Latest

ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಹೂಡಿಕೆಗೆ ಮುಂದಾಗುವಂತೆ ಉದ್ಯಮಿಗಳಿಗೆ ಸಚಿವ ಶೆಟ್ಟರ್ ಕರೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರು ನಗರದಂತೆಯೇ ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ನೂತನ ಕೈಗಾರಿಕಾ ನೀತಿಯಲ್ಲಿ ಸಾಕಷ್ಟು ವಿಶೇಷ ಅನುಕೂಲಗಳನ್ನು ಮಾಡಲಾಗಿದ್ದು, ಬೆಂಗಳೂರು ನಗರ ಹೊರತುಪಡಿಸಿ ಬೇರೆ ಜಿಲ್ಲೆಗಳತ್ತ ಗಮನ ಹರಿಸುವಂತೆ ಕೈಗಾರಿಕೋದ್ಯಮಿಗಳಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಕರೆ ನೀಡಿದರು.

ಇಂದು ಏರೋ ಇಂಡಿಯಾ 2021 ಕಾರ್ಯಕ್ರಮ ದಲ್ಲಿ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶ್ರೀ ಜಗದೀಶ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ಏರೋ ಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ರಾಜ್ಯದಲ್ಲಿ ಇರುವ ವಿಫುಲ ಅವಕಾಶಗಳ ತಿಳಿಸುವ ಸಮಾವೇಶದಲ್ಲಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ಮೊದಲಿನಿಂದಲೂ ಕೈಗಾರಿಕಾ ಸ್ನೇಹಿ ರಾಜ್ಯವಾಗಿದೆ. ಇತ್ತೀಚಿನ ಹಲವಾರು ನೂತನ ನೀತಿಗಳು ಹಾಗೂ ಕಾಯ್ದೆಗಳು ರಾಜ್ಯವನ್ನು ದೇಶದಲ್ಲಿಯೇ ಬಂಡವಾಳ ಹೂಡಿಕೆಯ ಪ್ರಮುಖ ರಾಜ್ಯವನ್ನಾಗಿಸಿದೆ. ನೀತಿ ಆಯೋಗದ ಸೂಚ್ಯಾಂಕದಲ್ಲಿ ಸತತ ಎರಡು ವರ್ಷಗಳ ಕಾಲ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಸಂಶೋಧನೆ ಹಾಗೂ ಅಭಿವೃದ್ದಿಯ ಪ್ರಮುಖ ಕೇಂದ್ರವಾಗಿದ್ದು, ಸ್ಟಾರ್ಟ್‌ ಅಪ್‌ಗಳ ರಾಜಧಾನಿ ಎಂದೇ ಹೆಸರುವಾಸಿಯಾಗಿದೆ. ಕೈಗಾರಿಕಾ ಸೌಲಭ್ಯ ಅಧಿನಿಯಮ ನ್ನು ಜಾರಿಗೊಳಿಸುವ ಮೂಲಕ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಬಹಳ ಸುಲಭವಾಗಿದೆ ಎಂದು ಹೇಳೀದರು.

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೈಗಾರಿಕೆಗಳು ಬಂಡವಾಳ ಹೂಡಿಕೆಗೆ ಮುಂದಾಗುತ್ತಿವೆ. ಆದರೆ, ರಾಜ್ಯದ ಇತರ ಎರಡನೇ ಹಾಗೂ ಮೂರನೇ ಹಂತದ ಜಿಲ್ಲೆಗಳಲ್ಲೂ ಬಂಡವಾಳ ಆಕರ್ಷಿಸಲು ಅನುಕೂಲ ಮಾಡಿಕೊಡುವಂತಹ ಕ್ರಾಂತಿಕಾರಿ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಲಾಗಿದೆ. ಇದು ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡುವ ಕೈಗಾರಿಕೆಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಲಿದೆ. ರಾಜ್ಯದ ಇತರ ಜಿಲ್ಲೆಗಳಲ್ಲೂ ಕೈಗಾರಿಕೆಗಳ ಸ್ಥಾಪನೆ ಹಾಗೂ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಉತ್ತಮ ಸಾರಿಗೆ ಸಂಫರ್ಕ, ಉತ್ತಮ ಮಾನವ ಸಂಪನ್ಮೂಲ ಸೇರಿದಂತೆ ಹಲವಾರು ಸೌಲಭ್ಯಗಳನ್ನು ರಾಜ್ಯ ಸರಕಾರ ನೀಡುತ್ತಿದೆ. ಇದರ ಉಪಯೋಗವನ್ನು ಮಾಡಿಕೊಳ್ಳುವಂತೆ ಉದ್ಯಮಿಗಳೀಗೆ ಸಚಿವರು ಕರೆ ನೀಡಿದರು.

ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ ಮಾತನಾಡಿ, ಕರ್ನಾಟಕ ರಾಜ್ಯ ಏರೋಸ್ಪೇಸ್‌ ಹಾಗೂ ರಕ್ಷಣಾ ನೀತಿಯನ್ನು ಘೋಷಿಸಿರುವ ರಾಜ್ಯವಾಗಿದೆ. ಇತ್ತೀಚಿಗೆ ಘೋಷಣೆ ಮಾಡಿರುವ ನೂತನ ಕೈಗಾರಿಕಾ ನೀತಿಯಲ್ಲಿಯೂ ಕೂಡಾ ಈ ಕ್ಷೇತ್ರಕ್ಕೆ ವಿಶೇಷ ಒತ್ತನ್ನು ನೀಡಲಾಗಿದೆ. ರಾಜ್ಯದಲ್ಲಿ ಈ ಕ್ಷೇತ್ರದಲ್ಲಿ ಹೂಡಿಕೆಗೆ ಹಲವಾರು ಅವಕಾಶಗಳಿದ್ದು, ಸಾಕಷ್ಟು ಸೌಲಭ್ಯಗಳನ್ನು ನೀಡಲಾಗಿದೆ ಎಂದು ಹೇಳಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣಾ, ಸಿಐಐ ಅಧ್ಯಕ್ಷ ಸಂದೀಪ್ ಸಿಂಗ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button