ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜನೇವರಿ ೩೧ (ಭಾನುವಾರ) ರಂದು ಪಲ್ಸ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ರಾಷ್ಟ್ರಾದ್ಯಂತ ಹಮ್ಮಿಕೊಳ್ಳಲಾಗಿದೆ. ೨೦೧೧ ರಿಂದ ಈಚೆಗೆ ಭಾರತ ದೇಶದಲ್ಲಿ ಯಾವುದೇ “Wild Polio Virus“ ಪ್ರಕರಣಗಳು ಕಂಡುಬಂದಿಲ್ಲ.
೨೦೦೭ ರಲ್ಲಿ ಕೊನೆಯದಾಗಿ ಬಿಹಾರ ಮೂಲದ ಕಾರ್ಮಿಕರ ಮಕ್ಕಳಲ್ಲಿ, ಕರ್ನಾಟಕದ ಬೆಂಗಳೂರಿನಲ್ಲಿ ಪೋಲಿಯೋ ಪ್ರಕರಣ ವರದಿಯಾಗಿತ್ತು. ಆದರೆ ಕಳೆದ ೨೩ ವರ್ಷದಿಂದ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಇನ್ನೂ ಪ್ರಕರಣಗಳು ಕಂಡು ಬರುತ್ತಿದ್ದು ಅಲ್ಲಿಂದ ಭಾರತ ದೇಶಕ್ಕೂ ಕೂಡ ರೋಗ ಪಸರಿಸುವ ಅಪಾಯ ಇದೆ. ಅದಲ್ಲಿಯೂ ಅತೀ ಅಪಾಯಕಾರಿ ವರ್ಗಗಳಾದ ಅಲೆಮಾರಿ ಜನಾಂಗ, ಗುಡ್ಡಗಾಡು ಜನಾಂಗ ಹಾಗೂ ತಪ್ಪು ತಿಳುವಳಿಕೆಯಿಂದ ಸಾರ್ವತ್ರಿಕ ಲಸಿಕೆಗಳನ್ನು ಪಡೆದುಕೊಳ್ಳದೇ ಇರುವ ಜನಾಂಗಗಳಲ್ಲಿ ಈ ಅಪಾಯ ತುಂಬಾನೆ ಇದೆ.
ಆದ್ದರಿಂದ ಜನೇವರಿ ೩೧ ರಂದು ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಭಾನುವಾರದಂದು ಅನಿವಾರ್ಯಕಾರಣಗಳಿಂದ ಲಸಿಕೆ ವಂಚಿತ ಮಕ್ಕಳಿಗೆ ಫೆಬ್ರುವರಿ ೦೧, ೦೨ ಮತ್ತು ೦೩ನೇ ತಾರೀಖಿನಂದು ಮನೆ ಮನೆಗೆ ತೆರಳಿ ಪೋಲಿಯೋ ಹನಿ ನೀಡಲಾಗುವುದು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ಎಲ್ಲ ಆರೋಗ್ಯ ಕಾರ್ಯಕರ್ತೆಯರಿಗೆ ತರಬೇತಿ ಹಾಗೂ ಇನ್ನಿತರೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಅಲ್ಲದೇ ಎನ್.ಸಿ.ಸಿ, ಎನ್.ಎಸ್.ಎಸ್, ನರ್ಸಿಂಗ ವಿದ್ಯಾರ್ಥಿಗಳು ಹಾಗೂ ರೋಟರಿ, ಲೈಯನ್ಸ್ರವರ ಸಹಯೋಗದೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ ೦-೫ ವರ್ಷದೊಳಗಿನ ಅಂದಾಜು ೫,೧೧,೬೦೬ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ ಹಾಗೂ ಅಂದಾಜು ೯,೭೭,೪೪೭ ಮನೆಗಳನ್ನು ಭೇಟಿ ಮಾಡಿ ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ಹಾಕಲಾಗುವುದು.
ಜಿಲ್ಲೆಯಲ್ಲಿ ಒಟ್ಟು ೨೩೭೭ ಪೋಲಿಯೋ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.. ಅಲ್ಲದೇ ೨೬ ಮೊಬೈಲ್ ತಂಡ ಹಾಗೂ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ ಮುಂತಾದ ಕಡೆಗಳಲ್ಲಿ ಸಾಗಣೆ ಭೂತಗಳನ್ನು ಸ್ಥಾಪಿಸಲಾಗಿದೆ. ೯೭೬೭ ಕಾರ್ಯಕರ್ತೆಯರನ್ನು ಹಾಗೂ ೫೫೩ ಮೇಲ್ವಿಚಾರಕರನ್ನು ಆಯ್ಕೆ ಮಾಡಲಾಗಿದೆ.
ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆಗಳನ್ನು ಹಾಕಿಸಿದ್ದರೂ ಸಹ ತಮ್ಮ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಇದೇ ಜನೇವರಿ ೩೧ ರಂದು ಪೋಲಿಯೋ ಲಸಿಕೆಯನ್ನು ಹಾಕಿಸಬೇಕು.
ಕೋವಿಡ್ -೧೯ ಹಿನ್ನೆಲೆಯಲ್ಲಿ ಪಾಲಕರು/ಪೋಷಕರು ತಮ್ಮ ಮಕ್ಕಳನ್ನು ಪೋಲಿಯೋ ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸುವದು, ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಂಡು ಬರುವಂತೆ ತಿಳಿಸಲಾಗಿದೆ.
ಕಡ್ಡಾಯವಾಗಿ ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲಿಸಿ ರಾಷ್ಟೀಯ ಪಲ್ಸ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ವೈದ್ಯಾಧಿಕಾರಿಗಳು, ಆರೋಗ್ಯ ಕಾರ್ಯಕರ್ತಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕಿಸುವುದು. ಅಥವಾ ಉಚಿತ ಸಹಾಯವಾಣಿ ೧೦೪ ಕ್ಕೆ ಸಂಪರ್ಕಿಸುವುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ