Karnataka News

ಅನಿರೀಕ್ಷಿತ ಅತಿಥಿಯ ಆಗಮನ : ಮನೆ-ಮನದಲ್ಲಿ ಎಲ್ಲಿಲ್ಲದ ಸಂಭ್ರಮ

  

-ಡಾ.ಯಲ್ಲಮ್ಮ.ಕೆ 

‘ಚಿನ್ನದಗೊಂಬೆ’ ಸಾವಿರದ ಒಂಬೈನೂರಾ ಅರವತ್ನಾಲ್ಕರಲ್ಲಿ ತೆರೆಕಂಡ ಕನ್ನಡದ ಕಪ್ಪು-ಬಿಳುಪು ಚಿತ್ರದಲ್ಲಿನ ವಿಜಯ ನಾರಸಿಂಹ ರವರ ಸಾಹಿತ್ಯ, ಟಿ.ಜಿ.ಲಿಂಗಪ್ಪನವರ ಸಂಗೀತ, ಸುಲಮಂಗಲಂ ರಾಜಲಕ್ಷ್ಮಿ ಕಂಠಸಿರಿಯಲ್ಲಿ ಮೂಡಿಬಂದ ಜನಪ್ರಿಯ ಹಾಡು : ‘ಸೇವಂತಿಗೆ ಚಂಡಿನಂಥ ಮುದ್ದು ಕೋಳಿ, ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದುಕೋಳಿ’ ಈ ಹಾಡನ್ನು ನಾನು ಎಳೆವೆಯಿಂದಲೂ ನನ್ನ ಅಮ್ಮನ ಬಾಯಿಂದ ಕೇಳಿ-ಹಾಡಿ-ನಕ್ಕುನಲಿದ ದಿನಗಳು ಇಂದಿಗೂ ಹಚ್ಚಹಸಿರಾಗಿವೆ. ಅಮ್ಮ ತನ್ನ ಗಂಡ-ಮನೆ-ಮಕ್ಕಳೊಂದಿಗೆ ಎತ್ತು, ಎಮ್ಮೆ, ದನ-ಕರು, ಕುರಿ-ಕೋಳಿ ಅಂತ ತನ್ನದೇ ಆದ ಪ್ರಾಣಿ ಪ್ರಪಂಚದ ಒಡನಾಟ ದೊಂದಿಗೆ ಕನಸು-ಕಂಗಳ ಪುಟ್ಟ ಬದುಕನ್ನು ಕಟ್ಟಿಕೊಂಡಿದ್ದಳು. ತಂದೆ-ತಾಯಿಯರ ಹೆಗಲಿನ ಭಾರವ ಇಳಿಸುವ ಹೊಣೆಹೊತ್ತು ನಾನು ಓದು-ಬರಹದಲ್ಲಿ ಮುಳಗೆದ್ದು, ನನ್ನ ಕುಟುಂಬವನ್ನು ನಿಭಾಯಿಸಬೇಕಿತ್ತು. ಹಾಗಾಗಿ ದುಡಿಮೆಯನ್ನರಸಿ ಬಹುದೂರ ಸಾಗಿದ್ದೆ. ‘ತಾಯಿ ತೊರೆದು ಗಳಿಗೆ ಕೂಡ ಅಗಲಲಾರದು, ಜಾಣ ಮರಿ ಮುದ್ದುಕೋಳಿ ಮಾತನಾಡದು, ತನ್ನ ಸಾಕಿದವರ ಬಿಟ್ಟು ದೂರ ಓಡಿ ಹೋಗದು’ ಆಗಾಗ ನೆನಪಾಗುವ ಈ ಸಾಲುಗಳು ನನ್ನಲ್ಲಿ ಅಪರಾಧಿ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಮತ್ತೊಮ್ಮೆ ಇಲ್ಲ -ಇಲ್ಲ ನಾನು ತೊರೆದು ಬಂದಿಲ್ಲ ಜವಾಬ್ದಾರಿಯನ್ನು ನಿಭಾಯಿಸಲು ಬಂದಿದ್ದೇನೆ ಎಂದು ನನಗೆ ನಾನೇ ಸಮಾಧಾನ ಹೇಳಿ ಕೊಳ್ಳುತ್ತೇನೆ. ಈ ಹಾಡಿನಲ್ಲಿ ಒಂದು ಕೂಡು ಕುಟುಂಬ ಹೇಗೆ ಬದುಕಬೇಕೆಂಬ ಹಿನ್ನೆಲೆಯಲ್ಲಿ ನೀತಿಪಾಠದಂತೆ ಕಟ್ಟಿಕೊಟ್ಟಿರುವ ವಿಜಯ ನಾರಸಿಂಹರವರ ಸಾಹಿತ್ಯ ಅಂತಸತ್ವವುಳ್ಳದ್ದು ಎಂದರೆ ತಪ್ಪಾಗಲಿಕ್ಕಿಲ್ಲ. 

ಅವರಾತ್ರಿ ಅಮವ್ಯಾಸೆ ಕಳೆದು ನಾಲ್ಕಾರು ದಿನಗಳ ನಂತರದ ಒಂದು ಮುಂಜಾನೆಯ ನಸುಕಿನಲ್ಲಿ ಎಂದಿನಂತೆ ಇರಲಿಲ್ಲ ನನ್ನ ಮನಸ್ಸು. ಏನೋ ಒಂದು ರೀತಿಯ ಖುಷಿಯ ಲವಲವಿಕೆಯ ಭಾವದಿ ಹುಮ್ಮಸ್ಸಿನಿಂದ ಕೂಡಿತ್ತು. ಯಾರೋ ಬರುವ ನಿರೀಕ್ಷೆಯಲ್ಲಿ ಕಾತರಳಾಗಿ ಕಾಯುವಂಥ ಚಡಪಡಿಕೆ.., ವೃತ್ತಿಧರ್ಮದ ನಡುವೆ ನಮಗೆ ವಾರಕ್ಕೆ ಒಂದೇ ದಿನ ಬಿಡುವು. ಬಿಡುವೆಲ್ಲವೂ ವಾರಪೂರ್ತಿ ರಾಶಿರಾಶಿಯಾಗಿ ಗುಡ್ಡೆಬಿದ್ದ ಬಟ್ಟೆ-ಬರೆ, ಕಸ-ಮುಸುರೆ, ಮನೆಯನ್ನು ಒಪ್ಪೋರಣ ಮಾಡುವುದರಲ್ಲೇ ದಿನಕಳೆಯುತ್ತಿತ್ತು. ಇಡೀ ದಿನ ಜಾಗರಣೆ ಮಾಡಿ ಸಾಯಂಕಾಲಕ್ಕೆ ಟೀ-ಬಿಸ್ಕಿತ್ತು ತಿಂದು ನಿದ್ದೆಗೆ ಜಾರುವುದು ವೀಕ್ ಎಂಡ್ ನ ವಿಶೇಷ. ಇಂಥ ವಿಷಮ ಪರಿಸ್ಥಿತಿಯಲ್ಲಿ. ಯಾವ ಅತಿಥಿಗಳನ್ನೂ ಕರೆಯುವ ಮನಸ್ಸು ಬಂದಿರಲಿಲ್ಲ, ಬರುವುದೂ ಇಲ್ಲ, ಕರೆಯುವ ಸತ್ ಸಂಪ್ರದಾಯ, ಬಂದವರಿಗೆ ಸತ್ಕಾರ ಮಾಡುವ ಔದಾರ್ಯಗುಣ ನನ್ನಲ್ಲಿಲ್ಲ. ಅಷ್ಟೊಂದು ಸೋಂಬೇರಿ ನಾನು. 

ಹೀಗಿರಲು ಯಾರೋ ಮನೆ ಬಾಗಿಲು ತಟ್ಟಿದಂತಾಯ್ತು..! ನನಗೆ ಅಚ್ಚರಿ ಯಾರಿರಬಹುದು..? ಈ ಅನಿರೀಕ್ಷಿತ ಅತಿಥಿ ಎಂದು ಬಾಗಿಲು ತೆಗೆಯಲು ಮುಂದಾದೆ, ಅಷ್ಟಾಗಿ ಯಾರೂ ಕೂಡ ನನ್ನ ಮನೆಗೆ ಬರುವ ಮುನ್ನ ಹೇಳಿ-ಕೇಳಿ ಬರಬೇಕೆಂಬ ನಿಯಮ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೆನಾದ್ದರಿಂದ ನನ್ನ ತರಗತಿಯ ಯಾವ ವಿದ್ಯಾರ್ಥಿಗಳೂ ಕೂಡ ಹೇಳದೇ ಕೇಳದೇ ಬರುತ್ತಿರಲಿಲ್ಲ, ಯಾರಿರಬಹುದು..? ಎಂಬ ಕುತೂಹಲದಿಂದ ಬಾಗಿಲು ತೆಗೆದೆ. ಬಂದವನು ನನ್ನ ವಿದ್ಯಾರ್ಥಿ ಮಿತ್ರ. ಸಿಟ್ಟು ನಖ-ಶಿಖಾಂತ ಅಂದರೆ ಪಿತ್ತ ನೆತ್ತಿಗೇರಿತ್ತು, ಆದರೂ ಸಾವರಿಸಿಕೊಂಡು ಏನು ಬಂದಿದ್ದು ದಿಢೀರನೆ ಎಂದು ಕೇಳಿದೆ.., ಅದಕ್ಕವ ಮೇಡಂ ನಿಮಗೊಂದು ಉಡುಗೊರೆ ತಂದಿರುವೆ, ಕೊಟ್ಟು ಹೋಗಣಾ ಅಂತ ಬಂದೆ, ಸಾರಿ ಮೇಡಂ ಕಾಲ್ ಮಾಡಿಬರಬೇಕಿತ್ತು ಸಾರಿ ಅಂದ. ಪರವಾಗಿಲ್ಲ ಬಿಡು ಎಂದು, ಏನು ಉಡುಗೊರೆ ತಂದೀಯಪ್ಪ..? ಎಲ್ಲಿ ತೋರಿಸು ನೋಡೋಣ ಅಂದ್ರೆ ಕ್ಯಾರಿಬ್ಯಾಗನಲ್ಲಿನ ಕೋಳಿ ಮರಿ ತೆಗೆದು ತೋರಿಸಿ, ಮತ್ತೆ ಅವನೇ ಮುಂದುವರೆದು ಹೇಳಿದ, ನಿಜ ಹೇಳಬೇಕೆಂದರೆ ಇದು ನಿಮಗಾಗಿ ತಂದಿರುವ ಕೋಳಿಮರಿ ಅಲ್ಲ ಮೇಡಂ, ನಾನು ಊರಿಂದ ಬರಬೇಕಾದರೆ ರಸ್ತೆಬದಿಯಲ್ಲಿ ಸಿಕ್ಕಿತು, ಪಾಪ ಅದು ಗಾಡಿಗಳ ಚಕ್ರದಡಿಯಲ್ಲಿ ಸಿಕ್ಕು ಸಾಯಬಹುದೆಂದು ಹಿಡಿದು ತಂದೆ ನೀವು ಸಾಕಿ ಮೇಡಂ ಅಂತ ಕೊಟ್ಟು ಹೋದ. 

ಅದು ಕಾಡು ಕೋಳಿ ಮರಿಯಲ್ಲ, ನಾಡಕೋಳಿ ಮರಿನೂ ಅಲ್ಲ, ವಿದ್ಯುತ್ ಸ್ಪರ್ಶದಿ ಕೃತಕವಾಗಿ ಸೃಜಿಸಿದ ಕೋಳಿಮರಿ ಯಾಗಿತ್ತು. ಸಾಮಾನ್ಯವಾಗಿ ಐವತ್ತು ರೂಪಾಯಿ ಗೆ ನಾಲ್ಕರಂತೆ ಬೈಕ್ ಮೇಲೆ ಬುಟ್ಟಿಯಲ್ಲಿ ತುಂಬಿಕೊಂಡು ಊರೂರು ಅಲೆದು ವ್ಯಾಪಾರ ಮಾರಿಕೊಂಡು ಹೋಗುವವನ ಬುಟ್ಟಿಯಿಂದ ರೋಡ್ ಹಂಪ್ಸ್ ನಿಂದಾಗಿ ಬುಟ್ಟಿಯಿಂದ ಸಿಡಿದು ಬಿದ್ದ ಕೋಳಿ ಮರಿಯಾಗಿತ್ತು. ಕೋಳಿಮರಿ ನೋಡಿದ ಕೂಡಲೇ ಅಮ್ಮನ ನೆನಪಾಗಿ ಕಣ್ಣೀರಿಟ್ಟೆ..! ನನಗೆ ಪ್ರಾಣಿ ಪ್ರಪಂಚದೊಂದಿಗೆ ಅಷ್ಟಾಗಿ ಒಡನಾಟವಿಲ್ಲದಿದ್ದರಿಂದ, ಇದನ್ನು ಸಾಕುವುದು ತುಂಬ ರೇಜಿಗೆ ಹುಟ್ಟಿಸುವಂತದ್ದು ಎನಿಸಿತು, ಮರುಕ್ಷಣವೇ ಪಾಪ..! ತನ್ನ ತಂದೆ-ತಾಯಿ, ಸಹೋದರರ ಸಂಬಂಧಿಗಳ ಗುಂಪಿನಿಂದ ತಪ್ಪಿಸಿಕೊಂಡು ಬಂದ ಕೋಳಿಮರಿ ಪಾಡು – ನನ್ನ ಪಾಡು ಒಂದೇ ಆಗಿರುವುದನ್ನು ನೆನೆನೆನೆದು ನನ್ನ ಮನೆಯ ಒಂದು ಹೆಚ್ಚುವರಿ ಕೋಣೆಯನ್ನು ಆ ಕೋಳಿ ಮರಿಗೆ ಬಿಟ್ಟುಕೊಟ್ಟು ನೀರು-ನಿಡಿ ಇಟ್ಟು ರಾತ್ರಿ ಕಳೆದೆ, ಮುಂಜಾನೆ ಮನೆ ತುಂಬ ಪುಟ್ಟ ಕೋಳಿಮರಿಯ ಕಲರವ ಕೇಳಿ ಮನಸ್ಸು ಉಲ್ಲಸಿತಗೊಂಡಿತ್ತು, ಮರಿಯನ್ನು ಕೈಯಲ್ಲಿ ಹಿಡಿದು ಎತ್ತಿ ಮುದ್ದಾಡಿದೆ. ಎಂದಿನಂತೆ ಕೋಳಿಮರಿಗೆ ಇಡೀ ಮನೆಯನ್ನು ಬಿಟ್ಟುಕೊಟ್ಟು ಅಂದರೆ ಗೃಹ ಬಂಧನದಲ್ಲಿರಿಸಿ ಹೊರಟು ಕಾಲೇಜು ಮುಗಿಸಿಕೊಂಡು ಬಂದಾಗ ಅಚ್ಚರಿ ಕಾದಿತ್ತು. 

ಎಂದಿನಂತೆ ಮನೆ ಬಾಗಿಲು ತೆರೆದಾಗ ನನಗೆ ಅದ್ದೂರಿ ಸ್ವಾಗತ, ಕೋಳಿಮರಿ ಕಲರವ..! ನನ್ನ ಹಿಂದೆ ಹಿಂದೆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಓಡಾಡುತ್ತಿತ್ತು, ನಾನು ಬಟ್ಟೆ ಬದಲಿಸಲು ಬಿಡಲೊಲ್ಲದು, ಮುಖ ತೊಳೆಯಲು ಬಿಡಲೊಲ್ಲದು, ಕೊನೆಗೂ ನನ್ನೊಂದಿಗೆ ತಂಗಳು ಪೆಟ್ಟಿಗೆಯೊಳಗಿನ ಅನ್ನ ಸಾಂಬಾರ ಬಿಸಿ ಮಾಡಿಕೊಂಡು ತಿನ್ನಲು ಕುಳಿತಾಗ ನನ್ನ ತೊಡೆಮೇಲೆರಿ ನನ್ನ ತಟ್ಟೆಯಲ್ಲಿ ತಾನೂ ಪಾಲು ಪಡೆದಿತ್ತು. ನಾಲ್ಕಾರು ದಿನಗಳಲ್ಲಿ ಎಷ್ಟೊಂದು ಹಚ್ಚಿಕೊಂಡುಬಿಟ್ಟಿದೆ ಈ ಕೋಳಿಮರಿ, ಒಂದು ಕ್ಷಣವೂ ನನ್ನ ಬಿಟ್ಟು ಇರಲೊಲ್ಲದು, ನಾ ಬರುವ ಹಾದಿಯನ್ನು ಸದಾ ಕಾಯುತ್ತ ಕುಳಿತಿರುತ್ತದೆ, ನನಗಾಗಿ ಪರಿತಪಿಸುತ್ತದೆ, ನನ್ನ ಒಂಟಿ ಜೀವನಕ್ಕೆ ಜೊತೆಯಾದ ಅನಿರೀಕ್ಷಿತ ಅತಿಥಿಯಿಂದಾಗಿ ನನ್ನ ಮನೆಯಲ್ಲೀಗ ಎಲ್ಲಿಲ್ಲದ ಸಡಗರ ಸಂಭ್ರಮ..! ‘ತಾಯಿ ತೊರೆದು ಗಳಿಗೆ ಕೂಡ ಅಗಲಲಾರದು, ಜಾಣ ಮರಿ ಮುದ್ದುಕೋಳಿ ಮಾತನಾಡದು, ತನ್ನ ಸಾಕಿದವರ ಬಿಟ್ಟು ದೂರ ಓಡಿ ಹೋಗದು’ ಈ ಹಾಡನ್ನು ಮತ್ತೆ ಮತ್ತೆ ಗುನುಗುನಿಸುವಂತಾಗಿದೆ. ಅಮೂಲ್ಯ ಉಡುಗೊರೆ ನೀಡಿದ ವಿದ್ಯಾರ್ಥಿ ಮಿತ್ರನಿಗೊಂದು ತುಂಬು ಹೃದಯದಿ ಧನ್ಯವಾದಗಳು / ಥ್ಯಾಂಕ್ಸ್..!

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button