ಹೊಸ ಬಗೆಯ ಸ್ನ್ಯಾಕ್ಸ್

ಪಪಾಯಿ ಮಂಚೂರಿ

ಸಂಜೆ ಸ್ನ್ಯಾಕ್ಸ್ ಏನಾದ್ರು ಹೊಸದನ್ನಾ ಮಾಡಬೇಕು ಅಂದು ಕೊಂಡಿದ್ದೀರಾ? ಹಾಗಾದ್ರೆ ಇಲ್ಲಿದೆ  ಹೊಸ ಬಗೆಯ ಸ್ನ್ಯಾಕ್ಸ್ ಮಾಹಿತಿ.
ಗೋಬಿ ಕ್ಯಾಬೀಜ್, ಬೇಬಿ ಕಾರ್ನಮಂಚೂರಿಗಳನ್ನಾ ನಾವೆಲ್ಲಾ ಕೇಳಿರುತ್ತೇವೆ. ಅದೇ ರೀತಿ ನಾವಿಂದು ಪಪಾಯಿ ಮಂಚೂರಿ ಮಾಡುವುದು ಹೇಗೆಂದು ತಿಳಿಯೋಣ. ತುಂಬಾನೇ ಚನ್ನಾಗಿರುತ್ತೆ ಪಪ್ಪಾಯಿ ಮಂಚೂರಿ.
ಬೇಕಾದ ಸಾಮಗ್ರಿಗಳು:
ಪಪ್ಪಾಯಿ ಕಾಯಿ 1, ಟೊಮೇಟೋ ಸಾಸ್,   ಕ್ವಾರ್ನ ಪ್ಲೋರ್ 1 ಕಪ್, ಕಡಲೆ ಹಿಟ್ಟು 2 ಟೀ ಚಮಚ, ಬೆಳ್ಳುಳ್ಳಿ 1ದೊಡ್ಡ ಗಡ್ಡೆ, ಈರುಳ್ಳಿ 2, ಹಸಿಮೆಣಸು 2, ಕೊತ್ತಂಬ್ರಿ ಸೊಪ್ಪು ಸ್ವಲ್ಪ, ರುಚಿಗೆ ಉಪ್ಪು, ಕೇಸರಿ ಬಣ್ಣ ಸ್ವಲ್ಪ, ಖಾರದ ಪುಡಿ 2 ಚಮಚ, ಕರಿಯಲು ಎಣ್ಣೆ.
ಮಾಡುವ ವಿಧಾನ:
ಪಪ್ಪಾಯಿ ಕಾಯಿಯನ್ನು ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚ ಬೇಕು. ಹೆಚ್ಚಿದ ಹೋಳುಗಳನ್ನು ಕುದಿಯುವ ನೀರಿಗೆ ಹಾಕಿ ಒಂದು ಕುದಿ ಕುದಿಸಿ ನೀರನ್ನು ಸೋಸಿ ಇಡಬೇಕು.ಇದಕ್ಕೆ ಕ್ವಾರ್ನ ಪ್ಲೋರ್ ಕಡಲೆ ಹಿಟ್ಟು, ಮೆಣಸಿನ ಹಿಟ್ಟು, ಉಪ್ಪು, ಬಣ್ಣ ಸೇರಿಸಿ ಚೆನ್ನಾಗಿ ಕಲಸಬೇಕು.(ಬಣ್ಣ ಬೇಕಿದ್ದರೆ ಹಾಕಬಹುದು. ಕ್ವಾರ್ನ ಪ್ಲೋರ್ ನ್ನು ಸ್ವಲ್ಪ ಸ್ವಲ್ಪಹಾಕುತ್ತಾ ಹೋಗಬೇಕು). ನೀರನ್ನು ಬೇಕಿದ್ದರೆ ಮಾತ್ರ ಸ್ವಲ್ಪ ಸೇರಿಸಬಹುದು. ಪಪ್ಪಾಯಿ ಹೋಳು ಬೇಯಿಸಿದ್ದರಿಂದ ನೀರು ಬಿಡುತ್ತದೆ. ಹಿಟ್ಟು ಬಜೆ ಹಿಟ್ಟಿನ ಹದಕ್ಕೆ ಇರಲಿ. ಈ ಹಿಟ್ಟನ್ನು ಬಜೆಗಳ ರೀತಿ ಕಾದ ಎಣ್ಣೆಯಲ್ಲಿ ಗರಿಗರಿ ಯಾಗಿ ಕರಿಯಿರಿ.
ಈರುಳ್ಳಿ, ಬಳ್ಳುಳ್ಳಿ, ಕೊತ್ತಂಬ್ರಿ ಸೊಪ್ಪು, ಹಸಿಮೆಣಸುಗಳನ್ನು ಪ್ರತ್ಯೇಕವಾಗಿ ಹೆಚ್ಚಿಡಬೇಕು.
ದೊಡ್ಡ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ  ಹೆಚ್ಚಿದ ಈರುಳ್ಳಿ ಬಳ್ಳುಳ್ಳಿ ಹಸಿಮೆಣಸುಗಳನ್ನು ಹಾಕಿ ಹುರಿಯಬೇಕು. ಹೊಂಬಣ್ಣ ಬಂದನಂತರ ಕರಿದಿಟ್ಟ ಬಜೆಯನ್ನು ಹಾಕಿ ಹುರಿಯಬೇಕು. ಹಾಗೆ ಟೊಮೆಟೋ ಸಾಸ್ ನ್ನು ಹಾಕಿ ಹುರಿಯುತ್ತಿರಬೇಕು. ಡ್ರೈಯ್ ಬೇಕಿದ್ದರೆ ಸಾಸ್ ಹಾಕಿ ಸಣ್ಣ ಉರಿಯಲ್ಲಿ ಹುರಿಯಬೇಕು.
 ನಂತರ ಸರ್ವಿಂಗ್ ಪ್ಲೇಟಿಗೆ ಹಾಕಿ ಹೆಚ್ಚಿದ ಹಸಿ ಈರುಳ್ಳಿ ಕೊತ್ತಂಬ್ರಿ ಸೊಪ್ಪುಗಳನ್ನು ಮೇಲೆ ಹಾಕಿ ಅಲಂಕರಿಸಿ. ಸ್ಪೈಸಿ ಸ್ಪೈಸಿ ಪಪಾಯಿ ಮಂಚೂರಿ ಸವಿಯಲು ರೆಡಿ.
( ಟೊಮೆಟೋ ಸಾಸ್ ಮಾಡುವುದು:  ಟೊಮೆಟೋ 4_5,ಮೆಣಸಿನ ಪುಡಿ 2 ಚಮಚ, ಸಕ್ಕರೆ 3-4ಚಮಚ, ರುಚಿಗೆ ಉಪ್ಪು,  ಟೊಮೆಟೋ ಹಣ್ಣನ್ನು ಕುಕ್ಕರ್ ನಲ್ಲಿ 3 ಸೀಟಿ  ಹಾಕಿ ಬೇಯಿಸಬೇಕು. ತಣ್ಣಗಾದ ಮೇಲೆ ಸಿಪ್ಪೆ, ಬೀಜ ತೆಗೆದು, ಮೇಲೆ ಹೇಳಿದ ಸಾಮಗ್ರಿಗಳನ್ನು ಸೇರಿಸಿ ರುಬ್ಬಿ  ಕುದಿಸಬೇಕು. ಆರಿದ ಮೇಲೆ ಗಾಜಿನ ಪಾತ್ರೆಯಲ್ಲಿ ತುಂಬಿ ಇಡಬೇಕು.)
-ಸಹನಾ ಭಟ್, ಸಹನಾಸ್ ಕಿಚನ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button