ವಿಟಿಯು ವಿಭಜನೆ ತಡೆಯುವ ತಾಕತ್ತಿಲ್ಲವೇ ನಮ್ಮ ಸಂಸದರು, ಶಾಸಕರಿಗೆ?
ವಿಟಿಯು ವಿಭಜನೆ ಕೈಬಿಡಿ, ಇಲ್ಲವೇ ರಾಜೀವ ಗಾಂಧಿ ವಿವಿಯನ್ನೂ ವಿಭಜಿಸಿ ಕೊಡಿ
ಎಂ.ಕೆ.ಹೆಗಡೆ, ಪ್ರಗತಿವಾಹಿನಿ, ಬೆಳಗಾವಿ
ಉತ್ತರ ಕರ್ನಾಟಕಕ್ಕೆ ತಾರತಮ್ಯವಾಗಿರುವುದನ್ನು ಹೋಗಲಾಡಿಸಲು ಈ ಭಾಗಕ್ಕೆ ಕಚೇರಿಗಳನ್ನು ಸ್ಥಳಾಂತರಿಸಬೇಕೆನ್ನುವ ಒತ್ತಡದ ಮಧ್ಯೆಯೇ ಇರುವ ಕಚೇರಿಗಳನ್ನೂ ಒಂದೊಂದಾಗಿ ಇಲ್ಲಿಂದ ಎತ್ತಿಕೊಂಡು ಹೋಗಲಾಗುತ್ತಿದೆ.
ಇಲ್ಲಿನ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಪತ್ರಿಕಾ ಹೇಳಿಕೆ ಕೊಡುವುದಕ್ಕೆ ಸೀಮಿತವಾಗದೆ, ಪಕ್ಷಭೇದ ಮರೆತು ಹೋರಾಟಕ್ಕಿಳಿಯದಿದ್ದರೆ ಬೆಳಗಾವಿಯನ್ನೇ ಎತ್ತಿಕೊಂಡು ಹೋದರೂ ಆಶ್ಚರ್ಯವಿಲ್ಲ. ಹಾಗಾಗಿ ಅಸಹಾಯಕತೆ ತೋರದೆ ವಿಟಿಯು ಇದ್ದ ಹಾಗೆ ಉಳಿಸಿಕೊಳ್ಳಲು ಬೀದಿಗಿಳಿಯಬೇಕಿದೆ. ತನ್ಮೂಲಕ, ನಮ್ಮ ತಂಟೆಗೆ ಬಾರದಂತೆ, ನಮ್ಮ ಆಸ್ತಿಗೆ ಮುಟ್ಟದಂತೆ ಗಟ್ಟಿಯಾದ ಸಂದೇಶ ನೀಡಬೇಕಿದೆ.
ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸಿ ಹಾಸನದಲ್ಲೊಂದು ತಾಂತ್ರಿಕ ವಿಶ್ವವಿದ್ಯಾಲಯ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಹಾಸನ, ಮಂಡ್ಯ, ಮೈಸೂರನ್ನೇ ಕರ್ನಾಟಕ ಎನ್ನುವಂತೆ ಈಗಿನ ಸಮ್ಮಿಶ್ರ ಸರಕಾರ ವರ್ತಿಸುತ್ತಿದೆ ಎನ್ನುವ ಕೂಗಿನ ಮಧ್ಯೆಯೂ ಘಂಟಾ ಘೋಷವಾಗಿ ವಿಟಿಯು ಅಡಿ ಬರುವ ಅರ್ಧ ಕಾಲೇಜುಗಳನ್ನು ಹಾಸನ ವಿವಿಗೆ ಸೇರಿಸುವ ಧ್ಯೈರ್ಯವನ್ನು ಕುಮಾರಸ್ವಾಮಿ ತೋರಿದ್ದಾರೆ. ಅವರಿಗೆ ಗೊತ್ತಿದೆ, ಇದಕ್ಕೆ ಇಲ್ಲಿಯ ಜನಪ್ರತಿನಿಧಿಗಳ ಪ್ರತಿರೋಧ ಹೇಗಿರುತ್ತದೆ ಎನ್ನುವುದು.
ರಾಜ್ಯ ಬಜೆಟ್ ಘೋಷಣೆಯಾಗುತ್ತಿದ್ದಂತೆ ಬೆಳಗಾವಿಯ ಜನಪ್ರತಿನಿಧಿಗಳ ಪ್ರತಿಕ್ರಿಯೆ ನೋಡಿದರೆ ತಲೆ ಚಚ್ಚಿಕೊಳ್ಳಬೇಕು. ಕೆಲವರು ಪ್ರತಿಕ್ರಿಯಿಸಿದ್ದಾರೆ, ಕೆಲವರು ಮೌನಕ್ಕೆ ಶರಣಾಗಿದ್ದಾರೆ. ಆದರೆ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಗಟ್ಟಿತನವನ್ನು ಯಾರೊಬ್ಬರೂ ಪ್ರದರ್ಶಿಸಲಿಲ್ಲ. ಕಾಂಗ್ರೆಸ್, ಜೆಡಿಎಸ್ ನವರು ಹಾಡಿ ಹೊಗಳಿದರೆ, ಬಿಜೆಪಿಯವರು ಟೀಕಿಸಿದ್ದಾರೆ. ಇನ್ನು ಕೆಲವರು ಯಾವ ಪ್ರತಿಕ್ರಿಯೆಯನ್ನೂ ನೀಡದೆ ತಮಗೇಕೆ ಉಸಾಬರಿ ಎಂದು ಸುಮ್ಮನಿದ್ದಾರೆ. ಇವೆಲ್ಲ ಕೇವಲ ರಾಜಕೀಯ ಕಾರಣಕ್ಕಾಗಿ ಅಷ್ಟೆ. ನಿಜವಾಗಿ ಈ ಭಾಗದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಯಾವೊಬ್ಬರೂ ಮಾತನಾಡಿಲ್ಲ.
ಪ್ರಭಾವಿ ಶಾಸಕಿಯೆಂದು ಕರೆಸಿಕೊಳ್ಳುವ ಲಕ್ಷ್ಮಿ ಹೆಬ್ಬಾಳಕರ್ ಬಜೆಟ್ ಸರ್ವ ಜನಾಂಗದ ಕಲ್ಯಾಣಕಾರಿ ಬಜೆಟ್ ಎಂದು ಹಾಡಿ ಹೊಗಳಿದ್ದಾರೆ. ಪ್ರಾದೇಶಿಕ ಅಸಮತೋಲನ ನಿವಾರಿಸುವ ಬಜೆಟ್ ಎಂದಿದ್ದಾರೆ. ಅವರು ಆಡಳಿತ ಪಕ್ಷಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಅನ್ಯಾಯವನ್ನು ಸಹಿಸಬೇಕಿಲ್ಲ. ಕೊನೆಯ ಪಕ್ಷ, ತಮ್ಮದೇ ಗ್ರಾಮೀಣ ಕ್ಷೇತ್ರದಲ್ಲಿರುವ ವಿಟಿಯು ವಿಭಜಿಸುವ ನಿರ್ಧಾರವನ್ನಾದರೂ ಖಂಡಿಸಬಹುದಿತ್ತು. ಆಗ ಅವರಿಗೊಂದು ಗೌರವ ಬರುತ್ತಿತ್ತು. ಅದಕ್ಕೆ ಇನ್ನೂ ಕಾಲ ಮಿಂಚಿಲ್ಲ.
ಶಾಸಕ ಅಭಯ ಪಾಟೀಲ ಬಿಜೆಪಿಯವರಾಗಿ ಬಜೆಟ್ ನ್ನು ಖಂಡಿಸಿದ್ದಾರೆ. ಬೀದಿಗಿಳಿದು ಪ್ರತಿಭಟನೆ ನಡೆಸುವ ತಾಖತ್ತಿರುವ ಅವರೂ ವಸ್ತು ನಿಷ್ಠವಾಗಿ ವಿಮರ್ಶಿಸುವಲ್ಲಿ, ಉಗ್ರ ಪ್ರತಿಭಟನೆಯ ಸಂದೇಶ ಕೊಡುವುದರಲ್ಲಿ ಹಿಂದೆಬಿದ್ದಿದ್ದಾರೆ.
ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ವಿಟಿಯು ವಿಭಜನೆಯನ್ನು ಖಂಡಿಸಿದ್ದಾರೆ. ಆದರೆ ಈ ಬಗ್ಗೆ ಗಟ್ಟಿಯಾಗಿ ಪ್ರತಿರೋಧಿಸುವ, ಎಚ್ಚರಿಕೆ ನೀಡುವ ಯಾವ ಮುನ್ಸೂಚನೆಯನ್ನು ಅವರು ನೀಡಿಲ್ಲ.
ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸ್ವಲ್ಪಮಟ್ಟಿಗೆ ಸಮಾಧಾನವಾಗುವಂತೆ ರಾಜ್ಯ ಬಜೆಟ್ ನ್ನು ವಿಮರ್ಶಿಸಿದ್ದಾರೆ. ವಿಟಿಯು ವಿಭಜಿಸುವ ನೀವು ರಾಜಿೀವ್ ಗಾಂಧಿ ವಿವಿಯನ್ನೂ ವಿಭಜಿಸಿ, ಉತ್ತರ ಕರ್ನಾಟಕದಲ್ಲಿ ಆರಂಭಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಕೆಲವು ನೀರಾವರಿ ಯೋಜನೆಗಳ ಮಂಜೂರಿಗಾಗಿ ಧನ್ಯವಾದ ಸಲ್ಲಿಸಿದ್ದಾರೆ. ಇಷ್ಟಕ್ಕೇ ಸೀಮಿತರಾಗದೆ, ವಿಟಿಯು ವಿಭಜಿಸುವ ನಿರ್ಧಾರ ಹಿಂತೆಗೆಯದಿದ್ದರೆ ಪ್ರತಿಭಟಿಸುವ ಗಟ್ಟಿಯಾದ ಎಚ್ಚರಿಕೆ ನೀಡಬೇಕಿತ್ತು.
ವಿಟಿಯು ವಿಭಜನೆ ತಡೆಯುವ ಜವಾಬ್ದಾರಿ ತೆಗೆದುಕೊಳ್ಳಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಈವರೆಗೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ತಕ್ಷಣ ಎಚ್ಚೆತ್ತುಕೊಳ್ಳುವ ಕೆಲಸವನ್ನಾದರೂ ಮಾಡಬೇಕು.
ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಲೋಕಸಭಾ ಸದಸ್ಯರಾದ ಸುರೇಶ ಅಂಗಡಿ ಮತ್ತು ಪ್ರಕಾಶ ಹುಕ್ಕೇರಿ ವಿಟಿಯು ವಿಭಜನೆ ವಿರೋಧಿಸಿ ಸಿಡಿದೇಳಬೇಕಿತ್ತು. ಈಗಲಾದರೂ ತಕ್ಷಣ ಈ ದಿಸೆಯಲ್ಲಿ ಹೆಜ್ಜೆ ಇಡಬೇಕು.
ವಿಟಿಯು ಬೆಳಗಾವಿಗೆ ಬರಬೇಕೆಂದು ಹೋರಾಡಿದವರಲ್ಲಿ ಪ್ರಮುಖರಾಗಿರುವ ಮತ್ತು ವಿಟಿಯು ಸ್ವಂತ ಕಟ್ಟಡ ಹೊಂದುವವರೆಗೂ ತಮ್ಮದೇ ಕೆಎಲ್ಇ ಸಂಸ್ಥೆಯ ಜಾಗ ಕೊಟ್ಟು ಪೋಷಿಸಿದ ಪ್ರಭಾಕರ ಕೋರೆ ಈಗಲೂ ಸರಕಾರದ ನಿಲುವಿನ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕು.
ಉಮೇಶ ಕತ್ತಿಯಂತವರು ಸರಕಾರವನ್ನು ಹೆದರಿಸುವುದಕ್ಕಾದರೂ ಈ ಸಂದರ್ಭದಲ್ಲಿ ಪ್ರತ್ಯೇಕ ರಾಜ್ಯದ ಧ್ವನಿ ಎತ್ತಬೇಕು.
ಕನ್ನಡ ಹೋರಾಟಗಾರ ಅಶೋಕ ಚಂದರಗಿ ವಿಟಿಯು ವಿಭಜಿಸುವ ಕ್ರಮ ಖಂಡಿಸಿ ಮತ್ತು ರಾಜೀವ ಗಾಂಧಿ ವಿವಿಯನ್ನೂ ವಿಭಜಿಸಿ ಎಂದು ಹೇಳಿದ್ದಾರಾದರೂ ಈಚೆಗೆ ಅವರ ಪ್ರತಿಭಟನೆಯೂ ಮಾಧ್ಯಮದ ಹೇಳಿಕೆಗೆ ಸೀಮಿತವಾಗಿಬಿಟ್ಟಿದೆ. ಬೀದಿಗಿಳಿದು ಹೋರಾಟ ಮಾಡುವಷ್ಟು ಶಕ್ತಿ ಅವರಲ್ಲಿ ಉಳಿದಿಲ್ಲ. ವಿದ್ಯಾರ್ಥಿ ಸಂಘಟನೆಗಳೂ ವಿಟಿಯು ವಿಭಜಿಸುವ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವೂ ತಮ್ಮದೇ ಲಾಭ ನಷ್ಟದ ಲೆಕ್ಕಾಚಾರ ಮಾಡಿ ನಿರ್ಧಾರ ಪ್ರಕಟಿಸಬಹುದು.
ಬಿಜೆಪಿ ಬಜೆಟ್ ಮಂಡಿಸಿದರೆ ಕಾಂಗ್ರೆಸ್ ಶಾಸಕ, ಸಂಸದರು ಟೀಕಿಸುವುದು, ಕಾಂಗ್ರೆಸ್ ಬಜೆಟ್ ಮಂಡಿಸಿದರೆ ಬಿಜೆಪಿ ಶಾಸಕ, ಸಂಸದರು ಟೀಕಿಸುವುದು… ವಿರೋಧ ಪಕ್ಷದವರ ಬಜೆಟ್ ಎನ್ನುವ ಕಾರಣಕ್ಕೆ ಟೀಕಿಸುವುದು, ನಮ್ಮ ಪಕ್ಷದ್ದು ಎನ್ನುವ ಕಾರಣಕ್ಕೆ ಹೊಗಳುವುದು… ಇದಿಷ್ಟು ಬಿಟ್ಟರೆ ಬೆಳಗಾವಿ ಜನಪ್ರತಿನಿಧಿಗಳು ಕೇಂದ್ರ ಅಥವಾ ರಾಜ್ಯದ ಬಜೆಟ್ ನ್ನು ವಸ್ತು ನಿಷ್ಠವಾಗಿ ವಿಶ್ಲೇಷಿಸಿದ್ದು, ಖಡಾಖಂಡಿತವಾಗಿ ವಿಮರ್ಶಿಸಿದ್ದು ಯಾವತ್ತೂ ಇಲ್ಲ.
ಕನ್ನಡ ಸಂಘಟನೆಗಳಿರಲಿ, ವಿದ್ಯಾರ್ಥಿ ಸಂಘಟನೆಗಳಿರಲಿ ಪತ್ರಿಕಾ ಹೇಳಿಕೆ ನೀಡಿದ್ದನ್ನು ಬಿಟ್ಟರೆ ಬೀದಿಗಿಳಿದು ಪ್ರತಿಭಟಿಸುವ ತಾಕತ್ತು ಕಳೆದುಕೊಂಡಿವೆ. ಉತ್ತರ ಕರ್ನಾಟಕ ಅಭಿವೃದ್ಧಿ ವೇದಿಕೆ ಹೆಸರಿನಲ್ಲಿ ಒಂದಿಷ್ಟು ಪತ್ರಿಕಾಗೋಷ್ಠಿ ನಡೆಸಿದವರು ಮತ್ತು ಸುವರ್ಣವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದ್ದ ಈ ಭಾಗದ ಮಠಾಧೀಶರು ಇಂತಹ ಸಂದರ್ಭದಲ್ಲಿ ಮೌನಕ್ಕೆ ಶರಣಾಗುವುದು ಸಹಿಸುವಂತದ್ದಲ್ಲ.
ಉತ್ತರ ಕರ್ನಾಟಕಕ್ಕೆ ಕೊಡುಗೆ ನೀಡುವುದಿರಲಿ, ಇರುವ ಸೌಲಭ್ಯಗಳನ್ನೂ ಕೊಳ್ಳೆ ಹೊಡೆದುಕೊಂಡು ಹೋಗಬಾರದೆಂದಾದರೆ ಇಲ್ಲಿನ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು, ಸರಕಾರದ ಭಾಗವಾಗಿರುವ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳ ಪದಾಧಿಕಾರಿಗಳು, ಕಾರ್ಯಕರ್ತರು, ವಿದ್ಯಾರ್ಥಿ ಸಂಘಟನೆಗಳು, ನೂರಾರು ಸಂಖ್ಯೆಯಲ್ಲಿರುವ ಕನ್ನಡ ಸಂಘಟನೆಗಳು ಎಲ್ಲರೂ ಒಂದಾಗಿ ಬೀದಿಗಿಳಿಯಬೇಕು. ಇಂತಹ ಅನ್ಯಾಯಕ್ಕೂ ಒಂದಾಗಿ ಧ್ವನಿ ಎತ್ತದಿದ್ದರೆ, ಇದರಲ್ಲೂ ಪಕ್ಷ ರಾಜಕೀಯ, ಸ್ವಾರ್ಥ ರಾಜಕೀಯ ನೋಡುತ್ತ ಕುಳಿತರೆ ಬೆಳಗಾವಿಯನ್ನು, ಉತ್ತರ ಕರ್ನಾಟಕವನ್ನು ಇನ್ನಷ್ಟು ಅಧೋಗತಿಗೆ ತಳ್ಳುವುದರಲ್ಲಿ ಸಂಶಯವಿಲ್ಲ.
(ಈ ಸುದ್ದಿಯನ್ನು ನಿಮ್ಮ ಎಲ್ಲ ಸಂಪರ್ಕಗಳಿಗೂ ಹಂಚಿರಿ. ಉತ್ತರ ಕರ್ನಾಟಕದ ಪರವಾಗಿ, ನಮ್ಮ ಬೆಳಗಾವಿಯ ಪರವಾಗಿ ಗಟ್ಟಿ ಧ್ವನಿ ಎತ್ತಲು ಕಾರಣರಾಗಿ, ಈಗಲ್ಲದಿದ್ದರೆ ಮತ್ತೆಂದೂ ನಾವು ಅನ್ಯಾಯ ತಡೆಯಲು ಸಾಧ್ಯವಿಲ್ಲ)
ನಿಮ್ಮ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಹಾಕಿ, ಇಲ್ಲವೆ 8197712235 ಗೆ ವಾಟ್ಸಪ್ ಮಾಡಿ.
Subscribe
https://pragati.taskdun.com
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ