ಪ್ರಗತಿವಾಹಿನಿ ಸುದ್ದಿ; ಹೊಸೂರ: ಭೂಮಿಯ ಹದ ನೋಡಿ ಪರಿಶ್ರಮದ ಕೃಷಿ ಮಾಡುವ ರೈತರೆ ನಿಜವಾದ ಕೃಷಿ ವಿಜ್ಞಾನಿಗಳು ಎಂದು ಕೊಲ್ಲಾಪುರದ ಕನ್ನೆರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಚಚಡಿ ಗ್ರಾಮದ ದೇಸಾಯಿ ವಾಡೆಯಲ್ಲಿ ಹಮ್ಮಿಕೊಂಡಿದ್ದ ಕೃಷಿ ವಿಚಾರ ಸಂಕಿರ್ಣ ಹಾಗೂ ಗೋಧಿ ಬೆಳೆಯ ಕ್ಷೇತ್ರೋತ್ಸವ ನೆರವೆರಿಸಿ ಮಾತನಾಡಿ, ಇಂದಿನ ಶಿಕ್ಷಣ ಪದ್ದತಿ ರೈತರ ಮಕ್ಕಳನ್ನ ಕೃಷಿಯಿಂದ ವಿಮುಕ್ತಿಗೊಳಿಸಿ ಗುಲಾಮರನ್ನಾಗಿಸುತ್ತಿದೆ. ಒಕ್ಕುಲುತನ ಮಾಡವ ಯುವಕರಿಗೆ ಹೆಣ್ಣು ಕೊಡಲು ಹಿಂಜರಿಯುವ ಈ ದಿನಮಾನಗಳಲ್ಲಿ, ಪ್ರತಿಯೊಬ್ಬ ತಾಯಿಯು ಅರ್ಥಮಾಡಿಕೊಳ್ಳಬೇಕು ರೈತ ದುಡಿದಾಗಲೆ ಪ್ರಪಂಚಕ್ಕೆ ಅನ್ನ. ಚಿನ್ನ ಬೆಳ್ಳಿ, ಹಣ, ಸಂಪತ್ತು, ಐಶ್ವರ್ಯ ಇಲ್ಲದಿದ್ದರು ಸಮಾಜದಲ್ಲಿ ಬದುಕಬಹುದು ಅನ್ನವಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದರು. ವಿಜ್ಞಾನ ಎಷ್ಟೇ ಮುಂದುವರೆದರು ಪ್ರಯೋಗಾಲಯದಲ್ಲಿ ಒಂದು ಅಕ್ಕಿಯಕಾಳು ತಯಾರಿಸಲು ಸಾಧ್ಯವಿಲ್ಲ ಅದನ್ನು ಭೂಮಿಯಲ್ಲಿ ಬೆಳೆಯಬೇಕು ಇದರಿಂದ ರೈತರನ್ನ ಗೌರವದಿಂದ ಕಾಣಬೇಕು ಎಂದರು.
ಹೆಣ್ಣುಮಕ್ಕಳು ಶಿಕ್ಷಣವಂತರಾಗಿ ಆದರೆ ನಗರವಾಸಿಗಳಾಗಬೇಡಿ, ಹಳ್ಳಿಗಳಲ್ಲಿ ಭಾಂದವ್ಯಗಳು ಬೆಸುಗೆಯಾಗಿರುತ್ತವೆ ಶುದ್ಧ ಗಾಳಿ, ನೀರು ಆಹಾರ ಹೈನುಗಾರಿಕೆಯಿಂದ ಉತ್ತಮ ಆರೋಗ್ಯದಿಂದ ಜೀವನ ಸಾಗಿಸಬಹುದು. ಸರ್ಕಾರಿ ಸಂಬಳದ ವ್ಯಕ್ತಿಗಳ ಜೀವನ ಇಂದು ಯಾಂತ್ರಿಕ ಜೀವನವಾಗಿದ್ದು ಸಾಮಾನ್ಯವಾಗಿ ಅನೇಕ ರೋಗಗಳಿಂದ ಬಳಲುತ್ತಿರುವವರನ್ನು ಕಾಣುತ್ತಿದ್ದೆವೆ. ಕೃಷಿ ಮಾಡುವವರು ತಮ್ಮ ಕಾಯಕದ ಬಗ್ಗೆ ಎಂದು ಕಿಳರಿಮೆ ಹೊಂದದೆ ನಾವು ದುಡಿದು ಬೆಳೆದ ಬೇಳೆಯನ್ನು ಅನ್ನವಾಗಿ ಬಳಸುವದರಿಂದ ಎಲ್ಲರ ಕಾಯಕದ ಮುಂದೆ ನಾ ಮಾಡುವ ಕೃಷಿ ಕಾಯಕ ಅತ್ಯಂತ ಶ್ರೇಷ್ಠ ಕಾಯಕವೆಂದು ತಿಳಿಯಬೇಕು. ಭೂತಾಯಿಯ ಮಡಿಲಿಗೆ ಅತಿಯಾದ ರಸಾಯನಿಕಗಳನ್ನು ಸೇರಿಸಿ ಸಸ್ಯ ಸಂಕುಲ ಹಾಳು ಮಾಡುತ್ತಿರುವದರಿಂದ ರೈತ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ ಕಡಿಮೆ ಖರ್ಚಿನ ಸಾವಯವ ಪದ್ದತಿಯನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯದೊಂದಿಗೆ ಸ್ಥಿವಂತರಾಗಿ ಜೀವನಸಾಗಿಸಿ ಎಂದರು.
ನಿವೃತ್ತ ಕೃಷಿ ವಿವಿ ಉಪಕುಲಪತಿ ಡಾ.ಆರ್.ಆರ್. ಹಂಚಿನಾಳ ಕಾಡಾ ಅಧ್ಯಕ್ಷ ಡಾ.ವಿ.ಆಯ್. ಪಾಟೀಲ, ಕಾರ್ಯಕ್ರಮ ಸಯೊಂಜಕರಾದ ನಾಗರಾಜ ದೇಸಾಯಿ ಮಾತನಾಡಿದರು. ಬೆಳಗಾವಿ, ಗದಗ, ಧಾರವಾಡ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಸಾಧನೆಗೈದ 15 ಜನ ಆದರ್ಶ ರೈತರನ್ನು ಆಯ್ಕೆಮಾಡಿ ಸತ್ಕರಿಸಿ ಪ್ರಶಸ್ತಿ ನೀಡಲಾಯಿತು.
ವೇದಿಕೆಯಲ್ಲಿ ವೇ. ಈರಯ್ಯ ಹೀರೆಮಠ, ಕೆಎಲ್ ಈ ನಿರ್ದೇಶಕ ಬಿ.ಆರ್.ಪಾಟೀಲ, ಬೆಳಗಾವಿ ಕೃಷಿ ಜಂಟಿ ನಿರ್ದೇಶಕ ಡಾ.ಶಿವನಗೌಡ ಪಾಟೀಲ, ಐಸಿಎಆರ್ ವಿಜ್ಞಾನಿ ಡಾ.ವ್ಹಿ. ವೇಂಕಟೆಶ ಸುಬ್ರಹ್ಮಣ್ಯ, ಕೃಷಿ ವಿಜ್ಞಾನಿ ಡಾ. ಸುಮಾ ಬಿರಾದಾರ, ಕೆವಿಕೆ ಮುಖ್ಯಸ್ಥೆ ಶ್ರೀದೇವಿ ಅಂಗಡಿ, ಇಪ್ಕೋ ಕ್ಷೇತ್ರಾಧಿಕಾರಿ ಬಿ.ಚೇತನ, ಸುರೇಶಗೌಡ ಪಾಟೀಲ, ಪ್ರಾ. ಡಾ.ಸಿ.ಬಿ.ಗಣಾಚಾರಿ, ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ, ಮುರಗೋಡ ಕೃಷಿ ಅಧಿಕಾರಿ ಮಹಾಂತೇಶ ವಿರಕ್ತಮಠ ಇದ್ದರು.
ಕಾರ್ಯಕ್ರಮ ಸಂಚಾಲಕ ಆರ್.ಆರ್.ಕಾಮತ ಸ್ವಾಗತಿಸಿದರು ವೃಷುಭಕುಮಾರ ಚರಲಿಂಗಮಠ ನಿರೂಪಿಸಿದರು. ರವಿ ಕುರಬೆಟ್ಟ ವಂದಿಸಿದರು. ಬೆಳಗಾವಿ ವಿಭಾಗದ ನೂರಾರು ಕೃಷಿ ಪರಿಣತರು ಹಾಗೂ ಬೈಲಹೊಂಗಲ ಗಣಾಚಾರಿ ಶಿಕ್ಷಣ ಸಂಸ್ಥೆಯ ಕೃಷಿ ಆಸಕ್ತ ನೂರಾರು ವಿದ್ಯಾರ್ಥಿನಿಯರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ