Latest

ಸೇವ್ ವಿಟಿಯು: ಶನಿವಾರ ಬೃಹತ್ ಜಾಥಾ, ಪ್ರತಿಭಟನಾ ಸಭೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜಿಸುವ ರಾಜ್ಯ ಸರಕಾರದ ನಿರ್ಧಾರ ವಿರೋಧಿಸಿ ಶನಿವಾರ ಬೆಳಗಾವಿಯಲ್ಲಿ ಬೃಹತ್ ಜಾಥಾ ಮತ್ತು ಪ್ರತಿಭಟನಾ ಸಭೆ ನಡೆಯಲಿದೆ.

ಮಂಗಳವಾರ ಸಭೆ ಸೇರಿದ್ದ ನೂರಕ್ಕೂ ಹೆಚ್ಚು ಸಂಘಟನೆಗಳ ಪ್ರಮುಖರು, ವಿದ್ಯಾರ್ಥಿ ಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಹುಕ್ಕೇರಿ ಹಿರೇಮಠದ ಚಂದ್ರಶ ೇಖರ ಶಿವಾಚಾರ್ಯ ಸ್ವಾಮಿಗಳು ನಿರ್ಣಯವನ್ನು ಮಂಡಿಸಿದರು. ಸಂಪೂರ್ಣ ಸಭೆ ಒಕ್ಕೊರಲಿನಿಂದ ನಿರ್ಣಯಕ್ಕೆ ಬೆಂಬಲ ಸೂಚಿಸಿತು.

ಶನಿವಾರದ ಜಾಥಾ ಮತ್ತು ಸಭೆಗೆ ಎಲ್ಲ ಜನಪ್ರತಿನಿಧಿಗಳನ್ನು, ಮಠಾಧೀಶರನ್ನು, ವಿದ್ಯಾರ್ಥಿಗಳನ್ನು, ಎಲ್ಲ ಸಂಘ ಸಂಸ್ಥೆಗಳನ್ನು, ಬೆಳಗಾವಿಯ ಎಲ್ಲ ನಾಗರಿಕರನ್ನು, ಸಾಹಿತಿಗಳನ್ನು ಆಹ್ವಾನಿಸಬೇಕು. ಎಲ್ಲರೂ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬೇಕು ಎಂದು ಸಭೆ ವಿನಂತಿಸಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯನ್ನು ವಿಭಜಿಸಿ ಹಾಸನದಲ್ಲಿ ಪರ್ಯಾಯ ವಿವಿ ಸ್ಥಾಪಿಸುವ ನಿರ್ಧಾರವನ್ನು ರಾಜ್ಯ ಸರಕಾರ ಬಜೆಟ್ ನಲ್ಲಿ ಮಂಡಿಸಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆಗಳು ಆರಂಭವಾಗಿದ್ದು, ಸೋಮವಾರ ಬೆಳಗಾವಿಯ ಫೌಂಡ್ರಿಕ್ಲಸ್ಟರ್ ನಲ್ಲಿ ಸೇರಿದ್ದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ವಿಟಿಯು ಒಡೆಯುವುದಾದರೆ ರಾಜ್ಯವನ್ನೂ ಒಡೆಯಿರಿ ಎನ್ನುವ ಆಕ್ರೋಶ ವ್ಯಕ್ತಪಡಿಸಲಾಗಿತ್ತು.

ಮಂಗಳವಾರ ನೂರಾರು ಸಂಘಟನೆಗಳ ಪದಾಧಿಕಾರಿಗಳು ಮತ್ತೆ ಸಭೆ ನಡೆಸಿದರು. ಆರಂಭದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಉತ್ತರ ಕರ್ನಾಟಕದ ಜನ ಪ್ರತ್ಯೇಕತೆಯನ್ನು ಬಯಸುವುದಿಲ್ಲ. ಆದರೆ ಮುಂದೆ ಅಂತಹ ಅನಾಹುತವಾದರೆ ಸರಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.

ಈ ಹಿಂದೆ ಪ್ರತಿಭಟನೆ ನಡೆದಾಗ 9 ಇಲಾಖೆಗಳನ್ನು ಸ್ಥಳಾಂತರಿಸುವುದಾಗಿ ಸರಕಾರ ಹೇಳಿದ್ದರೂ ಯಾವುದೂ ಜಾರಿಯಾಗಿಲ್ಲ. ನಮ್ಮ ತಲೆಯ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡಬೇಡಿ. ಈ ಭಾಗದ ಜನಪ್ರತಿನಿಧಿಗಳ ಜವಾಬ್ದಾರಿ ಮಹತ್ವದ್ದಾಗಿದ್ದು, ನೀವು ನಮ್ಮ ಪರವಾಗಿ ಧ್ವನಿ ಎತ್ತದಿದ್ದರೆ ನಿಮ್ಮ ಮನೆಯ ಮುಂದೆಯೇ ಕುಳಿತುಕೊಳ್ಳಬೇಕಾದೀತು ಎಂದು ಸ್ವಾಮಿಗಳು ಎಚ್ಚರಿಸಿದರು.

ಪ್ರಗತಿವಾಹಿನಿಯಿಂದಾಗಿ ನಮಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಒಡೆಯುವ ಸರಕಾರದ ನಿರ್ಧಾರ ಗೊತ್ತಾಯಿತು. ಪ್ರಗತಿವಾಹಿನಿ ನ್ಯೂಸ್ ಪೋರ್ಟಲ್ ನಲ್ಲಿ ಈ ಬಗ್ಗೆ ನಿರಂತರವಾಗಿ ಸುದ್ದಿಗಳು ಬರುತ್ತಿವೆ. ಆದರೆ ನಮ್ಮ ಜನರಲ್ಲಿ ಇಚ್ಛಾಶಕ್ತಿ ಇಲ್ಲ. ಹೀಗೇ ಮುಂದುವರಿದರೆ ನಮಗೆ ದೊಡ್ಡ ಅನ್ಯಾಯವಾಗಲಿದೆ. ಹಾಗಾಗಿ ಸಹಿಸಂಗ್ರಹದಂತಹ ಅಭಿಯಾನವನ್ನೂ ಹಮ್ಮಿಕೊಳ್ಳಬೇಕು. ಎಲ್ಲ ರೀತಿಯ ಹೋರಾಟಕ್ಕೆ ನಾನು ನಿಮ್ಮೊಂದಿಗಿರುತ್ತೇನೆ ಎಂದು ಅವರು ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿ ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ, ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ದೊಡ್ಡ ಕೊಡುಗೆ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಇರುವುದನ್ನೂ ಕಸಿದುಕೊಳ್ಳುವ ನಿರಧಾರ ಪ್ರಕಟಿಸಲಾಗಿದೆ. ನಾವು ಪ್ರತಿಭಟಿಸದಿದ್ದಲ್ಲಿ ಅಸಮತೋಲನ ಇನ್ನಷ್ಟು ಹೆಚ್ಚುತ್ತಲೇ ಹೋಗುತ್ತದೆ. ಹಾಗಾಗಿ ಹೋರಾಟದ ರೂಪುರೇಷೆ ನಿರಧರಿಸಲು ಸಲಹೆ ನೀಡುವಂತೆ ಕೋರಿದರು.

ಬೆಂಗಳೂರಿನಲ್ಲಿ ಶಾಸಕ ಅಭಯ ಪಾಟೀಲ, ಮಹಾಂತೇಶ ಕವಟಗಿಮಠ ತಮ್ಮದೇ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳನ್ನೂ ಭೇಟಿಯಾಗಲಿದ್ದಾರೆ ಎಂದು ಎಂ.ಕೆ.ಹೆಗಡೆ ತಿಳಿಸಿದರು.

ಪ್ರೊಫೇಶನಲ್ ಪೋರಮ್ ಅಧ್ಯಕ್ಷ ಬಿ.ಎಸ್.ಪಾಟೀಲ, ಸಂಸ್ಥೆಗಳನ್ನು ಒಡೆದು ಸರಕಾರ ನಮ್ಮನ್ನು ದುರ್ಬಲರನ್ನಾಗಿ ಮಾಡಲು ಹೊರಟಿದೆ. ನಾವು ಹೆದರಿಲ್ಲ, ಆದರೆ ಇನ್ನು ಮುಂದೆ ತಾಳ್ಮೆಯಿಂದಿರಲು ಸಾಧ್ಯವಿಲ್ಲ. ಈಗ ವಿಭಜನೆ ಮಾಡಿ ಮುಂದೆ ವಿಟಿಯು ಅಗತ್ಯವಿಲ್ಲ ಎನ್ನುವ ಹಂತಕ್ಕೂ ಬರಬಹುದು ಎಂದು ಎಚ್ಚರಿಸಿದರು.

ಮಾಜಿ ಮಹಾಪೌರ ಸಿದ್ದನಗೌಡ ಪಾಟೀಲ, ದೇವೇಗೌಡ, ರೇವಣ್ಣ ಮತ್ತು ಕುಮಾರಸ್ವಾಮಿ ವಿಟಿಯು ಒಡೆದು ತಮ್ಮ ಮನೆಗೆ ಕೊಂಡೊಯ್ಯುವ ಹುನ್ನಾರ ನಡೆಸಿದ್ದಾರೆ. ಒಡೆಯುವಂತಹ ಯಾವ ಅವಶ್ಯಕತೆಯೂ ಈಗ ಬಂದಿಲ್ಲ. ಎಲ್ಲ ಸಂಘಸಂಸ್ಥೆಗಳೂ ಸೇರಿ ಎಲ್ಲ ರೀತಿಯ ಹೋರಾಟ ಮಾಡಿ ವಿಟಿಯು ವಿಭಜನೆ ತಪ್ಪಿಸಬೇಕು. ಸರಕಾರ ಬಗ್ಗದಿದ್ದಲ್ಲಿ ಮುಂದೆ ಎರಡು ಕರ್ನಾಟಕವಾದೀತು ಎಂದು ಎಚ್ಚರಿಸಿದರು.

ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಜುವಳಿ, ಮುಖ್ಯಮಂತ್ರಿಗಳ ಮನಸ್ಸಿನಲ್ಲಿ ರಾಜ್ಯವನ್ನು ಒಡೆಯುವ ಯೋಚನೆಯೇ ಇದ್ದಹಾಗಿದೆ ಎಂದು ಆರೋಪಿಸಿದರು.

ಡಾ.ರಾಜಶೇಖರ, ವಿದ್ಯಾರ್ಥಿಗಳನ್ನು ಸೇರಿಸಿ ಬೃಹತ್ ಜಾಥಾ ಹಮ್ಮಿಕೊಳ್ಳಬೇಕು ಎಂದರು. ಜಾವೂರ್ ಮಾತನಾಡಿ, 3 ತಿಂಗಳಿಗೊಮ್ಮೆ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಪರಾಮರ್ಶೆ ನಡೆಸಬೇಕು ಎಂದರು.

ರೈತ ಸಂಘದ ಮುಖಂಡ ಸಿದಗೌಡ ಮೋದಗಿ, ಎಲ್ಲ ರೀತಿ ಹೋರಾಟಕ್ಕೂ ರೈತಸಂಘ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು. ಎಬಿವಿಪಿ ಮುಖಂಡ ಪೃಥ್ವಿಕುಮಾರ, ವಿಟಿಯು ಇರುವುದರಿಂದ ಈ ಭಾಗದ ಜನರಿಗೆ ಎಂಜಿನಿಯರ್ ಆಗುವ ಅವಕಾಶ ಸಿಕ್ಕಿದೆ. ಇಲ್ಲವಾದಲ್ಲಿ ಬಹಳಷ್ಟು ಜನ ವಂಚಿತರಾಗುತ್ತಿದ್ದರು. ಹಾಗಾಗಿ ಏನೇ ಬೆಲೆ ತೆತ್ತಾದರೂ ವಿಟಿಯು ಉಳಿಸಿಕೊಳ್ಳಬೇಕು. ಹೋರಾಟಕ್ಕೆ ವಿದ್ಯಾರ್ಥಿ ಸಂಘಟನೆಗಳು ಸಂಪೂರ್ಣ ಬೆಂಬಲವಾಗಿ ನಿಲ್ಲಿದೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ಮಹಾದೇವ ತಳವಾರ ಮಾತನಾಡಿ, ನಾವು ತೆರಿಗೆ ಕಟ್ಟಿ ಬೆಂಗಳೂರನ್ನು ಬೆಳೆಸುತ್ತಿದ್ದೇವೆ. ಸದನದಲ್ಲಿ ಈ ವಿಷಯವನ್ನು ಎತ್ತುವಂತೆ ಜನಪ್ರತಿನಿಧಿಗಳ ಒತ್ತಡ ಹೇರಬೇಕು ಎಂದರು.

ರವಿರಾಜ ಪಾಟೀಲ, ಪ್ರಿಯಾ ಪುರಾಣಿಕ, ದೀಪಕ ಗುಡಗನಟ್ಟಿ, ಮುರುಗೇಂದ್ರ ಪಾಟೀಲ, ಆನಂದ ಹಾವಣ್ಣವರ್, ರಾಜೀವ ಟೋಪಣ್ಣವರ್, ಮುಕ್ತಾರ ಪಠಾಣ, ಆದರ್ಶ ಪಾಟೀಲ, ಅನುಶ್ರೀ ರಘುವೀರ ಮೊದಲಾದವರು ಮಾತನಾಡಿದರು.

ಫೌಂಡ್ರಿ ಕ್ಲಸ್ಟರ್ ಅಧ್ಯಕ್ಷ ರಾಮ ಭಂಡಾರೆ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಮಹೇಶ ಬಾಗಿ, ಡಾ.ಸೋನಾಲಿ ಸರ್ನೋಬತ್, ಸತೀಶ್ ಕುಲಕರ್ಣಿ, ವಿಲಾಸ ಬದಾಮಿ, ಮರ್ಚಂಟ್ಸ್ ಅಸೋಸಿಯೇಶನ್, ಬಾರ್ ಅಸೋಸಿಯೇಶನ್, ವಿವಿಧ ಕನ್ನಡ ಸಂಘಟನೆಗಳ ಪ್ರತಿನಿಧಗಳು ಭಾಗವಹಿಸಿದ್ದರು.

ಕೊನೆಯಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಶನಿವಾರ ಜಾಥಾ ಮತ್ತು ಪ್ರತಿಭಟನಾ ಸಬೆ ನಡೆಸುವ ನಿರ್ಧಾರ ಪ್ರಕಟಿಸಿ, ಎಲ್ಲ ಶಾಸಕರು, ಸಂಸದರನ್ನು, ಮಠಾಧೀಶರುಗಳನ್ನು ಹಾಗೂ ಉತ್ತರ ಕರ್ನಾಟಕದ ವಿವಿಧ ಭಾಗಗಳ ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದರು.

ಪ್ರತಿಭಟನೆಯ ಸಮಯ ಮತ್ತು ಸ್ಥಳವನ್ನು ಬುಧವಾರ ಪ್ರಕಟಿಸಲಾಗುವುದು. ಎಲ್ಲರೂ ತಾವು ಪ್ರತಿನಿಧಿಸುವ ಸಂಘಟನೆಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವಂತೆ ಮಾಡಬೇಕು ಎಂದು ಎಂ.ಕೆ.ಹೆಗಡೆ ಕೋರಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button