ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ಬೆಳಗಾವಿ ಎಂದಿಗೂ ನಮ್ಮದೇ. ಈ ವಿಚಾರದಲ್ಲಿ ಪಕ್ಷಬೇಧ ಮರೆತು ಎಲ್ಲರೂ ಒಗ್ಗಟ್ಟು ಪ್ರದರ್ಶಿಸೋಣ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಮೂಡಲಗಿ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಗಡಿ ವಿಚಾರದಲ್ಲಿ ಮಹಾಜನ ವರದಿಯೇ ಅಂತಿಮ. ಅಖಂಡ ಬೆಳಗಾವಿ ಎಂದಿಗೂ ನಮ್ಮದೇ. ಈ ವಿಚಾರದಲ್ಲಿ ತಮ್ಮ ತಮ್ಮ ಪ್ರತಿಷ್ಠೆ ಬದಿಗಿಟ್ಟು ಪಕ್ಷಾತೀತವಾಗಿ ಕನ್ನಡ ನಾಡು, ನುಡಿ, ನೆಲ, ಜಲಕ್ಕಾಗಿ ಹೋರಾಟ ನಡೆಸಬೇಕಾಗಿದೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯು ಪ್ರಪಂಚದ ಅತ್ಯಂತ ಶ್ರೀಮಂತ ಭಾಷೆ. ನಮ್ಮ ಭಾಷೆ ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿರುವುದು ಕನ್ನಡ ಭಾಷೆಯ ಗೌರವವನ್ನು ಎತ್ತಿ ತೋರುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯಕ್ಕೆ 8 ಜ್ನಾನಪೀಠ ಪ್ರಶಸ್ತಿ ಲಭಿಸಿದ್ದು, ಹಿಂದಿ ಹೊರತುಪಡಿಸಿದರೆ ಅತೀ ಹೆಚ್ಚು ಜ್ನಾನಪೀಠ ಪ್ರಶಸ್ತಿಗಳು ಕನ್ನಡ ಸಾರಸ್ವತ ಲೋಕಕ್ಕೆ ದೊರೆತಿರುವುದು ಕನ್ನಡಿಗರಿಗೆ ಹೆಮ್ಮೆ ಎಂದರು.
ಭಾಷೆಯ ವಿಚಾರವಾಗಿ ಯಾರೂ ರಾಜಕಾರಣ ಮಾಡಬಾರದು ಹಾಗೆ ಮಾಡಿದರೆ ಕನ್ನಡ ನಾಡಿಗೆ ಅವಮಾನ ಮಾಡಿದಂತೆ. ಕನ್ನಡ ನಾಡಿನಲ್ಲಿ ಕನ್ನದವೇ ಸತ್ಯ, ಕನ್ನಡವೇ ನಿತ್ಯ. ಕನ್ನಡ ಭಾಷೆ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು. ಜೊತೆಗೆ ಅನ್ಯ ಭಾಷೆ ಗೌರವಿಸಬೇಕು ಎಂದರು.
ಮೂಡಲಗಿ ಹೊಸ ತಾಲೂಕು ರಚನೆಯಾದ ಬಳಿಕ ನಡೆಯುತ್ತಿರುವ ಪ್ರಹಮ ಕನ್ನಡ ಸಮೇಳನ ನಡೆಯುತ್ತಿರುವುದು ಖುಷಿಯ ವಿಚಾರ. ಕಳೆದ ಮಾರ್ಚ್ 14ರಂದು ನಡೆಯಬೇಕಿದ್ದ ಕನ್ನಡ ಸಮ್ಮೇಳನ ಕೋವಿಡ್ ಕಾರಣಕ್ಕೆ ಮುಂದೂಡಿಕೆಯಾಗಿತ್ತು. ಈಗ ದೇವರ ದಯೆಯಿಂದ ಮತ್ತೆ ಎಲ್ಲ ಕನ್ನಡ ಮನಸ್ಸುಗಳು ಸೇರುವ ಸಂಭ್ರಮ ಕೂಡಿ ಬಂದಿದೆ. ಮೇಲಿಂದ ಮೇಲೆ ಸಾಹಿತ್ಯ ಸಮ್ಮೇಳನ ನಡೆಯುವುದರಿಂದ ಯುವ ಸಾಹಿತಿಗಳ ಬೆಳವಣಿಗೆಗೆ ಪ್ರೇರಣೆಯಾಗುತ್ತದೆ. ಮಕ್ಕಳು, ವಿದ್ಯಾರ್ಥಿಗಳಿಗೆ ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಯುತ್ತದೆ ಎಂದು ಹೇಳಿದರು.
ಫೆಬ್ರವರಿ ಕೊನೇ ವಾರದಲ್ಲಿ ನಡೆಯುವ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಗತ್ಯ ನೆರವು ನೀಡುವುದಾಗಿ ಪ್ರಕಟಿಸಿದ ಅವರು, ಕಲೆ, ಸಾಹಿತ್ಯ, ಸಂಸ್ಕೃತಿಯ ಕಂಪು ನಿರಂತರವಾಗಿರಬೇಕು ಎಂದರು.
ಸಮ್ಮೇಳನದ ದಿವ್ಯ ಸಾನ್ನಿದ್ಯವನ್ನು ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಶಿವಾನಂದ ಮಹಾಸ್ವಾಮಿಜಿ ವಹಿಸಿದ್ದರು.
ಕನ್ನಡ ಪ್ರಜ್ಞೆಯನ್ನು ಸದಾ ಜೀವಂತವಾಗಿರಿಸಿ:
ಸರ್ವಾಧ್ಯಕ್ಷ ಸಂಗಮೇಶ ಗುಜಗೊಂಡ ಕನ್ನಡ ಗಟ್ಟಿ ನೆಲೆಗಳಾದ ಹಳ್ಳಿಗಳಲ್ಲಿಯೇ ಕನ್ನಡತನವನ್ನು ಉದ್ದೀಪಿಸುವ ಕೈಂಕರ್ಯವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದ್ದು ವಿಷಾದನೀಯ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಜಾಗತೀಕರ ಕಬಂದಬಾಹುವಿನಲ್ಲಿ ಭಾಷೆ ಸಂಸ್ಕೃತಿ ನಲುಗಲು ಅವಕಾಶ ನೀಡದಿರೋಣ, ಕನ್ನಡ ಪ್ರಜ್ಞೆಯನ್ನು ಸದಾ ಜೀವಂತವಾಗಿ ಇಟ್ಟುಕೊಳ್ಳೋಣ ಎಂದರು.
ವೇದಿಕೆ ಮೇಲೆ ಸಮ್ಮೇಳನದ ಸರ್ವಾಧ್ಯಕ್ಷ ಸಂಗಮೇಶ ಗುಜಗೊಂಡ ದಂಪತಿಗಳು, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಹಿರಿಯ ಸಹಕಾರಿ ಬಿ.ಆರ್.ಪಾಟೀಲ(ನಾಗನೂರ), ಜಿ.ಪಂ ಸದಸ್ಯರಾದ ಬಸವ್ವ ಕುಳ್ಳುರು, ಕಸ್ತೂರಿ ಕಮತೆ, ಶಂಕುತಲಾ ಪರುಶೆಟ್ಟಿ, ಮೂದಲಗಿ ಪುರಸಭೆ ಅಧ್ಯಕ್ಷ ಹಣಮಂಅ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಜಿ.ಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಜಿ.ಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಪುರಸಭೆ ಸದಸ್ಯರು, ಕಸಾಪ ಪದಾಧಿಕಾರಿಗಳು, ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.
ಕಸಾಪ ತಾಲೂಕಾಧ್ಯಕ್ಷ ಶಿದ್ರಾಮ ದಾಗ್ಯಾನಟ್ಟಿ ಸ್ವಾಗತಿಸಿದರು. ಸಾಹಿತಿ ಮತ್ತು ಹಿರಿಯ ಪತ್ರಕರ್ತ ಬಾಲಶೇಖರ ಬಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಚಂಡಕಿ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ