Latest

ನಿಮಗೆ ಕೋಪ ಬರುತ್ತಾ? ಇದನ್ನು ಓದಿ

ಕೋಪ ನಿರ್ವಹಣೆಗೆ ಸರಳ ಸೂತ್ರಗಳು

  ಜಯಶ್ರೀ ಜೆ. ಅಬ್ಬಿಗೇರಿ  

ಸಾಮಾನ್ಯವಾಗಿ ಎಲ್ಲರೂ ಕೂತು ಏನೋ ಒಂದು ವಿಷಯ ಚರ್ಚಿಸುವಾಗ ಎಲ್ಲರ ಅಭಿಪ್ರಾಯಗಳು ಒಂದೇ ತರನಾಗಿರುವುದಿಲ್ಲ. ಒಂದೇ ರೀತಿಯಾಗಿ ಇರಬೇಕೆಂತಲೂ ಇಲ್ಲ. ಕೆಲವರಿಗೆ ನಮ್ಮ ಮಾತು ಕೋಪ ತರಿಸುತ್ತದೆ. ಅದನ್ನು ಶೀಘ್ರವಾಗಿಯೇ ತಮ್ಮ ಮಾತಿನ ಮೂಲಕ ಇಲ್ಲವೇ ನಡತೆಯ ಮೂಲಕ ತೋರಿಸುತ್ತಾರೆ. ಅದೆಷ್ಟೋ ಎತ್ತರಕ್ಕೆ ಏರಿದವನಿಗೂ ಅದೇಕೋ ಈ ಕೋಪ ಹಲವಾರು ಸಂದರ್ಭಗಳಲ್ಲಿ ಕೆಳಕ್ಕೆ ತಳ್ಳಿಬಿಡುತ್ತದೆ. ಆ ಮನುಷ್ಯ ತುಂಬಾ ಒಳ್ಳೆಯವನು. ಆದರೆ ಯಾವಾಗ ಸಿಟ್ಟಿಗೇಳುತ್ತಾನೋ ತಿಳಿಯದು. ಸಿಟ್ಟು ಬಂದಾಗ ಮಾತ್ರ ಆತನನ್ನು ತಡೆಯಲಾಗದು. ಅಯ್ಯೋ! ಇಷ್ಟು ಸಣ್ಣ ವಿಷಯಕ್ಕೆ ನಾನು ಇಷ್ಟೊಂದು ದೊಡ್ಡ ರಂಪಾಟ ಮಾಡಬಾರದಿತ್ತು. ಎಲ್ಲರ ಮುಂದೆ ಎಷ್ಟೊಂದು ಅಸಹ್ಯವಾಯಿತು. ಸಿಟ್ಟಿನಲ್ಲಿ ಕೊಯ್ದುಕೊಂಡ ಮೂಗು ಮತ್ತೆ ಬರುವುದೇ ಎನ್ನುವಂತಾಯಿತು. ಬಹಳ ಸಲ ಪಿತ್ತ ನೆತ್ತಿಗೇರಿಸಿಕೊಂಡು ಕೈಗೆ ಸಿಕ್ಕ ವಸ್ತುಗಳನ್ನು ಒಡೆದು ಹಾಕಿದ್ದು ನೋಡಿದರೆ ಹುಚ್ಚು ಎನಿಸುತ್ತದೆ. ಇವೆಲ್ಲ ಕೋಪದ ಬಗೆಗಿರುವ ಸಾಮಾನ್ಯ ಹೇಳಿಕೆಗಳು. ಸಿಟ್ಟಿನಿಂದಾಗುವ ಅವಾಂತರಗಳು ಒಂದಾ ಎರಡಾ? ಕೆಲವೊಮ್ಮೆ ಪ್ರಜ್ಞೆ ಕಳೆದುಕೊಂಡಂತಿರುವ, ಜೀವಕ್ಕೆ ಕುತ್ತು ತಂದಿರುವ ಜೀವ ಹಾನಿಯಾಗಿರುವ ಘಟನೆಗಳೂ ನಡೆದಿವೆ. ಹಾಗಾದರೆ ಕೋಪ ಎನ್ನುವುದು ದೊಡ್ಡ ಪ್ರಮಾಣದಲ್ಲಿ ಹಾನಿಕಾರಕ. ಸಣ್ಣ ಪುಟ್ಟದ್ದಕ್ಕೂ ಅತಿಯಾಗಿ ರೇಗುವ ಸ್ವಭಾವ ರಕ್ತದೊತ್ತಡವನ್ನು ಬಾನೆತ್ತರಕ್ಕೆ ಚಿಮ್ಮಿಸುತ್ತದೆ. ಕೋಪಕ್ಕೆ ವಯಸ್ಸಿನ ಮಿತಿ ಇಲ್ಲ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಾಣಿಸಿಕೊಳ್ಳುತ್ತದೆ. ಕೋಪ ಹೊರ ಚಿಮ್ಮುವ ವಿಧಾನ ಬೇರೆ ಬೇರೆಯಾಗಿರಬಹುದು. ಹರೆಯ, ಯೌವ್ವನದಲ್ಲಿ ಉಗುಳುವ ರೋಷದುಂಡೆಗಳನ್ನು ತಡೆಯುವುದು ಬಲು ಕಷ್ಟಕರ. ಅನಿಯಂತ್ರಿತ ಕೋಪವು ಆರೋಗ್ಯವನ್ನು ಮತ್ತು ಮಧುರ ಸಂಬಂಧಗಳನ್ನು ಹಾಳುಗೆಡುವುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.  ಕೋಪ ನಿಯಂತ್ರಿಸುವುದು ಹೇಗೆ ತಿಳಿಯುತ್ತಿಲ್ಲ. ಎಂಬುದು ಬಹತೇಕ ಜನರ ಮನದ ಅಳಲು. ಹಾಗಾದರೆ ಕೋಪ ನಿರ್ವಹಣೆಯು ಎಲ್ಲರಿಗೂ ಸವಾಲಾಗಿ ಕಾಣುತ್ತದೆ. ಅದರ ನಿಯಂತ್ರಣಕ್ಕೆ  ಕೆಲವು ಸರಳ ಸಲಹೆಗಳನ್ನು ನೋಡೋಣ ಬನ್ನಿ.

ಯೋಚಿಸಿ

‘ನೀನು ಯೋಚನೆ ಮಾಡದೇ ಹೇಳುವ ಒಂದೊಂದು ಮಾತು ನಿನ್ನನ್ನು ಒಂದೊಂದು ನಿಮಿಷ ಯೋಚಿಸುವಂತೆ ಮಾಡುತ್ತದೆ’ ಎಂದಿದ್ದಾರೆ ವಿವೇಕಾನಂದರು. ‘ಅನುಪಯುಕ್ತ ಕೋಪ ಕ್ಷಿಪ್ರ ಸಾವಿದ್ದಂತೆ’ ಎನ್ನುತ್ತಾರೆ ಪ್ರಾಜ್ಞರು. ಯಾವುದೇ ವಿಷಯದಲ್ಲಿ ನಿಮ್ಮ ವಿಚಾರಗಳನ್ನು ವ್ಯಕ್ತಪಡಿಸುವಾಗ ಆಲೋಚಿಸದೇ ತಟ್ಟನೇ ಹೊಳೆದಿದ್ದನ್ನು ಹೇಳಿಬಿಡಬೇಡಿ. ನಿಮ್ಮ ಕೋಪವನ್ನು ವ್ಯಕ್ತಪಡಿಸಿ, ಆದರೆ ಸರಿಯಾದ ರೀತಿಯಲ್ಲಿ, ಸಮಸ್ಯೆಯನ್ನುಂಟು ಮಾಡದ ರೀತಿಯಲ್ಲಿ ವ್ಯಕ್ತಪಡಿಸಿ. ಮಾತನಾಡುವ ಮುನ್ನ ಯೋಚಿಸಲು ಕೆಲ ಸಮಯ ತೆಗೆದುಕೊಳ್ಳಿ. ಸಂಪೂರ್ಣವಾಗಿ ಯೋಚಿಸಿ ನಿಮ್ಮ ವಿಚಾರವನ್ನು ವ್ಯಕ್ತಪಡಿಸಿ. ಇತರರು ತಮ್ಮ ವಿಚಾರಗಳನ್ನು ಹೇಳುವಾಗ ತಡೆಯಬೇಡಿ. ಪೂರ್ಣವಾಗಿ ಆಲಿಸಿ ನಂತರ ನಿಮಗೆ ಸೂಕ್ತವಾದುದನ್ನು ತಿಳಿಸಿ. ಒಂದು ವೇಳೆ ಬೇರೆಯವರ ಮಾತುಗಳು ಇಲ್ಲವೇ ನಡತೆ ನಿಮಗೆ ಸಿಟ್ಟು ತರುತ್ತಿದ್ದರೆ ಹತಾಶರಾಗದೇ ದೃಢ ಮಾತುಗಳಲ್ಲಿ ಅವರಿಗೆ ನೋವಾಗದಂತೆ ಹೇಳಲು ಪ್ರಯತ್ನಿಸಿ. ಕಾಳಜಿ ಮತ್ತು ಅಗತ್ಯಗಳನ್ನು ಸ್ಪಷ್ಟವಾಗಿ ಮತ್ತು ನೇರವಾಗಿ ತಿಳಿಸಿ. ಇದರಿಂದ  ಕೋಪ ತಾಪದ ಮಾತುಗಳನ್ನು ನಿಯಂತ್ರಸಲು ಸಹಕಾರಿ.

ವ್ಯಾಯಾಮ

ಸಮಯ ನೋಡಲೂ ಸಮಯವಿಲ್ಲ. ತಿನ್ನೋದಕ್ಕೆ ಉಣ್ಣೋದಕ್ಕೆ ಯಾವುದಕ್ಕೂ ಪುರುಸೊತ್ತಿಲ್ಲ. ಎಲ್ಲ ಸಂದರ್ಭಗಳಲ್ಲೂ ಒತ್ತಡ ಮುಖದ ಎದುರು ಮುಖ ಕೊಟ್ಟು ನಮ್ಮನ್ನು ಇನ್ನಿಲ್ಲದಂತೆ ಸತಾಯಿಸುತ್ತಿರುವಾಗ ವಿರಾಮ ವ್ಯಾಯಾಮಕ್ಕೆ ಸಮಯವೆಲ್ಲಿ ಎಂಬ ಗೊಣಗಾಟದ ಮಾತುಗಳೇ ಎಲ್ಲೆಲ್ಲಿ ಕೇಳಿ ಬರುತ್ತವೆ. ಅಂಥದ್ದರಲ್ಲಿ  ಕೆಲಸದ ಮಧ್ಯೆ  ಚಿಕ್ಕ ಚಿಕ್ಕ ವಿರಾಮಗಳು ಶಾಂತ ಸಮಯದ ಕೆಲ ಕ್ಷಣಗಳು ಕಿರಿ ಕಿರಿಯನ್ನು ತಡೆಯುತ್ತವೆ. ‘ತೋಟಗಾರನು ಗಿಡದ ರೆಂಬೆಗಳನ್ನು ತರಿಯವಿಕೆಯಿಂದ ಹೇಗೆ ರೆಂಬೆಗಳು ದೃಢವಾಗಿ ಬೆಳೆಯುವಂತೆ ಹಾಗೆಯೇ ನಾವೂ ಸಹ ಅನವಶ್ಯಕ ಕಾರ್ಯ ನಿಲ್ಲಿಸಿ ಕೆಲ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕು.’ ಶಾಂತ ರೀತಿಯಲ್ಲಿ ಸನ್ನಿವೇಶಗಳನ್ನು ನಿಭಾಯಿಸಲು ಉತ್ತಮವಾಗಿ ಸಿದ್ಧವಾಗಿರುವಂತೆ ಸಹಕರಿಸುತ್ತದೆ. ಹೂವಿಗೆ ನೀರಿದ್ದಂತೆ ನಮ್ಮ ಹೃದಯಕ್ಕೆ ತಾಳ್ಮೆ. ನಿಮಗೆ ತಾಳಿಕೊಳ್ಳಲು ಸಾಧ್ಯವಾದರೆ ನಿಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಬಲ್ಲಿರಿ. ದೈಹಿಕ ವ್ಯಾಯಾಮ ಕೋಪಕ್ಕೆ  ಕಾರಣವಾಗಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ದೈಹಿಕ ಚಟುವಟಿಕೆಗಳು ಹೆಚ್ಚಿದ್ದಷ್ಟು ಮನಸ್ಸು ಉಲ್ಲಸದಿಂದ ಕೂಡಿರುತ್ತದೆ. ನಿತ್ಯ ಅರ್ಧ ತಾಸು ಬಿರುಸಾದ ನಡಿಗೆ ಇಲ್ಲವೇ ಓಟ ಜಾಗಿಂಗ್ ಒಳ್ಳೆಯದು. ಯೋಗ ಇಲ್ಲವೇ ಇತರೆ ದೈಹಿಕ ವ್ಯಾಯಾಮ ಸಾಧ್ಯವಾಗುತ್ತಿಲ್ಲವೆಂದರೆ ನಿಯಮಿತ ವಾಕಿಂಗ್ ಮಾಡುವುದು ಸೂಕ್ತ.

ಪರಿಹಾರ ಸೂಚಿಸಿಕೊಳ್ಳಿ

‘ನಿಮ್ಮೆಲ್ಲ ಒತ್ತಡಗಳಿಗೂ ನೀವು ಪ್ರತಿಕ್ರಿಯಿಸುವ ಬಗೆಯೇ ಕಾರಣ. ಆದ್ದರಿಂದ ಸ್ಪಂದಿಸಲು ಕಲಿಯಿರಿ. ಪ್ರತಿಕ್ತಿಯಿಸಬೇಡಿ.’ ಇದು ಬುದ್ಧನ ಕಿವಿಮಾತು. ಮನೆಯಲ್ಲಿರಬಹುದು  ಕೆಲಸ ಮಾಡುವ ಸ್ಥಳದಲ್ಲಿರಬಹುದು ಇಲ್ಲವೇ ಗೆಳೆಯರ ಬಂಧು ಬಾಂಧವರ ಯಾವ ವರ್ತನೆಗಳಲ್ಲಿರಬಹುದು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತವೆ ಮತ್ತು ಕೋಪ ತರಿಸುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಿ ಪಟ್ಟಿ ಮಾಡಿಕೊಂಡು ಅದಕ್ಕೆ ನಿಮ್ಮದೇ ಆದ ಸೂಕ್ತ ಪರಿಹಾರ ಕಂಡುಕೊಳ್ಳುವುದು ಒಳಿತು. ನಿರ್ಲಕ್ಷ್ಯವಹಿಸಿದರೆ ನಡೆಯುತ್ತದೆ ಎನ್ನುವ ವಿಷಯಗಳನ್ನು ಉದಾಸೀನತೆಯಿಂದ ದೂರವಿರುಸುವುದು ಜಾಣತನ. ಬಾಯಲ್ಲಿ ಮಧುವನ್ನು ಹೊಂದಿರುವ ಜೇನು ತನ್ನ ಬಾಲದಲ್ಲಿ ಮುಳ್ಳನ್ನು ಹೊಂದಿದೆ. ಹಾಗೆಯೇ ಬೇಲಿಯಿಲ್ಲದ ನಡತೆಗಳು ಮನೋಭಾವಕ್ಕೆ ನೋವನ್ನುಂಟು ಮಾಡುತ್ತಿದ್ದರೆ, ರೇಜಿಗೆಬ್ಬಿಸುತ್ತಿದ್ದರೆ  ನಿರ್ದಾಕ್ಷಿಣ್ಯವಾಗಿ ನೇರವಾಗಿ ಪ್ರಾಮಾಣಿಕವಾಗಿ ಹೇಳಿಬಿಡುವುದು ಒಳ್ಳೆಯ ಅಭ್ಯಾಸ. ಕೋಪದ ಸನ್ನಿವೇಶಗಳಲ್ಲಿ ಆ ಜಾಗವನ್ನು ತೊರೆಯುವುದು, ನೀರು ಕುಡಿಯುವುದು, ಒಂದರಿಂದ ಹತ್ತು ಅಂಕಿಯನ್ನು ಎಣಿಸುವುದು ಆಳವಾಗಿ ಉಸಿರೆಳೆದುಕೊಳ್ಳುವುದು ಹೀಗೇ ತಕ್ಷಣಕ್ಕೆ ಮನಸ್ಸನ್ನು ಬೇರೆ ಚಟುವಟಿಕೆಗಳಲ್ಲಿ ತೊಡಗಿಸುವುದು ಉತ್ತಮ ಪರಿಹಾರ. ಕೋಪ ತರಿಸಿದವರಿಗೆ ಇಮೇಲ್ ಬರೆಯುವುದು ನಂತರ ಅಳಿಸಿ ಬಿಡುವುದು. ಅವರು ನಿಮಗೆ ಮಾಡಿದ ಒಳ್ಳೆಯ ಸಂಗತಿಗಳನ್ನು ನೆನಪಿಸಿಕೊಳ್ಳುವುದು. ಹಲವರು ತಮಾಷೆಯಾಗಿ ನಡೆದುಕೊಳ್ಳುವುದನ್ನು ಗಂಭೀರವಾಗಿ ಪರಿಗಣಿಸಿದಿರಿ. ಹಾಸ್ಯ ಮನೋಲೋಕವನ್ನು ಆಹ್ಲಾದವಾಗಿಸುತ್ತದೆ. ನೀವೂ ಹಾಸ್ಯ ರೀತಿಯಲ್ಲಿ ನಡೆದುಕೊಳ್ಳಬಹುದು. ಆದರೆ ವ್ಯಂಗ್ಯ ಭಾವನೆಗಳನ್ನು ನೋಯಿಸುತ್ತದೆ. ವಿಷಯವನ್ನು ಇನ್ನಷ್ಟು ಹದಗೆಡಿಸುತ್ತದೆಂಬುದು ನೆನಪಿನಲ್ಲಿರಲಿ. ಹಾಸ್ಯಮಯವಾಗಿ ಮಾತನಾಡುತ್ತ ಮನದ ಬೇಗುದಿಯನ್ನು ಹೊರ ಹಾಕುವುದು ಅತ್ಯುತ್ತಮ ಪರಿಹಾರ.

ಸಕಾರಾತ್ಮಕ ಹೇಳಿಕೆ ಬಳಸಿ

ಸಿಟ್ಟಿನ ಭರದಲ್ಲಿ ಟೀಕಿಸಿದರೆ ದೂಷಿಸಿದರೆ ಮುಂದಿನವರನ್ನು ನಾವೇ ಕೋಪದ ಅಖಾಡಕ್ಕೆ ಆಹ್ವಾನಿಸಿದಂತಾಗುತ್ತದೆ. ತೆಗಳುವುದಕ್ಕಿಂತ ಸಕಾರಾತ್ಮಕ ಹೇಳಿಕೆಗಳನ್ನು ಬಳಸಿ. (‘ಮನೆಗೆಲಸದಲ್ಲಿ ನೀವು ಸಹಾಯ ಮಾಡಿದರೆ ಸಮಯಕ್ಕೆ ಸರಿಯಾಗಿ ಆಫೀಸಿಗೆ ಹೋಗಬಹುದು.’ ‘ನೀವು ವೀಕ್ಷಿಸುವ ಕಾರ್ಯಕ್ರಮ ಚೆನ್ನಾಗಿದೆ. ಆದರೆ ಮಕ್ಕಳು ಓದುತ್ತಿದ್ದಾರೆ, ಟಿವಿ ವ್ಯಾಲ್ಯೂಮ್ ಕಡಿಮೆಗೊಳಿಸಿ.’)  ಮೆಲುಧ್ವನಿಯಲ್ಲಿ ಸ್ಪಷ್ಟವಾಗಿ ಗೌರವಯುತವಾಗಿ ಹೇಳಿ. ಈ ವಿಧಾನ ಅಗಾಧವಾದ ಪರಿಣಾಮ ತರುವುದು. ನಿನ್ನ ವಯಸ್ಸಿನಲ್ಲಿ ನಾನು ಹಾಗೆ ಮಾಡಿದ್ದೆ ಹೀಗೆ ಮಾಡಿದ್ದೆ ಎಂದು ನಿಮಗೆ ಮಕ್ಕಳನ್ನು ಹೋಲಿಸಿ ಬೈದು ವಿನಾಕಾರಣ ರೇಜಿಗೆದ್ದರೆ ಮನಸ್ತಾಪಕ್ಕೆ ನಾವೇ ದಾರಿ ತೋರಿದಂತೆ. ಪ್ರತಿಯೊಬ್ಬರ ಬೆರಳಿನ ಗುರುತುಗಳು ಹೇಗೆ ಭಿನ್ನವಾಗಿರುವಂತೆ ಪ್ರತಿಯೊಬ್ಬರಲ್ಲಿಯ ಪ್ರತಿಭೆಗಳು ಭಿನ್ನವಾಗಿವೆ. ಆಸಕ್ತಿ ಅಭಿರುಚಿಗಳು ವಿಭಿನ್ನವಾಗಿವೆ ಎನ್ನುವ ಮೂಲ ಅಂಶಗಳನ್ನು ತಿಳಿದು ಇತರರ ಆಸಕ್ತಿ ಅಭಿರುಚಿಗಳನ್ನು ತಿಳಿದು ನಡೆದರೆ ಕೋಪದ ದಳ್ಳುರಿಯಲ್ಲಿ ಬೇಯದೇ, ಬೆಸುಗೆ ಗಟ್ಟಿಯಾಗುತ್ತದೆ.

ಕ್ಷಮಿಸಿ

ಮುಳ್ಳನ್ನು ಮುಳ್ಳಿನಿಂದ ತೆಗೆಯಬಹುದು. ಆದರೆ ಕೆಸರನ್ನು ಕೆಸರಿನಿಂದ ತೊಳೆಯಲುಬಾರದು. ಅದೇ ರೀತಿಯಲ್ಲಿ ಸಿಟ್ಟನ್ನು ಸಿಟ್ಟಿನಿಂದ ಕಡಿಮೆ ಮಾಡಲಾಗದು. ಕೋಪಕ್ಕೆ ಕೋಪವೆಂದೂ ಉತ್ತರವಾಗಲಾರದು. ಅಚಾನಕ್ಕಾಗಿ ಬಂದ ಕೋಪದ ನುಡಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಸಾಧಿಸಿದರೆ ನಮ್ಮ ಆರೋಗ್ಯಕ್ಕೆ ಹಾನಿ. ದ್ವೇಷ ಒಂದು ದುಬಾರಿ ವಸ್ತು. ಅದು ಬೆಂಕಿಯಂತೆ ನಮ್ಮನ್ನು ಸುಡುತ್ತದೆ. ಕ್ಷಮಿಸುವ ಗುಣ ನಮ್ಮದಾದರೆ ಪರಿಸ್ಥಿತಿ ತಿಳಿಗೊಳ್ಳುವುದು. ಅದಲ್ಲದೇ ಸಂಬಂಧವೂ ಬಲಗೊಳ್ಳುವುದು. ಇತರರು ನೀವು ನಿರೀಕ್ಷಿಸಿದಂತೆ ನಡೆದುಕೊಳ್ಳದೇ ನಿಮ್ಮ ಮನಸ್ಸಿಗೆ ನೋವು ಉಂಟು ಮಾಡಿರುವ ಘಟನೆಗಳನ್ನು ಕೂಡಿಟ್ಟುಕೊಳ್ಳಬೇಡಿ. ಅದು ಒಮ್ಮಿಲ್ಲೊಮ್ಮೆ ಸಿಟ್ಟು ಸ್ಪೋಟಗೊಳ್ಳುವಂತೆ ಮಾಡುತ್ತದೆ. ಆದ್ದರಿಂದ ಆಗಾಗ ನಿಮಗಾದ ನೋವನ್ನು ತಾಳ್ಮೆಯಿಂದ ತಿಳಿ ಹೇಳಿ. ಇದರಿಂದ ಮುಂದಿನವರ ನಡತೆಯಲ್ಲಿ ಬದಲಾವಣೆಯನ್ನು ಕಾಣಬಹುದು. ಬದಲಾವಣೆ ಕಾಣದಿದ್ದರೆ ಯಾವ ವಿಷಯದಲ್ಲಿ ನಿಮಗೆ ಅವರಿಗೆ ಆಗಿ ಬರುತ್ತಿಲ್ಲವೋ ಆ ವಿಷಯಗಳಲ್ಲಿ ಮಾತ್ರ  ಮಾತಿನ ವಿನಿಮಯ ನಿಲ್ಲಿಸುವುದು ಆರೋಗ್ಯಕರ ಮಾರ್ಗ.

ತಾಳ್ಮೆಯ ಹನಿ

ಮನಸ್ಸೆಂಬುದು ಭಾವನೆಗಳ ಕಾರ್ಖಾನೆ. ಅಲ್ಲಿ ಉತ್ಪಾದನೆಯಾಗುವ ಎಲ್ಲ ಭಾವನೆಗಳನ್ನೂ ಹೊರ ಚಿಮ್ಮಲು ಮಾರ್ಗಗಳು ಬೇಕೇ ಬೇಕು. ಕೋಪದಂಥ ನಕಾರಾತ್ಮಕ ಭಾವವನ್ನು ಹೊರ ಚಿಮ್ಮಲು ಕಿರು ದಾರಿಗಳನ್ನು ಹುಡುಕಿಕೊಳ್ಳುವುದು ಅನಿವಾರ್ಯ. ಹುಡುಕಿಕೊಳ್ಳದಿದ್ದರೆ ಸಿಟ್ಟಿನ ಪರಿಣಾಮ ಬದುಕಿನ ಕೊನೆಯ ತನಕವೂ ಮರೆಯಬೇಕೆಂದರೂ ಬಿಡದೇ ಬೆನ್ನು ಬೀಳುತ್ತದೆ. ‘ಒಂದು ಕ್ಷಣದ ಸಿಟ್ಟಿನಿಂದ ಪಾರಾದರೆ, ನಾಲ್ಕು ದಿನಗಳ ದುಃಖದಿಂದ ಪಾರಾದಂತೆ.’ ಇದು ವಿವೇಕಾನಂದರ ವಿವೇಕಯುತ ನುಡಿ. ಈ ನುಡಿಯಂತೆ ಕೋಪದಲ್ಲಿದ್ದಾಗ ಒಂದು ಕ್ಷಣ ತಾಳ್ಮೆ ವಹಿಸಿದರೆ ನೆಮ್ಮದಿಯ ನಗು ನಮ್ಮನ್ನು ಬರಮಾಡಿಕೊಳ್ಳುವುದು.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button