Latest

 ಅನುಭವ ಮಂಟಪ ನಿರ್ಮಾಣಕ್ಕೆ  ಯಡಿಯೂರಪ್ಪ  ಶಂಕುಸ್ಥಾಪನೆ 

ಪ್ರಗತಿವಾಹಿನಿ ಸುದ್ದಿ, ಬೀದರ್ -: ಸಾವಿರಾರು ಬಸವ ಅನುಯಾಯಿಗಳ ಸಮ್ಮುಖದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನವರಿ 6ರಂದು ಹಳೆಯ ಅನುಭವ ಮಂಟಪದ ಹತ್ತಿರದ ಆವರಣದಲ್ಲಿ ಶಂಕುಸ್ಥಾಪನೆ  ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಇದು ಪೂರ್ವಜನ್ಮದ ಪುಣ್ಯ ಕಾರ್ಯ ಎಂದು ತಿಳಿಸಿದರು. ಅನುಭವ ಮಂಟಪ ನಿರ್ಮಾಣಕ್ಕೆ ಈಗಾಗಲೇ 100 ಕೋಟಿ ರೂ ಬಿಡುಗಡೆ ಮಾಡಿದ್ದು, ಇನ್ನು 100 ಕೋಟಿ ರೂಗಳನ್ನು ವಾರದೊಳಗೆ ಬಿಡುಗಡೆ ಮಾಡಿ, ಟೆಂಡರ್ ಪ್ರಕ್ರಿಯೆ ಪೂರ್ಣವಾದ ಕೂಡಲೇ ಕಟ್ಟಡ ನಿರ್ಮಾಣ ಕಾರ್ಯವನ್ನು ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಇತಿಹಾಸದಲ್ಲಿ ಇಂದು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ದಿನವಾಗಿದೆ ಎಂದ ಅವರು, ಸಾಧನೆ ಮಾತನಾಡಬೇಕು. ಮಾತಾಡುವುದು ಸಾಧನೆಯಾಗಬಾರದು ಎನ್ನುವುದು ತಮ್ಮ ಮನೋಭಾವವಾಗಿದೆ. ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಅಂತೆಯೇ ಎರಡು ವರ್ಷದೊಳಗೆ ಅನುಭವ ಮಂಟಪ ನಿರ್ಮಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.
ಅವರು ಇವರು ಎನ್ನದೇ ಎಲ್ಲ ಸಮುದಾಯದ ಜನರು ಸೇರಿ ಚರ್ಚಿಸಿ ಚಿಂತನ ಮಂಥನ ನಡೆಸುತ್ತಿದ್ದ  ಅನುಭವ ಮಂಟಪವು ಆದರ್ಶ ಸಂಸತ್ತಿನ ಮಾದರಿಯಾಗಿದೆ ಎಂದರು.
ಸಾಮಾಜಿಕ ಬದಲಾವಣೆ ತರುವಲ್ಲಿ ಅನುಭವ ಮಂಟಪದ ಪಾತ್ರವು ಅತೀ  ಮಹತ್ವದ್ದಾಗಿದೆ. ಮನುಕುಲದ ಏಳ್ಗೆಗೆ ಇಡೀ ವಚನ ಸಾಹಿತ್ಯ ಮಾರ್ಗದರ್ಶಿಯಾಗಿದೆ ಎಂದರು. ಅಣ್ಣ ಬಸವಣ್ಣನವರು ಈ ಕಲ್ಯಾಣ ನಾಡಿನಿಂದ ಹೊರಹೊಮ್ಮಿದ ಈ ದೇಶ ಕಂಡ ಬಹುದೊಡ್ಡ ವಿಶ್ವಗುರು ಅನ್ನುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಗೋ.ರು.ಚ ಅವರಂತಹ ಇನ್ನೂ ಅನೇಕ ಹಿರಿಯ ಸಾಹಿತಿಗಳ ಸಲಹೆ ಪಡೆದು, ಈ ಭಾಗದ ಜನರ ಬೇಡಿಕೆಯಂತೆ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ, ಪ್ರತಿ ವರ್ಷ ಬಸವ ಉತ್ಸವ ಆಚರಣೆಗೆ ಅವಕಾಶ ಕಲ್ಪಿಸಲಾಗುವುದು. ಇಂತಹ ಒಳ್ಳೆಯ ಕಾರ್ಯಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ,  ಪ್ರಧಾನ ಮಂತ್ರಿಗಳು ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಮಂದಿರ ನಿರ್ಮಾಣಕ್ಕೆ  ಚಾಲನೆ ನೀಡಿದಂತೆ, ಇಡೀ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಅನುಭವ ಮಂಟಪ ನಿರ್ಮಾಣಕ್ಕೆ ಇಂದು ಮುಖ್ಯಮಂತ್ರಿಗಳು ಭೂಮಿ  ಪೂಜೆ ನೆರವೇರಿಸಿದ್ದು ಕೂಡ ಒಂದು ಐತಿಹಾಸಿಕ ಪ್ರಯತ್ನ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಶು ಸಂಗೋಪನೆ, ಹಜ್ ಮತ್ತು ವಕ್ಪ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಮಾತನಾಡಿ, ಈ ಶರಣ ಕಾಯಕ ಭೂಮಿಯಲ್ಲಿ
12ನೇ ಶತಮಾನದ ವೈಭವವನ್ನು ಪುನರ್ ಸ್ಥಾಪಿಸುವ ಉದ್ದೇಶದಿಂದ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಚಾಲನೆ ನೀಡಿದ್ದು, ಬೀದರ್ ಮತ್ತು ರಾಜ್ಯದ ಐತಿಹಾಸಿಕ ಪುಟಗಳಲ್ಲಿ ದಾಖಲಾಗುವಂತದ್ದಾಗಿದೆ ಎಂದರು.
ಶ್ರೀ ಚನ್ನಬಸವ ಪಟ್ಟದ್ದೇವರ ಸಂಕಲ್ಪ ಇಂದು ಕೂಡಿ ಬಂದಿದೆ. ಶ್ರೀ ಬಸವಲಿಂಗ ಪಟ್ಟದ್ದೇವರು ಸೇರಿದಂತೆ ಈ ಭಾಗದ ಎಲ್ಲ ಶ್ರೀಗಳ ಮತ್ತು ಜನರ ಆಶಯದಂತೆ ಕಾಮಗಾರಿ ಬೇಗ ಪೂರ್ಣವಾಗಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಶಾಸಕರಾದ ಈಶ್ವರ ಖಂಡ್ರೆ ಅವರು ಮಾತನಾಡಿ, ಇಂದು ಬಸವ ಅನುಯಾಯಿಗಳಿಗೆ ಸಂತಸದ ದಿನ. ಈ ಕಟ್ಟಡ ಬೇಗ ನಿರ್ಮಾಣವಾಗಬೇಕು. ಈ ಮೂಲಕ ಬಸವಕಲ್ಯಾಣದ ಕೀರ್ತಿ ವಿಶ್ವದೆಲ್ಲೆಡೆ ಹರಡಲಿ ಎಂದು ತಿಳಿಸಿದರು.
ಇದಕ್ಕೂ ಮೊದಲು ಮಾತನಾಡಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ವಿಶೇಷ ಅಧಿಕಾರಿ ಡಾ.ಹೆಚ್.ಆರ್.ಮಹಾದೇವ್ ಅವರು ಮಾತನಾಡಿ, ದೇಶದ ಇತಿಹಾಸದಲ್ಲಿಯೇ ನಾವು ಇಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೇವೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನಾಡಿನ ಹಿರಿಯ ಚಿಂತಕರು ಹಾಗೂ ಅನುಭವ ಮಂಟಪದ ನಿರ್ಮಾಣಕ್ಕೆ ಸಂಬಂಧಿಸಿದ ತಜ್ಞರ ಸಮಿತಿಯ ಅಧ್ಯಕ್ಷರಾದ ಗೋ.ರು.ಚನ್ನಬಸಪ್ಪ,  ಬಸವರಾಜ ಪಾಟೀಲ ಸೇಡಂ ಮಾತನಾಡಿದರು.
ಸಮಾರಂಭದಲ್ಲಿ ಶ್ರೀಗಳು, ಸಚಿವರು, ಸಂಸದರು,‌ ಶಾಸಕರು, ಡಿಸಿ,‌ ಸಿಇಓ, ಎಸ್ಪಿ, ಬಿಕೆಡಿಬಿ ಕಮಿಷನರ್ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button