Kannada NewsLatest

ಗ್ರಾಪಂ‌ ಚುನಾವಣೆ: ಡಿ.30 ರಂದು‌ ಮತ ಎಣಿಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ತಾಲೂಕಿನ 55 ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣಾ ಮತ ಎಣಿಕೆ ಕಾರ್ಯ ಡಿಸೆಂಬರ್ 30ರಂದು ನಡೆಯಲಿದೆ. ಬೆಳಿಗ್ಗೆ 8 ಘಂಟೆಯಿಂದ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿನ ಬಿ.ಕೆ.ಮಾಡೆಲ್ ವಿದ್ಯಾಲಯದ ಆವರಣದಲ್ಲಿರುವ ಎನ್.ಎಸ್.ಪೈ ಸ್ಮರಣಾರ್ಥ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ ತಿಳಿಸಿದ್ದಾರೆ.

ನೇಮಿತರಾದ ಮತಗಳ ಎಣಿಕೆ ಏಜೆಂಟರು ಮತಗಳ ಎಣಿಕೆ ಕಾರ್ಯ ಪ್ರಾರಂಭವಾಗುವ ಒಂದು ಘಂಟೆ ಪೂರ್ವದಲ್ಲಿ ತಮ್ಮ ನಿಗದಿತ ಸ್ಥಳದಲ್ಲಿ ಹಾಜರಾಗುವುದು. ಪ್ರತೀ ವ್ಯಕ್ತಿಯು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸದೇ ಒಳಗಡೆ ಇರುವ ವ್ಯಕ್ತಿಯನ್ನು ತಕ್ಷಣವೇ ಹೊರ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಮತಗಳ ಎಣಿಕೆ ಕೇಂದ್ರಕ್ಕೆ ಪ್ರವೇಶ ಬಯಸುವ ಎಲ್ಲ ವ್ಯಕ್ತಿಗಳಿಗೆ ಕೋವಿಡ್-19 ಪರೀಕ್ಷಣೆಯು ಕಡ್ಡಾಯವಾಗಿದೆ. ಮುಖ್ಯ ದ್ವಾರದಲ್ಲಿ ಪ್ರತಿ ವ್ಯಕ್ತಿಯ ಕೋವಿಡ್-19 ಪರೀಕ್ಷಣೆಯನ್ನು ವೈದ್ಯಾಧಿಕಾರಿಗಳಿಂದ ನಡೆಸಲ್ಪಡುವುದಿದ್ದು, ಯಾವುದೇ ವ್ಯಕ್ತಿಗೆ ಸದರೀ ರೋಗದ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಹೆಚ್ಚಿನ ಪರೀಕ್ಷಣೆ ಮತ್ತು ಚಿಕಿತ್ಸೆ ಸಲುವಾಗಿ ತಕ್ಷಣವೇ ಜಿಲ್ಲಾ ಆಸ್ಪತ್ರೆಯ ಕೋವಿಡ್-19 ಕೇಂದ್ರಕ್ಕೆ ಕಳುಹಿಸಲಾಗುವುದು.

ಮತಗಳ ಎಣಿಕೆ ಕಾರ್ಯವನ್ನು ಪಂಚಾಯತಿವಾರು 120 ಟೇಬಲ್‌ಗಳಲ್ಲಿ ನಡೆಸಲಾಗುತ್ತಿದೆ. ಬೆಳಿಗ್ಗೆ 08-00 ರಿಂದ ಎಣಿಕೆ ಮುಕ್ತಾಯವಾಗುವವರೆಗೆ ನಡೆಸಲಾಗುತ್ತಿದ್ದು, ಒಂದು ಪಂಚಾಯತಿಯ ಎಣಿಕೆ ಕಾರ್ಯ ಮುಗಿದ ನಂತರ ಒಳಗಡೆ ಇರುವ ಎಣಿಕೆ ಏಜೆಂಟರನ್ನು ಹೊರಗೆ ಕಳುಹಿಸಲಾಗುವುದು ಮತ್ತು ಬೇರೆ ಪಂಚಾಯತಿಯ ಎಣಿಕೆ ಕಾರ್ಯವನ್ನು ಪ್ರಾರಂಭಿಸಿ, ಅದಕ್ಕೆ ಸಂಬಂಧಪಟ್ಟ ಎಣಿಕೆ ಏಜೆಂಟರನ್ನು ಒಳಪ್ರವೇಶಕ್ಕೆ ಅನುಮತಿಸಲಾಗುವುದು.

ಎಣಿಕೆ ಪ್ರಾರಂಭಕ್ಕೆ ಮೊದಲು ಎಣಿಕೆ ಕೈಗೆತ್ತಿಕೊಳ್ಳುವ ಪಂಚಾಯತಿಯ ಹೆಸರನ್ನು ಧ್ವನಿವರ್ಧಕ ಮೂಲಕ ತಿಳಿಸಲಾಗುವುದು ಮತ್ತು ಮತಗಳ ಎಣಿಕೆ ಏಜೆಂಟರು ನಂತರವೇ ಒಳ ಪ್ರವೇಶಿಸಲು ಅವಕಾಶ ನೀಡಲಾಗುವುದು. ಎಣಿಕೆ ಏಜೆಂಟರು ಚುನಾವಣಾಧಿಕಾರಿಯಿಂದ ಪಡೆದ ನಿರ್ದಿಷ್ಟಪಡಿಸಿದ ಬಣ್ಣದ ಪಾಸ್‌ನ್ನು ಭದ್ರತಾ ಸಿಬ್ಬಂದಿಗೆ
ತೋರಿಸುವುದು ಕಡ್ಡಾಯವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿರತಕ್ಕ ಅಭ್ಯರ್ಥಿಗಳ ಮತ್ತು ಅವರ ಮತಗಳ ಎಣಿಕೆ ಏಜೆಂಟರು ತಂತಮ್ಮ ವಾಹನಗಳನ್ನು ನಿಲ್ಲಿಸಲು ಕ್ಲಬ್ ರೋಡಿನ ಸಿಪಿಎಡ್ ಮೈದಾನದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಅಲ್ಲಿಯೇ ಅವರು ವಾಹನಗಳನ್ನು ನಿಲ್ಲಿಸತಕ್ಕದ್ದು, ಅಭ್ಯರ್ಥಿಯ ಅಥವಾ ಏಜೆಂಟರ ವಾಹನವು ದ್ವಿಚಕ್ರವಾಗಿದ್ದಲ್ಲಿ ಮಾತ್ರ ಅಂತಹ ವಾಹನಗಳನ್ನು ಕ್ಯಾಂಪ್ ಪ್ರದೇಶದಲ್ಲಿನ ಅಸದಖಾನ್ ದರ್ಗಾ ಮೈದಾನದಲ್ಲಿ ನಿಲ್ಲಿಸಬಹುದಾಗಿದೆ. ಚುನಾವಣಾಧಿಕಾರಿ ಮತ್ತು ಪೂರಕ ಸರ್ಕಾರಿ ಸಿಬ್ಬಂದಿಗಳು ತಮ್ಮ ವಾಹನಗಳನ್ನು ಚಂದನ್‌ ಟಾಕೀಸ್
ಆವರಣದಲ್ಲಿ ಅಥವಾ ಪಕ್ಕದ ಬೆಳಗಾವಿ ಗೆಸ್ಟ್ ಹೌಸ್ ಆವರಣದಲ್ಲಿ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ, ಪೂರ್ವದಿಂದ ಅಂಬಾ ಭವನದಿಂದ ಪ್ರವೇಶದ ರಸ್ತೆಯನ್ನು ಮತ್ತು ಪಶ್ಚಿಮದಿಂದ ಗ್ಲೋಬ್ ಟಾಕೀಸ್ ಕಡೆಯಿಂದ ಪ್ರವೇಶದ ರಸ್ತೆಯನ್ನು ಬ್ಯಾರಿಕೇಡಿಂಗ್ ಮೂಲಕ ವಾಹನಗಳ ಪ್ರವೇಶಕ್ಕೆ ಮತ್ತು ಪಾಸುಗಳನ್ನು ಹೊಂದಿಲ್ಲದ ವ್ಯಕ್ತಿಗಳಿಗೆ ಪ್ರವೇಶ ನಿರ್ಭಂಧಿಸಲಾಗಿದೆ.

ಅಭ್ಯರ್ಥಿಗಳು ಮತ್ತು ಮತಗಳ ಎಣಿಕೆ ಏಜೆಂಟರು ಅಥವಾ ಯಾವುದೇ ವ್ಯಕ್ತಿಯು ಮತಗಳ ಎಣಿಕೆ ಕೇಂದ್ರಕ್ಕೆ ಮೊಬೈಲ್ ಫೋನ್, ತಂಬಾಕು, ಬೀಡಿ, ಸಿಗರೇಟು, ಉಪಹಾರ ಮತ್ತು ಇನ್ನಿತರ ಯಾವುದೇ ನಿಷೇಧಿತ ಸಾಮಗ್ರಿಗಳನ್ನು ತರುವಂತಿಲ್ಲ. ಅಂತಹ ಸಾಮಗ್ರಿಗಳನ್ನು ಹೊಂದಿದ ವ್ಯಕ್ತಿಗಳನ್ನು ಪ್ರವೇಶ ನಿರಾಕರಿಸಿ, ದ್ವಾರದಿಂದಲೇ ಹಿಂದಕ್ಕೆ ಕಳುಹಿಸಲಾಗುವುದು. ಮತ್ತು ಮತಗಳ ಎಣಿಕೆ ಕೇಂದ್ರದಲ್ಲಿ ಇಂತಹ ಸಾಮಗ್ರಿಗಳನ್ನು ಉಪಯೋಗಿಸುವುದು ಕಂಡುಬಂದಲ್ಲಿ ಕಾನೂನಿನ ಮೇರೆಗೆ ಕ್ರಮ ಕೈಕೊಳ್ಳಲಾಗುವುದು.

ಅಭ್ಯರ್ಥಿಗಳು ಮತ್ತು ಎಣಿಕೆ ಏಜೆಂಟರು ಸೂಕ್ತ ಸಹಕಾರ ಶಾಂತಿಯುತವಾಗಿ ನಡೆಸಿ ಮುಕ್ತಾಯಗೊಳಿಸಲು ಸಹಕರಿಸಬೇಕೆಂದು ತಹಶಿಲ್ದಾರ ಕುಲಕರ್ಣಿ ಅವರು ಕೋರಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button