ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಕೊ.ಚೆನ್ನಬಸಪ್ಪ ಶನಿವಾರ ಬೆಳಿಗ್ಗೆ ನಿಧನರಾದರು.
ಅವರಿಗೆ 96 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಕಾನಾಮಡಗು ಸಮೀಪದ ಆಲೂರಿನವರಾದ ಚನ್ನಬಸಪ್ಪ, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸೆರೆವಾಸ ಅನುಭವಿಸಿದ್ದರು.
ತಂದೆ ವೀರಣ್ಣ. ತಾಯಿ ಬಸಮ್ಮ. ಕಾನಮಡುಗು ಹಳ್ಳಿಯಲ್ಲಿ ಪ್ರೈಮರಿ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ . ನಂತರ ಪ್ರೌಢಶಾಲೆಗೆ ಬಳ್ಳಾರಿ, ನಂತರ ಕಾಲೇಜು ವಿದ್ಯಾಭ್ಯಾಸ ಅನಂತಪುರದಲ್ಲಿ ನಡೆಯಿತು. ಆಗ ದೇಶಕ್ಕೆ ಹಬ್ಬಿದ್ದ ಸ್ವಾತಂತ್ರ್ಯದ ಬಿಸಿ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ವಿದ್ಯಾರ್ಥಿ ಮುಖಂಡರಾಗಿ ಭಾಗಿಯಾಗಿ ಬಂಧನ, ಸೆರೆಮನೆವಾಸ ಅನುಭವಿಸಿದರು. ಬಿಡುಗಡೆಯ ನಂತರ ಬಿ.ಎ. ಪದವಿ, ಬೆಳಗಾವಿ ಕಾಲೇಜಿನಿಂದ ಲಾ ಪದವಿ. ಚರಿತ್ರೆ ಮತ್ತು ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಕೂಡ ಪಡೆದರು.
೧೯೪೬ರಲ್ಲಿ ಮುಂಬಯಿ ಹೈಕೋರ್ಟಿನಲ್ಲಿ ವಕೀಲರಾಗಿ ನೋಂದಣಿಗೊಂಡು, ಬಳ್ಳಾರಿ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದ ಅವರು, ೧೯೬೫ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ನೇಮಕವಾದರು. ನಿವೃತ್ತಿಯ ನಂತರ ಪುನಃ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ. ಹಲವಾರು ಕಾರ್ಮಿಕ ಸಂಘಗಳ, ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಅಧ್ಯಕ್ಷರ ಜವಾಬ್ದಾರಿ ನಿರ್ವಹಿಸಿದರು.
೧೯೭೧ರ ಸುಮಾರಿನಲ್ಲೆ ಅರವಿಂದಾಶ್ರಮದ ಒಡನಾಟ ಇರಿಸಿಕೊಂಡಿದ್ದರು. ಕರ್ನಾಟಕ ವಿಭಾಗದ ಅರವಿಂದಾಶ್ರಮ ಪ್ರಾರಂಭ ಮಾಡಿದರು. ಅಮೆರಿಕದಲ್ಲಿ ನಡೆದ ವೀರಶೈವ ವಾರ್ಷಿಕ ಅವೇಶನ, ಅರವಿಂದಾಶ್ರಮದ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ. ಸಾಹಿತ್ಯದ ಗೀಳು ಹಚ್ಚಿಕೊಂಡ ಇವರು ನಾಡಿನ ಪ್ರಮುಖ ಪತ್ರಿಕೆಗಳಿಗೆಲ್ಲಾ ಲೇಖನಗಳನ್ನು ಬರೆದಿದ್ದಾರೆ. ಪ್ರಕಟಿತ ಕೃತಿಗಳೇ ಸುಮಾರು ೮೦ಕ್ಕೂ ಹೆಚ್ಚು. ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಮೊದಲಾದ ೫ ಕವನ ಸಂಕಲನಗಳು, ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಮುಂತಾದ ೬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದರು. ಹಿಂದಿರುಗಿ ಬರಲಿಲ್ಲ, ನೊಗದ ನೇಣು, ರಕ್ತತರ್ಪಣ, ಬೇಡಿ ಕಳಚಿತು-ದೇಶ ಒಡೆಯಿತು ಮೊದಲಾದ ೯ ಕಾದಂಬರಿಗಳು. ಶ್ರೀ ಅರವಿಂದರು, ಶ್ರೀ ಮಾತಾಜಿ, ಶ್ರೀ ಮೃತ್ಯುಂಜಯಸ್ವಾಮಿಗಳು ಮೊದಲಾದ ೮ ಜೀವನಚರಿತ್ರೆಗಳು. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ದೃಢಪ್ರತಿಜ್ಞೆ, ಕುವೆಂಪು ವೈಚಾರಿಕತೆ ಮೊದಲಾದ ವಿಮರ್ಶಾ ಗ್ರಂಥಗಳು. ರಕ್ಷಾಶತಕಂ, ಶ್ರೀ ಕುವೆಂಪು ಭಾಷಣಗಳು, ಬಿನ್ನವತ್ತಳೆಗಳು ಸಂಪಾದಿತ ಕೃತಿಗಳನ್ನು ಚನ್ನಬಸಪ್ಪ ಪ್ರಕಟಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ