ಪ್ರಾಣಿಗಳಿಗಾಗಿ ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿ – ಸಚಿವರಲ್ಲಿ ಡಾ.ಸೋನಾಲಿ ಸರ್ನೋಬತ್ 4 ಬೇಡಿಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರಾಣಿಗಳಿಗೂ ಅಂಬುಲೆನ್ಸ್ ಸೌಲಭ್ಯ ಕಲ್ಪಿಸುವುದು ಸೇರಿದಂತೆ 4 ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರಿಗೆ ಸಲ್ಲಿಸಿದ್ದಾರೆ.
ಶುಕ್ರವಾರ ಬೆಳಗಾವಿಯಲ್ಲಿ ಸಚಿವರನ್ನು ಭೇಟಿ ಮಾಡಿ ಸರ್ನೋಬತ್, ನಗರ ಮಧ್ಯದಲ್ಲಿರುವ ಗೋಮಾಂಸದ ಮಾರುಕಟ್ಟೆಯನ್ನು ನಗರದಿಂದ ಹೊರಗೆ ಸ್ಥಳಾಂತರಿಸಬೇಕು. ನಗರದಲ್ಲಿರುವ ಬಿಡಾಡಿ ನಾಯಿಗಳಿಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಬೇಕು, ಬೆಳಗಾವಿಯಲ್ಲಿ ಪ್ರಾಣಿ ಹಿಂಸೆ ತಡೆ ಸಮಿತಿ ರಚಿಸಬೇಕು ಎನ್ನುವ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಗೋಮಾಂಸ ಮಾರುಕಟ್ಟೆ ಜನನಿಬಿಡ ಪ್ರದೇಶದಲ್ಲಿರುವುದರಿಂದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೆ ಅದನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.
ನಗರದಲ್ಲಿ ನಾಯಿಗಳ ಸಂಖ್ಯೆ ಅತಿಯಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅವುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಈ ಕುರಿತು ಸಂಬಂಧಿಸಿದವರಿಗೂ ಸೂಚನೆ ನೀಡಬೇಕು ಎಂದು ಕೋರಿದ್ದಾರೆ.
ಜಿಲ್ಲೆಯಲ್ಲಿ ಪ್ರಾಣಿ ಹಿಂಸೆ ತಡೆ ಸಮಿತಿ ರಚಿಸುವಂತೆ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರಿಗೆ ಹಲವು ಬಾರಿ ವಿನಂತಿಸಿದ್ದರೂ ಕ್ರಮ ಕೈಗೊಂಡಿಲ್ಲ. ತಕ್ಷಣ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಬೇಕು ಎಂದು ಸೋನಾಲಿ ಸರ್ನೋಬತ್ ವಿನಂತಿಸಿದ್ದಾರೆ.
ಬೆಳಗಾವಿಯಲ್ಲಿ ಪ್ರಾಣಿಗಳಿಗೂ ಅಂಬುಲನ್ಸ್ ವ್ಯವಸ್ಥೆ ಕಲ್ಪಿಸಬೇಕು ಎಂದೂ ಅವರು ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ