಾರ ಕ್ಯಾಸ್ಸೂನರ್ ಕಾಡಿನ ಕಾಯಿಲೆ ಅಥವಾ ಮಂಗನ ಕಾಯಿಲೆ ಕುರಿತು ಖಾನಾಪುರ ಮತ್ತು ಕಣಕುಂಬಿಯಲ್ಲಿ ಖಾನಾಪುರ ತಹಶೀಲ್ದಾರ ಹಾಗೂ ತಾಲೂಕಾ ದಂಡಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಇವರ ಅಧ್ಯಕ್ಷತೆಯಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ಅರಣ್ಯ ತಾಲೂಕಾ ಪಂಚಾಯತ್, ಪಶುಸಂಗೋಪನೆ ಹಾಗೂ ವಿವಿಧ ಇಲಾಖೆಗಳ ಸಮನ್ವಯ ಸಮಿತಿಯ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.
ಈ ವರ್ಷ ನಮ್ಮ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಹಲಸಿ, ಅಶೋಕ ನಗರ, ಕಣಕುಂಬಿ, ಲೋಂಡಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಸತತ ಎಂಟು ಹತ್ತು ದಿನಗಳವರೆಗೆ ಬಿಡದೆ ಬರುವ ಜ್ವರ, ವಿಪರೀತ ತಲೆನೋವು, ಸೊಂಟ ನೋವು, ಕೈಕಾಲು ನೋವು, ನಿಶಕ್ತಿ, ಕಣ್ಣು ಕೆಂಪಾಗುವುದು, ಜ್ವರ ಬಂದ ಎರಡು ವಾರದ ನಂತರ ಮೂಗು, ಬಾಯಿ, ಗುದದ್ವಾರದಿಂದ ರಕ್ತ ಸ್ರಾವವಾಗಬಹುದು. ಸಂಧಿವಾತ, ಮೆದುಳಿನ ಹೊದಿಕೆಯ ಜ್ವರ ಲಕ್ಷಣಗಳು, ರೋಗದ ತೀವ್ರತೆಯು ರೋಗಿಯ ಪ್ರತಿರೋಧಕ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತವೆ ಎಂದು ತಿಳಿಸಿದರು.
ರೋಗದ ಲಕ್ಷಣಗಳಿದ್ದರೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಲು ತಿಳಿಸಿದರು. ವಾಸಸ್ಥಳದ ಹತ್ತಿರ ಮಂಗಗಳು ಮರಣ ಹೊಂದಿದರೆ ತಕ್ಷಣ ಅರಣ್ಯ ಇಲಾಖೆ, ಪಶು ಸಂಗೋಪನೆ ಇಲಾಖೆ, ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಇಂಥ ಪ್ರಕರಣಗಳು ಕಂಡು ಬರುವ ಕಾಡು ಮತ್ತು ಪ್ರದೇಶಗಳಲ್ಲಿ ಸಂಚರಿಸುವಾಗ ಮೈತುಂಬಾ ಬಟ್ಟೆ ಧರಿಸಿಕೊಳ್ಳಬೇಕು. ಇಲಾಖೆಯಿಂದ ಪೂರೈಸಿದ ಡಿಎಮ್.ಪಿ ತೈಲ ಲೇಪಿಸಿಕೊಳ್ಳಬೇಕು. ಅರಣ್ಯ ಪ್ರದೇಶಗಳಿಂದ ಮರಳಿ ಬಂದಾಗ ಬಿಸಿನೀರಿನಿಂದ ಸ್ನಾನ ಮಾಡಬೇಕು ಮತ್ತು ಬಟ್ಟೆಯನ್ನು ಬಿಸಿನೀರಿನಿಂದ ತೊಳೆಯಬೇಕೆಂದು ಅವರು ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದರು.
ಕಾಯಿಲೆಗೆ ಲಸಿಕೆ ಲಭ್ಯವಿದ್ದು ತಾಲೂಕು ಮತ್ತು ಜಿಲ್ಲಾಡಳಿತದಿಂದ ನಿಗದಿಪಡಿಸಿರುವ ಗ್ರಾಮಗಳಲ್ಲಿ ತಪ್ಪದೇ ಲಸಿಕೆಯನ್ನು ಪಡೆಯಬೇಕು. ಲಸಿಕೆಯಿಂದ ಯಾವುದೇ ದುಷ್ಪರಿಣಾಮಗಳು ಇರುವುದಿಲ್ಲ. ಗರ್ಭಿಣಿಯರು ಲಸಿಕೆಯನ್ನು ಹಾಕಿಸಿಕೊಳ್ಳಬಾರದು ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಖಾನಾಪೂರ ತಹಶೀಲ್ದಾರ ಹಾಗೂ ತಾಲೂಖಾ ದಂಡಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಮಾತನಾಡಿ, ಎಲ್ಲ ಇಲಾಖೆಗಳು ಸಮನ್ವತೆಯಿಂದ ಕಾಯಿಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಕೀಟಜನ್ಯ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಂ.ಎಸ್. ಪಲ್ಲೇದ, ಖಾನಾಪುರರ ತಾಲೂಕಾ ಆರೋಗ್ಯಾಧಿಕಾರಿ ಡಾ. ಸಂಜೀವ ನಾಂದ್ರೆ, ಆರ್‌ಎಫ್‌ಓ ಬಸವರಾಜ ವಾಳದ, ಆರ್‌ಎಫ್‌ಓ ರತ್ನಾಕರ ಸೈಬನ್ನವರ ಹಾಗೂ ಎನ್‌ಜಿಓ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ