Kannada NewsKarnataka NewsLatest

ತಾಪಂ ಕಾರ್ಯಾಲಯ ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

 ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ಜನೇವರಿ ಒಳಗೆ ಮೂಡಲಗಿಗೆ ಎಲ್ಲ ಸರ್ಕಾರಿ ಕಛೇರಿಗಳನ್ನು ಹಂತ-ಹಂತವಾಗಿ ಆರಂಭಿಸಲು ಪ್ರಯತ್ನಿಸುವುದಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಮೂಡಲಗಿಯ ನೂತನವಾಗಿ ತಹಶೀಲ್ದಾರ ಕಛೇರಿ ಹತ್ತಿರ ಆರಂಭಿಸಲಾದ ತಾಲೂಕ ಪಂಚಾಯತ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೂಡಲಗಿ ಹೊಸ ತಾಲೂಕು ಆದ ನಂತರ ಈಗಾಗಲೇ ತಹಶೀಲ್ದಾರ ಕಾರ್ಯಾಲಯವನ್ನು ಪ್ರಾರಂಭಿಸಲಾಗಿದೆ. ಸಿಡಿಪಿಓ ಕಛೇರಿ ಕೂಡ ಕಾರ್ಯಾರಂಭವಾಗಿದೆ. ಈಗ ತಾಲೂಕಾ ಪಂಚಾಯತ ಕಛೇರಿ ಉದ್ಘಾಟನೆಯಾಗಿದೆ. ಮುಂದಿನ ದಿನಗಳಲ್ಲಿ ಮೂಡಲಗಿ ತಾಲೂಕಿಗೆ ಅಗತ್ಯವಿರುವ ಎಲ್ಲ ಸರ್ಕಾರಿ ಕಛೇರಿಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಮೂಡಲಗಿ ತಾಲೂಕಿನ ಅಭಿವೃದ್ಧಿಗೋಸ್ಕರ ಸರ್ಕಾರದ ವಿವಿಧ ಯೋಜನೆಗಳಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಮೂಡಲಗಿ ಪುರಸಭೆಯ ಪ್ರಗತಿಗಾಗಿಯೂ ಸಹ ಹೆಚ್ಚಿನ ಅನುದಾನ ತರಲು ಪ್ರಯತ್ನಿಸಲಾಗುವುದು. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಆಡಳಿತಾತ್ಮಕವಾಗಿ ಹೆಚ್ಚಿನ ಅನುಕೂಲವಾಗಲಿದೆ. ಜೊತೆಗೆ ಆರ್ಥಿಕ ನೆರವು ಸಹ ಒದಗಿಬರಲಿದೆ. ಅಭಿವೃದ್ಧಿಯಲ್ಲಿ ಎಲ್ಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಪಕ್ಷಾತೀತವಾಗಿ ಕೆಲಸ ಮಾಡುವ ಭರವಸೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೀಡಿದರು.
ಈ ಸಂದರ್ಭದಲ್ಲಿ ತಾಪಂ ಇಓ ಬಸವರಾಜ ಹೆಗ್ಗನಾಯಿಕ, ತಹಶೀಲ್ದಾರ ಡಿ.ಜೆ. ಮಹಾತ, ಜಿಪಂ ಸದಸ್ಯರಾದ ಗೋವಿಂದ ಕೊಪ್ಪದ, ವಾಸಂತಿ ತೇರದಾಳ, ಮೂಡಲಗಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಬಸವಂತ ಕಮತಿ, ಮುತ್ತೆಪ್ಪ ಕುಳ್ಳೂರ, ರವಿ ಪರುಶೆಟ್ಟಿ, ಪುರಸಭೆ ಸದಸ್ಯರು, ತಾಪಂ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button