Kannada NewsKarnataka News

ಮಲಪ್ರಭಾ ನದಿತೀರದ ಘಟ್ಟ ಪ್ರದೇಶಕ್ಕೆ ಪ್ರಹ್ಲಾದ ರೇಮಾನಿ ಹೆಸರು

 ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಮಾಜಿ ಶಾಸಕ ಪ್ರಹ್ಲಾದ ರೇಮಾನಿ ಅವರ ಅಧಿಕಾರಾವಧಿಯಲ್ಲಿ ತಾಲೂಕಿನಾದ್ಯಂತ ಅಮೂಲಾಗ್ರ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಪಟ್ಟಣದ ಮಲಪ್ರಭಾ ನದಿತೀರದ ಘಟ್ಟ ಪ್ರದೇಶಕ್ಕೆ ಮಾಜಿ ಶಾಸಕ ದಿ.ಪ್ರಹ್ಲಾದ ರೇಮಾನಿ ಘಟ್ಟ ಎಂದು ನಾಮಕರಣ ಮಾಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರೇಮಾನಿ ರಾಜ್ಯದ ಎಲ್ಲ ಸಚಿವರು, ಸಂಸದರು ಮತ್ತು ಶಾಸಕರೊಂದಿಗೆ ಒಡನಾಟ ಹೊಂದಿದ್ದರು. ತಮ್ಮ ಕ್ಷೇತ್ರದ ಪ್ರತಿಯೊಂದು ಕೆಲಸಗಳ ಬಗ್ಗೆ ಬೆಂಗಳೂರಿನ ಪ್ರತಿ ಇಲಾಖೆಯ ಮುಖ್ಯ ಕಚೇರಿಗಳಿಗೆ ಖುದ್ದು ತೆರಳಿ ಮಂಜೂರು ಮಾಡಿಸಿಕೊಂಡು ಬರುತ್ತಿದ್ದರು. ಹೀಗಾಗಿ ಅವರ ಅಧಿಕಾರಾವಧಿಯಲ್ಲಿ ಕ್ರೀಡಾಂಗಣ, ರಸ್ತೆಗಳು, ನದಿ ಘಟ್ಟ ಅಭಿವೃದ್ಧಿ, ಬ್ರಿಡ್ಜ್ ಕಂ ಬಾಂದಾರ್, ಸೇತುವೆಗಳು ಮತ್ತು ವಿವಿಧ ಸರ್ಕಾರಿ ಕಟ್ಟಡಗಳ ನಿರ್ಮಾಣವಾಗಿದ್ದು ಈಗ ಇತಿಹಾಸ. ಇವರ ೩ನೇ ಪುಣ್ಯಸ್ಮರಣೆಯಂದು ಸ್ಥಳೀಯರು ಒಕ್ಕೂರಲಿನಿಂದ ಠರಾಯಿಸಿ ರೇಮಾಣಿ ಅವರ ಹೆಸರನ್ನು ನದಿತೀರದ ಘಟ್ಟ ಪ್ರದೇಶಕ್ಕೆ ಇಟ್ಟಿರುವುದು ಅವರ ಬಗ್ಗೆ ಇರುವ ಅಭಿಮಾನವನ್ನು ಸಾದರಪಡಿಸುತ್ತದೆ ಎನ್ನುವ ಮೂಲಕ ರೇಮಾಣಿಯವರನ್ನು ಸ್ಮರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿದರು. ಪ್ರಕಾಶ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅವರೊಳ್ಳಿ-ಬಿಳಕಿ ಮಠದ ಚನ್ನಬಸವದೇವರು ಸಾನಿಧ್ಯ ವಹಿಸಿದ್ದರು. ಬ್ಲಾಕ್ ಅಧ್ಯಕ್ಷ ಸಂಜಯ ಕುಬಲ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯ್ತಿ, ಭಾರತೀಯ ಜನತಾ ಪಕ್ಷ, ಮಲಪ್ರಭಾ ಘಟ್ಟ ನಿರ್ವಹಣಾ ಸಮಿತಿ ಮತ್ತು ಪ್ರಹ್ಲಾದ ರೇಮಾನಿ ಅಭಿಮಾನಿಗಳ ಬಳಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿಠ್ಠಲ ಹಲಗೇಕರ, ಜ್ಯೋತಿಬಾ ರೇಮಾಣಿ, ಪ್ರಮೋದ ಕೊಚೇರಿ, ವಿಠ್ಠಲ ಪಾಟೀಲ, ಧನಶ್ರೀ ದೇಸಾಯಿ, ಸಂಜಯ ಕಂಚಿ, ಸುರೇಶ ದೇಸಾಯಿ, ಮಜಹರ ಖಾನಾಪುರಿ, ಅಪ್ಪಯ್ಯ ಕೋಡೊಳಿ, ಜೀತೇಂದ್ರ ಮಾದಾರ, ಸುನೀಲ ಮಡ್ಡೀಮನಿ, ಸಂತೋಷ ಹಡಪದ, ಶ್ರೀಕಾಂತ ಇಟಗಿ, ಬಸವರಾಜ ಸಾಣಿಕೊಪ್ಪ, ವಸಂತ ದೇಸಾಯಿ, ಕಿರಣ ಯಳ್ಳೂರಕರ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಪಟ್ಟಣ ಪಂಚಾಯ್ತಿ ಸದಸ್ಯರು, ಮಲಪ್ರಭಾ ಘಟ್ಟ ನಿರ್ವಹಣಾ ಸಮಿತಿಯ ಪದಾಧಿಕಾರಿಗಳು ಮತ್ತು ಸ್ಥಳೀಯರು ಇದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button