ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಗರಗಳಿಗಿಂತ ಹೆಚ್ಚಾಗಿ ಹಳ್ಳಿಗಳಲ್ಲಿ ನಾವು ಕಲೆ ಸಂಸ್ಕೃತಿಕ ನಾಟಕ, ಜಾನಪದ ಮಜರಂಜನೆ ನೋಡುತ್ತೇವೆ. ಹಿಂದಿನಿಂದ ಬೆಳೆದುಕೊಂಡು ಬಂದ ಜಾನಪದ ಸಾಂಸ್ಕೃತಿಕ ಕಲೆಗಳನ್ನು ಉಳಿಸಿಕೊಂಡು ಬರುವುದು ಅತ್ಯಗತ್ಯವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ ವಿ. ಕತ್ತಿ ಹೇಳಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಗ್ರಾಮ ಪಂಚಾಯತ ಯಾದಗೂಡ ಇವರ ಸಹಯೋಗದಲ್ಲಿ ಸ್ಥಳೀಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಆವರಣದಲ್ಲಿ ಜರುಗಿದ ಗಿರಿಜನ ಉತ್ಸವ ೨೦೨೦-೨೧ ಜಾನಪದ ಸಾಂಸ್ಕೃತಿಕ ಕಲಾ ಸಂಭ್ರಮ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ, ನಗಾರಿ ವಾದ್ಯ ನುಡಿಸಿ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಕಲಾವಿದರಿಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅದರ ಲಾಭ ಪಡೆದುಕೊಂಡು ಇಂತಹ ಉತ್ಸವಗಳಲ್ಲಿ ಕಲಾವಿದರು ಬೆರೆತು, ಕಲಾವಿದರು ತಮ್ಮ ಕಲಾ ಪ್ರದರ್ಶನ ನೀಡಿ ಜನಪದ ಸಂಸ್ಕೃತಿ ಉಳಿಸಬೇಕೆಂದರು.
ಅತಿಥಿಗಳಾಗಿ ಆಗಮಿಸಿದ ಹಿರಿಯ ಸಾಹಿತಿ ಎಸ್.ವಾಯ್.ಹಂಜಿ, ನಮ್ಮ ನಾಡಿನ ಮೂಲ ಜನಪದ ಸಾಂಸ್ಕೃತಿಕ ಕಲೆಗಳ ಹರಿಕಾರರು ಗಿರಿಜನರು, ಹಿಂದಿನ ಯುಗದಲ್ಲಿ ಕಾಡಿನಲ್ಲಿ ನೆಲೆಸಿ ತಮ್ಮ ಬದುಕು ಕಟ್ಟಿಕೊಂಡು ತಮ್ಮ ಸಂತಸ ಜೀವನಕ್ಕೆ ಜನಪದ ಕಲೆಗಳನ್ನು ಕಲಿತು ನಾಡಿಗೆ ತಂದವರು. ಅಂತಹ ಕಲೆಗಳು ಮುಂದೆ ಬೆಳೆದು ಹಲವಾರು ವೈವಿಧ್ಯಮಯ ರೂಪ ಪಡೆದುಕೊಂಡವು ಎಂದು ಬಣ್ಣಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಬಸವರಾಜ ಸಿ. ಕಲ್ಲೋಳಿ ವಹಿಸಿದ್ದರು. ವೇದಿಕೆಯ ಮೇಲೆ ಹುಕ್ಕೇರಿ ಸಿ.ಪಿ.ಆಯ್ ರಮೇಶ ಛಾಯಾಗೋಳ, ತಾ.ಪಂ ಸದಸ್ಯರಾದ ನಿಂಗಪ್ಪಾ ಪೂಜೇರಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವನಗೌಡಾ ಪಾಟೀಲ ಉದ್ಯಮಿ ವಾಳಿಖಿಂಡಿ, ಗ್ರಾಮ ಪಂಚಾಯತ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರನ್ನು ಶಾಲು, ಸ್ಮರಣಿಕೆ, ಹೂಮಾಲೆಯೊಂದಿಗೆ ಸನ್ಮಾನಿಸಲಾಯಿತು.
ನಂತರ ನಡೆದ ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಬಸವರಾಜ ಹರ್ತಿ ತಂಡದಿಂದ ತತ್ವಪದ, ಲಗಮಣ್ಣಾ ದೊಡಮನಿ ತಂಡದಿಂದ ಜಾನಪದ ಗಾಯನ, ಬಸವರಾಜ ಹಂಪಿಹೋಳಿ ತಂಡದಿಂದ ಜಾನಪದ ನೃತ್ಯ, ದುಂಡಪ್ಪಾ ಗುಡದಾರ ತಂಡದಿಂದ ಕೈವಲ್ಯ ಭಜನಾಪದ, ಮಾರುತಿ ಅ. ನಾಯ್ಕರ ತಂಡದಿಂದ ಡೋಳ್ಳಿನಪದ, ನಾಟ್ಯಲೋಕ ಕಲಾ ಸಂಸ್ಥೆಯಿಂದ ಆದಿವಾಸಿ ನೃತ್ಯ, ಯಲ್ಲಪ್ಪಾ ನಾಯ್ಕರ ತಂಡದಿಂದ ಶ್ರೀ ಕೃಷ್ಣ ಪಾರಿಜಾತ ಪದಗಳು, ಸಂತೋಷ ಟ್ಯಾನಗಿ ತಂಡದಿಂದ ವಿದೂಷಕ ನಾಟಕ, ಸಂಜು ಕೋಳ್ಳಾನಟ್ಟಿ ತಂಡದಿಂದ ಪೌರಾಣಿಕ ನಾಟಕ, ಹಾಗೂ ಇನ್ನು ಹಲವಾರು ತಂಡಗಳು ವೈವಿಧ್ಯಮಯ ಕಲಾ ಪ್ರದರ್ಶನ ನೀಡಿ ನೋಡುಗರನ್ನು ಜಾನಪದ ಲೋಕಕ್ಕೆ ಕರೆದುಕೊಂಡು ಹೋಗಿ ವೈಭವದ ಕಲಾ ಪ್ರದರ್ಶನ ನೀಡಿ ಕಲಾಪ್ರೇಕ್ಷರ ಮೆಚ್ಚುಗೆ ಪಡೆದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ನಿರ್ದೇಶಕರಾದ ವಿದ್ಯಾವತಿ ಹೆಚ್. ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾದೀಪ ಸಮುದಾಯ ಕಲಾಕೇಂದ್ರ, ಚಿಕ್ಕೋಡಿ ತಂಡದವರು ನಾಡಗೀತೆ, ರೈತಗೀತೆ ಪ್ರಸ್ತುತ ಪಡಿಸಿದರು. ಭರತ ಕಲಾಚಂದ್ರ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಜನಮಟ್ಟಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ