ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ರಾಜ್ಯ ರಾಜಕೀಯದಲ್ಲಿ ಶುಕ್ರವಾರ ಹಲವು ಕ್ಷಿಪ್ರ ಬೆಳವಣಿಗೆಗಳು ನಡೆದಿದ್ದು, ವಿಧಾನಮಂಡಳದ ಅಧಿವೇಶನ ಮತ್ತೆ ಮುಂದೂಡಲ್ಪಟ್ಟಿತು.
ಬುಧವಾರ ಕಾಂಗ್ರೆಸ್ ನ ಅತೃಪ್ತ ಶಾಸಕರಾದ ರಮೇಶ ಜಾರಕಿಹೊಳಿ, ನಾಗೇಂದ್ರ, ಮಹೇಶ ಕುಮಟಳ್ಳಿ, ಉದಯ ಜಾಧವ ಸದನಕ್ಕೆ ಹಾಜರಾಗಿದ್ದು, ತಾವೆಲ್ಲ ತಮ್ಮ ತಮ್ಮ ವಯಕ್ತಿಕ ಕಾರಣದಿಂದಾಗಿ ಇಷ್ಟು ದಿನ ಹೊರಗುಳಿದಿದ್ದೆೇವೆ ಹೊರತು ಆಪರೇಶನ್ ಕಮಲ ಪ್ರಯತ್ನ ನಡೆದಿಲ್ಲ ಎಂದಿದ್ದಾರೆ.
ಬುಧವಾರ ಸದನಕ್ಕೆ ಹಾಜರಾಗುವಂತೆ ವಿಪ್ ಹೊರಡಿಸಿದ್ದ ಕಾಂಗ್ರೆಸ್, ಹಾಜರಾಗದಿದ್ದರೆ ಅನರ್ಹತೆಯ ಶಿಕ್ಷೆ ಎದುರಿಸಿ ಎನ್ನುವ ಸಂದೇಶ ಕಳಿಸಿತ್ತು. ಈ ಹಿನ್ನೆಲೆಯಲ್ಲಿ ಹೆದರಿದ ಶಾಸಕರು ಸದನಕ್ಕೆ ಹಾಜರಾದರು. ಆದರೆ ಅವರ ಅತೃಪ್ತಿ ನಿವಾರಣೆಯಾಯಿತೋ… ಮುಂದೆಯೂ ಬಂಡಾಯ ಮುಂದುವರಿಸಲಿದ್ದಾರೆಯೋ ಎನ್ನುವುದು ಖಚಿತವಾಗಿಲ್ಲ.
ಶಾಸಕ ಮಹೇಶ ಕುಮಟಳ್ಳಿ ಅನಾರೋಗ್ಯ ಕಾರಣದಿಂದ ದೂರ ಉಳಿದಿದ್ದೆ ಎಂದರೆ, ರಮೇಶ್ ಜಾರಕಿಹೊಳಿ ಮಗಳ ಮದುವೆ ತಯಾರಿಗಾಗಿ ಹೋಗಿದ್ದೆ ಎಂದಿದ್ದಾರೆ.
ಹಾಸನದಲ್ಲಿ ಗದ್ದಲ:
ಈಚೆಗೆ ಬಿಡುಗಡೆಯಾದ ಆಡಿಯೋದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುರಿತು ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಜೆಡಿಎಸ್ ಕಾರ್ಯಕರ್ತರು ಪ್ರೀತಂ ಮನೆಯ ಮೇಲೆ ದಾಳಿ ನಡೆಸಿದರು.
ಈ ವೇಳೆ ತೂರಿದ ಕಲ್ಲೊಂದು ರಾಹುಲ್ ಎನ್ನುವ ಬಿಜೆಪಿ ಕಾರ್ಯಕರ್ತನ ಕುತ್ತಿಗೆ ಬಳಿ ಬಡಿದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ವಿಧಾನಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಗೃಹ ಸಚಿವರ ಗಮನಕ್ಕೆ ತರುವುದಾಗಿ ಹೇಳಿದರು. ಹಾಸನಕ್ಕೆ ಸ್ವತಃ ತೆರಳಿ ಜೆಡಿಎಸ್ ಗೂಂಡಾಗಿರಿ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾರ್ಯಕರ್ತರು ಗಲಾಟೆ ಮಾಡಬಾರದು. ಎಲ್ಲವನ್ನೂ ಎದುರಿಸುವ ಶಕ್ತಿ ನಮಗಿದೆ. ಸಂಯಮದಿಂದ ನಡೆದುಕೊಳ್ಳಬೇಕು. ಕಾನೂನು ಕೈಗೆ ತೆಗೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಒಟ್ಟಾರೆ, ಬುಧವಾರ ರಾಜ್ಯ ರಾಜಕೀಯದ ಬೆಳವಣಿಗೆಗಳು ತೀರಾ ಅಸಹ್ಯ ಮಟ್ಟಕ್ಕೆ ಇಳಿದಿದ್ದು, ಜನತೆ ತಲೆ ತಗ್ಗಿಸುವಂತೆ ಮಾಡಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ