ಎಂ.ಕೆ.ಹೆಗಡೆ, ಬೆಳಗಾವಿ – ಯಾರು ಏನೇ ಮಾಡಿದರೂ ಹಣೆ ಬರಹ ಸರಿ ಇರಬೇಕು ಎನ್ನುತ್ತಾರೆ. ಲಕ್ ಸರಿ ಇದ್ರೆ ಬರೋದು ಬಂದೇ ಬರುತ್ತೆ ಎನ್ನುತ್ತಾರೆ. ಹಿರಿಯ ರಾಜಕಾರಣಿಗಳಾಗಿರುವ ಕತ್ತಿ ಬ್ರದರ್ಸ್ ಲಕ್ ಪರೀಕ್ಷೆಗೆ ಈಗ ಕಾಲ ಕೂಡಿ ಬಂದಿದೆ.
ಉಮೇಶ ಕತ್ತಿ 7 ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಹಿರಿಯ ಶಾಸಕರು. 2 -3 ಬಾರಿ ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಯಡಿಯೂರಪ್ಪ ಸರಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ಯಾರಿಗೆ ತಪ್ಪಿದರೂ ಉಮೇಶ ಕತ್ತಿಗೆ ಮಂತ್ರಿಗಿರಿ ತಪ್ಪುವುದಿಲ್ಲ ಎನ್ನುವ ಭಾವನೆ ಎಲ್ಲರಲ್ಲಿತ್ತು.
ಆದರೆ ಅದೇಕೋ ಬೆಳಗಾವಿ ಜಿಲ್ಲೆಯಲ್ಲಿ ಶಾಸಕರೂ ಅಲ್ಲದ ಲಕ್ಷ್ಮಣ ಸವದಿಗೆ ಮಂತ್ರಿ ಸ್ಥಾನ ಕೊಟ್ಟರೂ 7 ಬಾರಿ ಆಯ್ಕೆಯಾದ ಉಮೇಶ ಕತ್ತಿಗೆ ಕೊಡಲೇ ಇಲ್ಲ. ಜಿಲ್ಲೆಯಿಂದ ನಾಲ್ವರನ್ನು ಸಚಿವರನ್ನಾಗಿಸಿದರೂ ಉಮೇಶ ಕತ್ತಿಯನ್ನು ಹೊರಗಿಡಲಾಗಿದೆ. ನಂತರ ಮಂತ್ರಿಮಂಡಳ ವಿಸ್ತರಣೆ ವೇಳೆಯಲ್ಲಾದರೂ ಸಿಗುತ್ತೇನೋ ಅಂದುಕೊಂಡರೆ ಆಗಲೂ ಕತ್ತಿ ಸರದಿ ಬರಲೇ ಇಲ್ಲ.
ರಮೇಶ ಕತ್ತಿಗೂ 2 ಬಾರಿ ಕೈ ತಪ್ಪಿತು
ಉಮೇಶ ಕತ್ತಿಗಷ್ಟೇ ಅಲ್ಲ, ರಮೇಶ ಕತ್ತಿಗೂ 2 ಬಾರಿ ಅವಕಾಶ ಕೈ ತಪ್ಪಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಮೇಶ ಕತ್ತಿಗೆ ಚಿಕ್ಕೋಡಿಯಿಂದ ಟಿಕೆಟ್ ನೀಡುವ ನಿರೀಕ್ಷೆ ಇತ್ತು. ಅವರೂ ಬಹಳ ಅಪೇಕ್ಷೆ ಇಟ್ಟುಕೊಂಡಿದ್ದರು. ಅದರ ಹಿಂದಿನ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋಲನುಭವಿಸಿದ್ದ ರಮೇಶ ಕತ್ತಿ ಈ ಬಾರಿಯೂ ಟಿಕೆಟ್ ನಿಂದ ವಂಚಿತರಾದರು.
ಆಗ ಮುನಿಸಿಕೊಂಡಿದ್ದ ಕತ್ತಿ ಬ್ರದರ್ಸ್ ಸಮಾಧಾನಕ್ಕೆ ಸ್ವತಃ ಯಡಿಯೂರಪ್ಪ ಬೆಂಗಳೂರಿನಿಂದ ಧಾವಿಸಿ ಬಂದರು. ಉಮೇಶ ಕತ್ತಿಯನ್ನು ಮಂತ್ರಿ ಮಾಡುವುದಾಗಿಯೂ, ರಮೇಶ ಕತ್ತಿಗೆ ರಾಜ್ಯಸಭೆಗೆ ಟಿಕೆಟ್ ಕೊಡುವುದಾಗಿ ಮನವೊಲಿಸಿ ಹೋದರು.
ಆದರೆ ರಾಜ್ಯಸಭಾ ಚುನಾವಣೆ ವೇಳೆಯೂ ರಮೇಶ ಕತ್ತಿಗೆ ಟಿಕೆಟ್ ಸಿಗಲೇ ಇಲ್ಲ. ಉಮೇಶ ಕತ್ತಿಗೆ ಈವರೆಗೂ ಮಂತ್ರಿಸ್ಥಾ ನೀಡಲಿಲ್ಲ.
ನವೆಂಬರ್ ಲಕ್?
ಈಗ ಮತ್ತೆ ಸರದಿ ಬಂದಿದೆ. ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಈ ತಿಂಗಳಲ್ಲಿ ಆಗುವುದು ಬಹುತೇಕ ನಿಶ್ಚಿತ. ಸುಮಾರು 6 ಜನರನ್ನು ಮಂತ್ರಿಮಂಡಳಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಇದರಲ್ಲಿ ಉಮೇಶ ಕತ್ತಿ ಸರದಿ ಬರಬಹುದು ಎನ್ನುವ ನಿರೀಕ್ಷೆ ಇದೆ.
ಹಾಗೆಯೇ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆ ಶನಿವಾರ (ನ.14) ನಡೆಯಲಿದೆ. ಅಂದು ರಮೇಶ ಕತ್ತಿ ಅಧ್ಯಕ್ಷರಾಗಿ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಹಾಲಿ ಅಧ್ಯಕ್ಷರಾಗಿರುವುದರಿಂದ ಮತ್ತು ಅನುಭವದ ಆಧಾರದ ಮೇಲೆ ತಮಗೆ ಮತ್ತೆ ಹುದ್ದೆ ಸಿಗಲಿದೆ ಎನ್ನುವ ಆಶಾಭಾವನೆ ಅವರದ್ದು. ಆದರೆ ಆರ್ ಎಸ್ಎಸ್ ಮತ್ತು ಬಿಜೆಪಿ ಹೈಕಮಾಂಡ್ ಮನಸ್ಸು ಮಾಡಬೇಕಷ್ಟೆ.
ಹಾಗಾಗಿ ನವೆಂಬರ್ ತಿಂಗಳಲ್ಲಿ ಕತ್ತಿ ಬ್ರದರ್ಸ್ ಗೆ ಎರಡು ಮಹತ್ವದ ಹುದ್ದೆಗಳ ನಿರೀಕ್ಷೆ ಇದೆ. ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಎರಡೂ ಅವರ ಮನೆಯಲ್ಲಿ ಒಟ್ಟಿಗೆ ಸಂಭ್ರಮ ತರುವ ನಿರೀಕ್ಷೆ ಇದೆ. ಆದರೆ ಯಾವುದಕ್ಕೂ ಲಕ್ ಬೇಕಲ್ಲವೇ? ಹಣೆಬರಹ ಸರಿ ಇಲ್ಲದಿದ್ದರೆ ಯಾರೇನು ಮಾಡಲು ಸಾಧ್ಯ?
ಯಡಿಯೂರಪ್ಪ ಸರಕಾರದಲ್ಲಿ ಬೆಳಗಾವಿ ಜಿಲ್ಲೆಗೆ ಲಾಟರಿ ಮೇಲೆ ಲಾಟರಿ ಹೊಡೆಯುತ್ತಿದೆ. ಹತ್ತಾರು ಹುದ್ದೆಗಳು ಜಿಲ್ಲೆಗೆ ಸಿಕ್ಕಿವೆ. ಈಗ ಕತ್ತಿ ಬ್ರದರ್ಸ್ ಗೆ ಲಾಟರಿ ಹೊಡೆಯುತ್ತಾ? ಕಾದು ನೋಡೋಣ (ಪ್ರಗತಿವಾಹಿನಿ).
ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿಲ್ಲ, ಆದರೆ…. : ರಮೇಶ ಕತ್ತಿ
ಡಿಸಿಸಿ ಬ್ಯಾಂಕ್: ಅಂಜಲಿ ಬೆಂಬಲಿಸಿ 2 ಸ್ಥಾನ ಕಳೆದುಕೊಂಡ್ರಾ ಕತ್ತಿ ಬ್ರದರ್ಸ್?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ