ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೀಪಾವಳಿ ಮುಗಿದರೂ ಪಟಾಕಿ ವಿವಾದಗಳು ಮಾತ್ರ ಮುಗಿದಿಲ್ಲ. ದೀಪಾವಳಿಯಲ್ಲಿ ಪಟಾಕಿ ಸಿಡಿಸಬಾರದು. ಹಿಂದೂ ಮಹಾಕಾವ್ಯಗಳಲ್ಲಿ ಪಟಾಕಿ ಬಗ್ಗೆ ಉಲ್ಲೇಖವಿಲ್ಲ ಎಂದು ಟ್ವೀಟ್ ಮಾಡಿದ್ದ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ವಿರುದ್ಧ ಇದೀಗ ಬಾಲಿವುಡ್ ನಟಿ ಕಂಗನಾ ರಣಾವತ್ ವಾಗ್ದಾಳಿ ನಡೆಸಿದ್ದಾರೆ.
ಡಿ.ರೂಪಾ ಹಾಗೂ ಟ್ರೂ ಇಂಡಾಲಜಿ ನಡುವಿನ ವಾಗ್ವಾದದ ಬೆನ್ನಲ್ಲೇ ಟ್ರೂ ಇಂಡಾಲಜಿ ಟ್ವಿಟರ್ ಅಕೌಂಟ್ ನ್ನೇ ನಿಷ್ಕ್ರಿಯಗೊಳಿಸಲಾಗಿತ್ತು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಡಿ.ರೂಪಾ ವಿರುದ್ಧ ಕಿಡಿಕಾರಿರುವ ಕಂಗನಾ ಟ್ರೂ ಇಂಡಾಲಜಿ ಪೇಜಿನೊಂದಿಗೆ ನಿಮ್ಮ ತರ್ಕ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಅವರ ಟ್ವಿಟರ್ ಖಾತೆಯನ್ನೇ ನಿರ್ಬಂಧಿಸಿರುವುದು ಅಧಿಕಾರದ ದರ್ಪವನ್ನು ತೋರುತ್ತದೆ. ಸರ್ಕಾರ ನಿಮಗೆ ಅಧಿಕಾರ ನೀಡುವುದು ಜನರ ಹಿತ ಕಾಪಾಡಲು ಹೊರತು ಅಧಿಕಾರ ಬಳಸಿಕೊಂಡು ಬೇರೊಬ್ಬರ ಧ್ವನಿಯನ್ನೇ ಹತ್ತಿಕ್ಕುವುದಕ್ಕಲ್ಲ ಎಂದಿದ್ದಾರೆ.
ಮೀಸಲಾತಿ ಎಂಬುದು ಅರ್ಹನಲ್ಲದ ವ್ಯಕ್ತಿಗೆ ಸಿಕ್ಕರೆ ಅವರು ಉಪಕಾರಕ್ಕಿಂತ ಅಪಕಾರವನ್ನೇ ಮಾಡುತ್ತಾರೆ. ನನಗೆ ಡಿ.ರೂಪಾ ವೈಯಕ್ತಿಕವಾಗಿ ಗೊತ್ತಿಲ್ಲ. ಆದರೆ ಅವರ ನಡೆ ಅವರ ದೌರ್ಬಲ್ಯವನ್ನು ಎತ್ತಿ ತೋರುತ್ತದೆ ಎಂದು ಗುಡುಗಿದ್ದಾರೆ.
ಪಟಾಕಿ ಹೊಡೆಯಬಾರದು ಎಂದು ಹೇಳಿದ್ದ ಐಪಿಎಸ್ ಅಧಿಕಾರಿ ಡಿ.ರೂಪಾ, ಹಿಂದೂಗಳ ಮಹಾಕಾವ್ಯ ಮತ್ತು ಪುರಾಣಗಲಲ್ಲಿ ಪಟಾಕಿ ಸಿಡಿಸುವ ಸಂಸ್ಕೃತಿ ಪ್ರಸ್ತಾಪಿಸಿಲ್ಲ. ಇದು ಯುರೋಪಿಯನ್ನರೊಂದಿಗೆ ಬಂದ ಸಂಸ್ಕೃತಿಯಾಗಿದೆ ಎಂದು ಟ್ವಿಟರ್ ನಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಟ್ರೂ ಇಂಡಾಲಜಿ ಎಂಬ ಟ್ವಿಟರ್ ಖಾತೆ ಭಾರತದ ಪ್ರಾಚೀನ ಗ್ರಂಥಗಳಲ್ಲಿ ಪಟಾಕಿ ಉಲ್ಲೇಖವಿದೆ ಎಂದಿತ್ತು. ಇದಕ್ಕೆ ಸವಾಲು ಹಾಕಿದ್ದ ಡಿ.ರೂಪಾ, ಉಲ್ಲೇಖವಿರುವ ಪ್ರಾಚೀನ ಗ್ರಂಥಗಳ ಪುರಾವೆ ಒದಗಿಸುವಂತೆ ಹೇಳಿದ್ದರು. ಡಿ.ರೂಪಾ ಹಾಗೂ ಟ್ರೂ ಇಂಡಾಲಾಜಿ ಪರಸ್ಪರ ವಾದ-ಪ್ರತಿವಾದ ಮುಂದುವರೆಯುತ್ತಿದ್ದಂತೆಯೆ ಟ್ವಿಟರ್ ಟ್ರೂ ಇಂಡಾಲಜಿ ಖಾತೆಯನ್ನು ನಿಷ್ಕ್ರಿಯಗೊಳಿಸಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ