ಸರಸ ಸಂಘರ್ಷ
ಗೆದ್ದರೆ ಗದ್ದುಗೆ, ಬಿದ್ದರೆ ನಿದ್ದೆಗೆ !
ಪ್ರೊ. ಜಿ. ಎಚ್. ಹನ್ನೆರಡುಮಠ
ಹೌದು ! ಒಂದೊಂದು ಯುಗಮಾನಕ್ಕೆ ತನ್ನದೇ ಆದ….ಪ್ರಬಲ ನಿಲುವು… ಮೆಂಟಲ್ ಅಟಿಟ್ಯೂಡ ಇದ್ದೇ ಇರುತ್ತದೆ.
ಉದಾಹರಣೆಗೆ ಪಂಪ ಬದುಕಿದ ಯುಗ ಖಡ್ಗ-ಖಡ್ಗಗಳ ಮಸೆತದ ರಣೋತ್ಸಾಹದ ವೀರವಿರಾಟ ಶೈಲಿಯ ಕಾಲ. ಸ್ವಯಂ ಪಂಪನೇ….ಅತ್ತ ಕಲಿಯೂ ಆಗಿ ಇತ್ತ ಕವಿಯೂ ಆಗಿ…..ರಣರಂಗದಲ್ಲಿ ವೈರಿನಾಯಕರನ್ನು ಪಟ್ಟನೇ ಪಾರಿಸುವ…..”ಆರಾತಿ ನಾಯಕರಂ ಪಟ್ಟನೆ ಪಾರಿಸೆ….ಏಂ ಕಲಿಯೊ ಸತ್ಕವಿಯೋ ಕವಿತಾಗುಣಾರ್ಣವಂ….” ಆಗಿ….ಕುಂಚ ಹಿಡಿದರೆ ಕವಿ….ಖಡ್ಗ ಹಿಡಿದರೆ ದಂಡನಾಯಕನಾಗಿ ….. ವೀರಶ್ರೀ ವಿಜಯಶ್ರೀ ಮೆರೆದ ಕಾಲವಾಗಿತ್ತು.
ಅಷ್ಟೇ ಅಲ್ಲದೆ ರಣಾಂಗಣದಲ್ಲಿ ವೀರಯೋಧನಾಗಿ ಸತ್ತರೆ ಸ್ವಯಂ ಅಪ್ಸರೆಯರೇ ಬಂದು ಅವನನ್ನು ಎತ್ತಿ ಮುದ್ದಾಡಿ ಸ್ವರ್ಗದ ಮಿಲನಮಂಚಕ್ಕೆ ಕೊಂಡೊಯ್ಯುತ್ತಾರೆಂದು ಶಿಲಾಶಾಸನಕಾರರು ಶಾಸನದ ಟಿಕೇಟೂ ಕೊಟ್ಟುಬಿಟ್ಟಿದ್ದರು ! ಇದಕ್ಕಾಗಿಯೇ ಗದಾಯುದ್ಧದಲ್ಲಿ ಬೆಳಗಾದರೆ ಸಾಕು ನಾಳಿನ ಯುದ್ಧಕ್ಕಾಗಿ ಚಹಾಕುಡಿಯದೇ ಕಾದಾಡುತ್ತ ಬೇಗನೆ ಸತ್ತು ಅರ್ಜಂಟಾಗಿ ಸ್ವರ್ಗಕ್ಕೆ ಏರುವ ಹಪಾಹಪಿ ವೀರಯೋಧರಲ್ಲಿ ತುಂಬಿತುಳುಕುತ್ತಿತ್ತು …..ಎಂಬುದಕ್ಕೆ ರನ್ನನ “ಗದಾಯುದ್ಧ”ವೇ ಸಾಕ್ಷಿ.
ನಂತರ ಬಂದ ಬಸವಯುಗವು ಭಕ್ತಿಯ ಸ್ಫೋಟಕ ಕಾರಂಜಿ !
ಮಾನವ ಮರಹನ್ನು ಮೀರಿಸಿದ ಅರುಹಿನ ನಂದಾದೀಪ. “ಸಕಲ ಜೀವಾತ್ಮರಿಗೆ ಲೇಸನೆ ಬಯಸುವವನೇ ಶರಣ”…. “ಆಚಾರವೇ ಸ್ವರ್ಗ ಅನಾಚಾರವೇ ನರಕ”…. “ನಂಬಿ ಕರೆದಡೆ ಓಎನ್ನನೇ ಶಿವನು?” ಎಂದು ನಂಬಿದ ತುಂಬಿದ ಕಾಲ. ನಮ್ಮ ಸಂಸಾರ, ವೈರಾಗ್ಯ, ಭೋಗ, ತ್ಯಾಗ, ಈರ್ಷೆ, ದ್ವೇಷ, ಅಸೂಯೆ, ಕಾಮ…. ಎಲ್ಲೆಲ್ಲಾ ಭಕ್ತಿಯ ಪಡೇಚಿನಲ್ಲಿ ಟ್ರಾನ್ಸಫಾರ್ಮೇಶನ್ ಪಡೆಯಲೇಬೇಕಿತ್ತು. ಅವರಿಗೆ ದೇಹವೇ ದೇಗುಲ, ಮನವೇ ಲಿಂಗ, ಮಾತೇ ಜ್ಯೋತಿರ್ಲಿಂಗ, ನಡೆಯೇ ಮಡಿ, ಕಾಯಕವೇ ಕೈಲಾಸವಾಗಿತ್ತು !
ಆನಂತರದ ಕುಮಾರವ್ಯಾಸ ಯುಗದಲ್ಲಿ ಮುಟ್ಟಿದ್ದನ್ನೆಲ್ಲಾ ಬೆಟ್ಟದಷ್ಟು ಪ್ರೀತಿಯಿಂದ ಕಂಡ ಜೀವನ ಸಂಪ್ರೀತಿಯ ಕುತೂಹಲ-ಕಸುವಿನ ಸರಸ ಕಾಲ. ಪಂಪ-ಬಸವರಿಗಿಂತ ವಿಭಿನ್ನವಾದ ಜನಪದೀಯ ಸಂಕೀರ್ಣತೆ -ವರ್ಣವೈವಿಧ್ಯತೆ ಪಡೆದ ಈ ದಿನಮಾನ ಸಂತೃಪ್ತ ಗೃಹಸ್ಥಾಶ್ರಮಿಗಳ ತೂಗುಮಂಚದ ಕಥೆಗಳ ಜಾಲ. ಇಲ್ಲಿ ಅವಸರಕ್ಕೆ ಎಳ್ಳುಕಾಳಿನಷ್ಟೂ ಅವಕಾಶವಿಲ್ಲ. ಊಟ ಮಾಡುವಾಗಲೂ ಕಥೆ, ಮಲಗುವಾಗಲೂ ಕಥೆ.
ಅತ್ತ ಮಳೆಯೇ ಬೆಳೆ ಬೆಳೆಯುತ್ತಿತ್ತು. ಹೆಣ್ಣಿನ ಕಣ್ಣತುಂಬ ಕನಸು ತುಂಬಿತ್ತು. ಆದ್ದರಿಂದಲೇ ಕುಮಾರವ್ಯಾಸ ಈ ಗುಣದಿಂದಲೇ ಎಲ್ಲರಿಗೂ ಬಹುಬೇಗನೆ ಬೆಲ್ಲ-ಕೊಬ್ಬರಿಯಾದ. ಇದರ ಎಡ-ಬಲ ಮಗ್ಗುಲಿಗೆ ಅಂಟಿಕೊಂಡು ಬಂದ ವಿಜಯನಗರದ ಆಳ್ವರಸರ ಯುಗ ಸಂಘರ್ಷವನ್ನು ಒಡಲಾಳದಲ್ಲಿ ಬಚ್ಚಿಟ್ಟುಕೊಂಡು ಸಂಕೀರ್ಣ ಸುಖಾನುಭವಗಳ ಕಾವ್ಯಾತ್ಮಕತೆಯಲ್ಲಿ ತೇಲಿಹೋದ ಭಕ್ತಿ-ಭೋಗ-ವೈಭವದ ವೈರುಧ್ಯಗಳನ್ನೆಲ್ಲ ಒಡಲಾಳದಲ್ಲಿ ಅಡಕಲುಗೊಳಿಸಿದ ದಿನಮಾನ. ಈ ಭ್ರಮಾತ್ಮಕತೆಯೇ ದೂರಾನ್ವೇಷಣೆಯ ಎಚ್ಚರಿಕೆಯನ್ನು ಮರೆಸಿ ಶೃಂಗಾರಸಾಗರವನ್ನು ರುಧಿರಸಾಗರದಲ್ಲಿ ಮುಳುಗಿಸಿಬಿಟ್ಟ ಮಹಾ ದುರಂತವೂ ಆಯಿತು ! ಆ ನಂತರ ಬಂದ ಕನ್ನಡ ನಾಡು ವಣವಣ ರಣರಣ… ಪರಾಧೀನ… ಪರಕೀಯ !
ಆಗ ಅಪ್ಪಳಿಸಿ ಬಂದ ಮುಸ್ಲಿಂ ದಾಳಿಗಳ ಕರಾಳ ಕತ್ತಲೆಯ ಕ್ರೂರ ಕಾಲದಲ್ಲಿ ಸಾವಿರವರ್ಷಗಳ ಸಾಂಸ್ಕೃತಿಕ ಇತಿಹಾಸವೆಲ್ಲಾ ಇದ್ದಿಲ್ಲವೆಂಬಂತೆ ಚಕಣಾಚೂರ ಆಗಿಹೋದ ಘೋರ ಗುಲಾಮಗಿರಿಯ ಅಸಹ್ಯ ಕಾಲ. ಕನ್ನಡ ನಾಡು ಅನ್ಯಾಯ ಅತ್ಯಾಚಾರಗಳಿಗೆ ಬಲಿಯಾಯಿತು. ಸಮಗ್ರ ಭಾರತೀಯ ಸಂಸ್ಕೃತಿಯೇ ತಳಮಟ್ಟ ನೆಗ್ಗಿಹೋದರೂ ತಾನು ಮಾತ್ರ ತನ್ನಮಟ್ಟಿಗೆ ಉಪ್ಪು- ಬೆಲ್ಲ- ಬ್ಯಾಳಿ- ವಗ್ಗರಣಿ ಉಣ್ಣುವ ಸಾಮಾನ್ಯನ ಕುಗ್ಗಿದ ಕಾಲ!
ನಂತರ ಬಂದ ಬ್ರಿಟೀಶರ ಆಳರಸರ ಯುಗವಂತೂ ಭಾರತದಲ್ಲಿ ಧಾರ್ಮಿಕತೆಯೊಂದಿಗೆ ನೈತಿಕ ಪತನದ ಘೋರಾರಣ್ಯ ! ಕತ್ತಲೆಯಲ್ಲಿ ಇನ್ನೊಂದು ಬತ್ತಲೆಯ ಬತೇರಿ !
ಬ್ರಿಟೀಶ ಆಳರಸರ ಅಂತಿಮ ಘಟ್ಟದಲ್ಲಿ ಹಿಂದಿನ ಮುಸ್ಲಿಂ-ಆಂಗ್ಲ ಆಳಿಕೆಗಳಿಗೆ ಸಡ್ಡು ಹೊಡೆದು ನಿಂತ ರಾಷ್ಟ್ರೀಯ ಪರಾಕ್ರಮದ ತ್ಯಾಗ-ತಪಸ್ಸು- ಸಂಸ್ಕೃತಿಯ ಪರಮೋತ್ಕೃಷ್ಟ ಸೀಮೋಲ್ಲಂಘನೆಯ ಪ್ರಜ್ಞಾಸ್ಫೋಟ ! ರಾಷ್ಟ್ರೀಯ ಸಂಸ್ಕೃತಿಯ ಸ್ವಾಭಿಮಾನ ಕೆಂಡದುಂಡೆಯಾಗಿ ತೀರಾತೀರಾ ತಳಸಂಸ್ಕೃತಿಯ ನಿಮ್ನಸ್ಥರಗಳಾದ ಒಕ್ಕಲುಮಕ್ಕಳು- ಅಸ್ಪೃಶ್ಯರು- ಅಶಿಕ್ಷಿತರು ಹಾಗೂ ಸ್ತ್ರೀಯರಿಗೆ ಬೆಂಕಿಯ ಚುರುಕು ಹಚ್ಚಿದ ಮಿಂಚಿನ ಚುಂಬನದ ಕಾಲ. ಇದು ಖಂಡಿತವಾಗಿಯೂ ಮಾನವೇತಿಹಾಸದಲ್ಲಿ ರಾಷ್ಟ್ರೀಯ ಪುರುಷರ, ನೇತಾರರ, ಸ್ಖಾಲಿತ್ಯರಹಿತ ಮಾನವತಾವಾದಿಗಳ ಸುಗ್ಗಿಯ ಕಣಬ್ಬ. ಹಿಂದಿನ ಸಾವಿರ ವರ್ಷಗಳ ಸೋಲು- ಸಾವು- ಅಪಮಾನ- ಅಧಃಪತನ- ದೈತ್ಯ ಆಲಸ್ಯಗಳನ್ನೆಲ್ಲ ಒಂದೇ ಏಟಿಗೆ ಸದೆಬಡೆದು ಸಾರಾಸಗ್ಗಟ್ಟಾಗಿ ಬೆಂಕಿಹಚ್ಚಿದ ಧೀರೋದಾತ್ತ ಧೀಮಂತ ಯಾನ ….ಈ ಸ್ವಾತಂತ್ರ ಸಂಗ್ರಾಮದ ಮಹಾಗಾನ !
ಅಬ್ಬಬ್ಬಾ…. ಆನಂತರ ಬಂತು ನೋಡಿ…. ಸ್ವಾತಂತ್ರ್ಯೋತ್ತರ ಕಾಲೀನ “ವ್ಹೋಟುಪ್ರಭುತ”ದ ತೀರಾ ಅಸಹ್ಯಕಾಲ. ಈ ಕಾಲಕ್ಕೆ ಪ್ರಜಾಪ್ರಭುತ್ವ ಎಂದು ಅರ್ಥೈಸಿದ್ದೇ ತಪ್ಪಾಯಿತೋ ಏನೊ ! “ಗಾಂಧಿವಾದ” , “ಸಮಾಜವಾದೀ ಸಿದ್ಧಾಂತ” , “ಪ್ರಜಾಪ್ರಭುತ್ವ ಅಭಿಯಾನ”ಗಳನ್ನೆಲ್ಲ ಕಿಸೆಯಲ್ಲಿ ಇಟ್ಟುಕೊಂಡೇ ಜನಾಂಗೀಯ- ಜಾತೀಯ- ಕೌಟುಂಬಿಕ- ಸ್ವಾರ್ಥಪರ ಪದವಿ-ಪೋಸ್ಟ-ಪಲ್ಲಂಗಗಳನ್ನೆಲ್ಲ ಚಟ್ನಿ ಮಾಡಿ ಚಪ್ಪರಿಸುವ ರಾಕ್ಷಸದಾಹದ ವಗ್ಗರಣೆಯ ವಿಕೃತ ವೈಭೋಗ ಇಂದಿನ ಕಾಲ ! ಇಂದಿನ ಇದೇ ಕಾಲದಲ್ಲಿ ಧರ್ಮಗಳು ಕೂಡ ಕಮರ್ಶಿಯಲಾಯಿಜೇಶನ್ ಪಡೆದುಬಿಟ್ಟವು. ದೇವರುಕೂಡ ಉಳ್ಳವರ ಗೆಳೆಯನಾದ. ಶಿಕ್ಷಣ ಸಂಸ್ಥೆಗಳೂ ವ್ಯಾಪಾರೀಕರಣ ಹೊಂದಿದವು. ತ್ಯಾಗ-ತಪಸ್ಸಿನಿಂದ ಪ್ರಾಣತ್ಯಾಗದಿಂದ ಕಟ್ಟಿದ ಈ ರಾಷ್ಟ್ರೀಯ ಸ್ವಾತಂತ್ರ್ಯದ ಸಂಪತ್ತಿನಲ್ಲಿ ಸ್ವರ್ಗವೇ ಅವತರಿಸಿ ಬರುತ್ತದೆಯೆಂದು ನಂಬಿದ್ದ ಹಳೆಯ ನಂಬಿಕೆಯೇ ತಂಗಳರೊಟ್ಟಿ ಆಯಿತು ! ಒಂದರ್ಥದಲ್ಲಿ ಇದು “ಪಾವರ್ ಪೊಲಿಟಿಕ್ಸಿ”ನ ದೆಖ್ಖಾದೆಖ್ಖಿಯ ಕರೇ ಮುಸ್ಯಾಗಳ ಕೆಟ್ಟ ಕಾಲ.
ಒಂದೇ ಒಂದು ತೃಪ್ತಿಯೆಂದರೆ ಈ ಕಾಲದಲ್ಲಿ ಸಾಹಿತ್ಯ- ಸಂಗೀತ- ನಾಟಕ- ಕಲೆ ಹಾಗೂ ಮಾಧ್ಯಮಗಳು ಮಾತ್ರ ಭ್ರಷ್ಟರ ದಾರಿ ಹಿಡಿಯದೆ , ಸಂಕೀರ್ಣತೆಯ ಅದ್ಭುತ ಸ್ಪರ್ಶ ಪಡೆದು, ಹೊಸಹೊಸ ಜಿಜ್ಞಾಸೆಗಳಿಗೆ ನಂದೀಕೋಲು ಹೊತ್ತು ನಿಂತವು. ಸುತ್ತಲೂ ಧೋಧೋ ಸುರಿಯುತ್ತಿದ್ದ ಪ್ರಚಂಡ ಲಂಚ-ಕಿರಾತ ಸ್ವಾರ್ಥ್ಯ- ಜಾತೀಯ ಪೈಪೋಟಿ-ಧರ್ಮದ ಮತಾಂಧತೆಗಳಲ್ಲಿಯೂ ಸಾಹಿತ್ಯ-ಕಲೆಗಳು ವೇಶ್ಯೆಯ ಓಣಿಯ ಗರತಿಯಂತೆ ತಮ್ಮ ಅಕ್ಷರಯೋಗದ ಕೆಂಡಗಳನ್ನು ತೂರುತ್ತ ಬಂದರೂ ಸಮಾಜದ ಮಹಾಪರಿವರ್ತನೆಗೆ ಕಾರಣವಾಗುವಷ್ಟು ಇವುಗಳಲ್ಲಿ ಉಪ್ಪು-ಬ್ಯಾಳಿ-ಜೀರಿಗೆ-ಸಾಸಿವೆಗಳ ತಾಕತ್ತು ಕಾಣಲಿಲ್ಲ. ಇನ್ನೊಂದು ದುರಂತವೆಂದರೆ ಸುಶಿಕ್ಷಿತರೆನಿಸಿಕೊಂಡ ಡಿಗ್ರಿ ಹೋಲ್ಡರುಗಳೂ ಈ ಕೋಣನ ಕೆರೆಯ ಕಟ್ಟೆಯ ಮೇಲೆ ಗುಗ್ರಿತಿನ್ನುತ್ತ ಕುಂತು ಬಿಟ್ಟರು !
ಓ ಬಂತು….ಬಂತು….ನಮ್ಮ ಯುಗ…ನಮ್ಮದೇ ಯುಗ…. ಹೈಸ್ಪೀಡ , ಹೈಟೆಕ್-ಟೆಕ್ನಾಲಾಜಿಯ ರಿಮೋಟ್ ಕಂಟ್ರೋಲ್ ಡಿಜಿಟಲ್ ಯುಗ. ಬೆಂಗಳೂರಲ್ಲಿ ಸಾವಿರಾರು ದ್ವಿಚಕ್ರ ವಾಹನಗಳು ಮುಖ್ಯ ದಾರಿಯನ್ನು ಬಿಟ್ಟು, ಪಕ್ಕದ ಪಾದಚಾರಿಗಳಿಗಾಗಿ ಮೀಸಲಿಟ್ಟ ಫುಟ್ ಪಾತ್ ಮೇಲೆಯೇ ಹುಚ್ಚುನಾಯಿಗಳಂತೆ ಏರಿ ಹೋಗುವ ದೃಶ್ಯ ಕಂಡರೆ ಈ ಯುಗದ ಪ್ರಚಂಡ ವೇಗದ ಗೂಳಿಯ ಓಟವನ್ನು ಕಣ್ಣಾರೆ ಕಾಣಬಹುದು.
ಈ ಯುಗದಲ್ಲಿ ಸಾವು ಸೋವಿ. ಪೆಟ್ಟುಗಳು ಪುಕ್ಕಟೆ. ಎತ್ತ ನೋಡಿದರೂ ಸ್ಪೀಡೇ ಸ್ಪೀಡು. ಕುಣಿತಕ್ಕೋ ಕಾಂಚಾಣಕ್ಕೋ ಈ ಜನ ಸಾವಿಗೆ ತುಪ್ಪವಾಗುವದು ನಿತ್ಯ ಜೋಗುಳ ಪದ. ಈಗ ದೇವರ ಮೇಲಿನ ಹೂವು ತಪ್ಪ ಬಹುದು, ಆದರೆ ಇಂಥ ಧಡಂ ಸಾವುಗಳು ತಪ್ಪಲಾರವು ! ಇದರ ಮಹಾದ್ಭುತ ತಪ್ಪಿನ ಫಲವಾಗಿ ಪಂಚಭೂತಗಳೆಲ್ಲ ಕಲುಷಿತಗೊಂಡು ಕೋರೋನಾ ಹೆಮ್ಮಾರಿಯ ಅವತಾರವಾಯಿತು. ಈ ಹೆಮ್ಮಾರಿಯ ತುಳಿತಕ್ಕೆ ಈ ಪ್ರಬಲ ಕೋಟೆಯಾದ ಪೃಥ್ವಿಯೂ ಚಕಣಾಚೂರ ಆಯಿತು. ಮಾನವನ ಹಮ್ಮು ಬಿಮ್ಮು ನೆಲ ಸೀಪಿತು!
ಹಾಂ…..ಈ ಸ್ಪೀಡಿನ ಇನ್ನೊಂದು ಮುಖವೇ ಸ್ಪರ್ಧೆ. ಇಂದು ಯಾವ ಕ್ಷೇತ್ರವನ್ನೇ ತೆಗೆದುಕೊಳ್ಳಿರಿ, ಅಲ್ಲಿ ಟಫ್ ಫೈಟ್ ಇದ್ದೇ ಇರುತ್ತದೆ. ಗೆದ್ದರೆ ಗದ್ದುಗೆ, ಬಿದ್ದರೆ ನಿದ್ದೆಗೆ ! ಶಿಕ್ಷಣ ಕ್ಷೇತ್ರ, ನೌಕರಿ, ರಾಜಕಾರಣ, ಮಠೀಕರಣ, ಜಾತಿಗಳು, ಬೃಹತ್ ಉದ್ದಿಮೆ, ಸಣ್ಣ ಕೈಗಾರಿಕೆಗಳು, ಕೃಷಿ, ಠೋಕ ವ್ಯಾಪಾರ, ಚಿಲ್ಲರೆ ವ್ಯವಹಾರ, ಗಂಡು-ಹೆಣ್ಣಿನ ಲಕ್ಕು-ಲವ್ವಾಯಣಗಳು, ಹೊಟೇಲ ಉದ್ದಿಮೆ, ಶೃಂಗಾರ ಲೇಪನಗಳು, ಟೂತ್ ಪೇಸ್ಟ ಮೊದಲು ಮಾಡಿ ಕಾರು ಹೆಲಿಕ್ರಾಫ್ಟರುಗಳ ಖರೀದಿಯವರೆಗೂ ….ಸ್ಪರ್ಧೆ…ಸ್ಪರ್ಧೆ…..! ಎದ್ದಾಂವ ಎದ್ದಾ…. ಬಿದ್ದಾಂವ ಬಿದ್ದಾ !!
ಈ ವಿಚಿತ್ರ ಕಾಲದಲ್ಲಿ ಪ್ರೀತಿ-ದ್ವೇಷಗಳಿಗೂ ಲ್ಯಾಕ್ಸಿಟಿ….ಢೀಲಾಪನ….ಬಂದು ಬಿಟ್ಟಿದೆ. ಪ್ರಾಫಿಟ್ ಮೋಟೀವದಿಂದ ಇಂದಿನ ರಾಜಕಾರಣದಲ್ಲಿ ಪರಮ ವೈರಿಗಳು ದಿಢೀರ ದೋಸ್ತರೂ , ಪರಮ ಮಿತ್ರರು ದಿಢೀರ ಶತೃಗಳೂ ಆಗಿಬಿಡುತ್ತಾರೆ. ಮತದಾರರು ಆರಿಸಿ ಕಳಿಸಿದವರೇ ಮಣ್ಣೆರಚಿ ಪರಪಕ್ಷಗಳಿಗೆ ಮತಾಂತರ ಆಗಿಬಿಟ್ಟಿರುತ್ತಾರೆ. ರಾಜಕಾರಣದಲ್ಲಿ ಮಹಾನ್ ಸಿದ್ಧಾಂತಗಳೂ ನಾಯಿಗೆ ಚಿತ್ರಾನ್ನವಾಗಿಬಿಡುತ್ತವೆ. ರಾಮನ ಪಕ್ಷದವರು ರಾವಣ ಪಕ್ಷದವರಾಗುತ್ತಾರೆ, ದ್ರೌಪದಿ ಪಕ್ಷದವರು ದುರ್ಯೋಧನ ಪಕ್ಷದವರೂ ಆಗಿಬಿಟ್ಟಿರುತ್ತಾರೆ. ಇದು ಪಾವರ್ ಪೊಲಿಟಿಕ್ಸ ಮಾತ್ರವಲ್ಲ…. ಅಡ್ಜೆಸ್ಟಮೆಂಟ್ ರಾಜಕಾರಣ. ಇಲ್ಲಿ ಬಿದ್ದವರು ಹುಂಬರು… ಎದ್ದವರು ನಿಶುಂಭರು.
ಅಂತೆಯೇ ….ಶ್ರೀಸಾಮಾನ್ಯರು ಅನ್ನುವಂತೆ…. ಈ ಕಾಲದಲ್ಲಿ ಧರ್ಮ-ರಾಜಕಾರಣ-ಆಡಳಿತ- ವ್ಯವಹಾರಗಳು ಭ್ರಷ್ಟಾತಿಭ್ರಷ್ಟ ಆದಷ್ಟು ಯಾವ ಕಾಲಕ್ಕೂ ಆಗಿರಲಿಲ್ಲವಂತೆ.
ಬಹುಕೋಟಿ ಬಲಾಢ್ಯರು ಹೂಂ ಅಂದರೆ ಅವನೇ ಬುದ್ಧ….ಊಹುಂ ಅಂದರೆ ಅಂದೇ ಯುದ್ಧ !!
ಬಸವಕಾಲೀನ ಸಾಂಸ್ಕೃತಿಕ-ಸಾಮಾಜಿಕ ಕ್ರಾಂತಿಯಲ್ಲಿ….”ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ….” ಎಂಬ ಅನುಭಾವಿಗಳಿಗೆ ದೊರೆಯುವ ಆದ್ಯತೆ …..ಈಗ ರಿಯಲ್ ಎಸ್ಟೇಟ ಜನರುಗಳಿಗೆ , ಲ್ಯಾಂಡ ಲಾರ್ಡುಗಳಿಗೆ, ಗಣಿಗಾರಿಕೆಯ ಪೆಡಂಭೂತಗಳಿಗೆ, ಹಳೆಯ ರಾಜಕಾರಣದ ಹಳೆಯ ದಾಳ ಹಾಕಿ ಆಡಿಸುವ ಜಂಗುತಿಂದ ಗಿಂಡಿ ರಾಜಕಾರಣಿಗಳಿಗೆ ಪೂಜ್ಯತೆ. ಸಮಗ್ರ ಜೀವಸಂಸ್ಕೃತಿಯೇ ಇವರ ಚಪ್ಪಲ್ಲಿಗೆ ಪಲ್ಲಂಗ. ಇದೊಂದು ನಿಲ್ಲದ ನಿರಂತರ ನಾಟಕ ! ಇಗೋ…. ನಾಟಕ ನಡದೈತಿ ನೋಡೇ ಅತ್ತೆವ್ವಾ !!
ಇನ್ನೊಂದೆಡೆಗೆ ಐಟಿ ಜಗತ್ತಿನ ನಾರದ ಪ್ರವೇಶದಿಂದ ಇಲ್ಲಿ ಎಲ್ಲಾ ಮೌಲ್ಯಗಳೂ ಸ್ಯಾಲರಿ ಮೌಲ್ಯಗಳಾಗಿಬಿಟ್ಟವು. ಸ್ಯಾಲರಿಯಿಂದ ಸ್ಯಾಲರಿಗೆ, ನೌಕರಿಯಿಂದ ನೌಕರಿಗೆ, ಕಾರಿನಿಂದ ಕಾರಿಗೆ, ಬಂಗಲೆಯಿಂದ ಬಂಗಲೆಗೆ, ದೇಶದಿಂದ ದೇಶಕ್ಕೆ ಹಾರುವ ಪತಂಗಗಳ….ಅಥವಾ ನೆಗೆದಾಡುವ ಮಂಗ-ಚಿಂಪಂಜಿಗಳ ಕಾಲ…. ಈ ನಮ್ಮ ತಳವೇ ಇಲ್ಲದ ತಪ್ಪೇಲಿ ಪಾಯಸ !
“ದೆವ್ವಗಳು ಇವೆಯೇ ? ” ಎಂಬ ಪ್ರಶ್ನೆಗೆ ಒಂದು ಕಾಲಕ್ಕೆ ಬಹಳೇ ಮಹತ್ವ ಇತ್ತು ! ಆದರೆ ಈ ಕಾಲಕ್ಕೆ ಈ ಪ್ರಶ್ನೆಯೇ ಸತ್ತು ಹೋತು ! ಯಾಕೆಂದರೆ ನಾವೇ ದೆವ್ವಗಳಾದಾಗ ಮತ್ತೆ ಬೇರೆ ಸ್ಪೇಶಲ್ ದೆವ್ವಗಳ ಅವಶ್ಯಕತೆಯಾದರೂ ಎಲ್ಲಿದೆ ಹೇಳ್ರಿ ?
ಲೇಖಕರ ವಿಳಾಸ –
ಪ್ರೊ. ಜಿ. ಎಚ್. ಹನ್ನೆರಡುಮಠ
# ೫ : “ಮಾವು ಮಲ್ಲಿಗೆ” :: ಇಂದ್ರಪ್ರಸ್ಥ : ಬನ್ನೇರುಘಟ್ಟದ ದಾರಿ : ಗೊಟ್ಟಿಗೆರೆ ಅಂಚೆ :
ಬೆಂಗಳೂರ- ೫೬೦೦೮೩ / ದೂರವಾಣಿ-೯೯೪೫೭ ೦೧೧೦೮
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ