ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಧೃವೀಕರಣಕ್ಕೆ ವೇದಿಕೆ ಸಜ್ಜಾಗಿದೆ. ಭಾರತೀಯ ಜನತಾ ಪಾರ್ಟಿ ಜೊತೆ ಜಾತ್ಯತೀತ ಜನತಾದಳ ಮೈತ್ರಿ ಅಥವಾ ವಿಲೀನ ಸಾಧ್ಯತೆ ದಟ್ಟವಾಗಿದೆ.
ಕಳೆದ 3 ತಿಂಗಳಿನಿಂದ ರಾಜ್ಯದಲ್ಲಿ ಹೊಸ ರಾಜಕೀಯ ಮೈತ್ರಿಗೆ ವೇದಿಕೆ ಸಜ್ಜಾಗುತ್ತಿದ್ದು ಈಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದಾಗಲೇ ಹಲವು ಅನುಮಾನಗಳು ಹುಟ್ಟಿದ್ದವು.
ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ನಿರ್ಧರಿಸಿದೆ ಎನ್ನುವ ವದಂತಿ ಹರಡುತ್ತಿದ್ದ ಸಂದರ್ಭದಲ್ಲೇ ಕುಮಾರಸ್ವಾಮಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಯಡಿಯೂರಪ್ಪ ಅವರಿಗೆ ಅಭಯ ನೀಡಿದ್ದರು ಎನ್ನುವ ಮಾತು ಕೇಳಿ ಬಂದಿತ್ತು.
ನಂತರದ ದಿನಗಳಲ್ಲಿ ಅದಕ್ಕೆ ಪುಷ್ಠಿ ನೀಡುವಂತಹ ಅನೇಕ ಬೆಳವಣಿಗೆಗಳು ನಡೆದವು. ಇದೀಗ ಅವೆಲ್ಲ ಅಂತಿಮ ಸ್ವರೂಪಕ್ಕೆ ಬಂದು ನಿಂತಿವೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರನ್ನು ಹೊರಗಿಟ್ಟು ರಾಜಕೀಯ ಧೃವೀಕರಣಕ್ಕೆ ಎಚ್.ಡಿ.ಕುಮಾರಸ್ವಾಮಿ ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಅಸ್ಥಿತ್ವ ಉಳಿಸಿಕೊಳ್ಳಲಿದೆ, ಜೆಡಿಎಸ್ ನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಲೇ ಕುಮಾರಸ್ವಾಮಿ ಬಿಜೆಪಿ ಸಖ್ಯ ಬೆಳೆಸಲು ಮುಂದಾಗಿದ್ದಾರೆ. ಕೆಲವರು ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾಗಲಿದೆ ಎನ್ನುವ ಮಾತುಗಳನ್ನು ಹೇಳಿದರೆ, ಇನ್ನು ಕೆಲವರು ಇದೊಂದು ತಾತ್ಕಾಲಿಕ ಮೈತ್ರಿ ಅಷ್ಟೆ ಎನ್ನುತ್ತಿದ್ದಾರೆ.
ಜೆಡಿಎಸ್ ನಂಬಿಕೆಗೆ ಅರ್ಹ ಪಕ್ಷವಲ್ಲ ಎಂದು ಬಿಜೆಪಿಯ ಕೆಲವು ನಾಯಕರೇ ಹೇಳುತ್ತಿದ್ದಾರೆ. ಬಿಜೆಪಿಗೆ ಮೈತ್ರಿಯ ಅವಶ್ಯಕತೆ ಈ ಹಂತದಲ್ಲಿ ಇಲ್ಲ. ಮೈತ್ರಿಗೆ ಮುಂದಾದರೆ ಮುಳುಗುತ್ತಿರುವ ಜೆಡಿಎಸ್ ಗೆ ಮರು ಹುಟ್ಟು ನೀಡಿದಂತಾಗುತ್ತದೆ ಎಂದೂ ಬಿಜೆಪಿಯ ಕೆಲವು ನಾಯಕರು ಎಚ್ಚರಿಕೆ ನೀಡುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ನಿಲುವೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಬಿಜೆಪಿ – ಜೆಡಿಎಸ್ ಸಖ್ಯ ಖಚಿತ. ಅದು ಮೊನ್ನೆ ಮೊನ್ನೆಯ ವಿಧಾನ ಪರಿಷತ್ ಘಟನೆಯ ವೇಳೆಯೂ ಬಹಿರಂಗವಾಗಿದೆ.ಆದರೆ ಯಾವ ರೀತಿಯಲ್ಲಿರುತ್ತದೆ, ಮೈತ್ರಿಯ ಸ್ವರೂಪ ಎಂತದ್ದು ಎನ್ನುವುದು ಇನ್ನೂ ಖಚಿತವಾಗಿಲ್ಲ. ಮುಂಬರುವ 3 ಉಪಚುನಾವಣೆ ಸಂದರ್ಭದಲ್ಲಿ ಇದಕ್ಕೊಂದು ರೂಪ ಸಿಗುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ