ಇಂದು ವಿಶ್ವ ಜಲದಿನ
✍️ ಪುಷ್ಪ ಪ್ರಸಾದ್ ಉಡುಪಿ
ಮಾನವ ಹಾಗೂ ಪ್ರಾಣಿ-ಪಕ್ಷಿ ಸಂಕುಲ ಆಹಾರವಿಲ್ಲದೆ ಹೋದರು ಕೆಲವು ದಿನಗಳ ಕಾಲ ಬದುಕಬಹುದು. ಆದರೆ, ಕುಡಿಯುವ ನೀರಿಲ್ಲದೆ ಒಂದು ದಿನ ಬದುಕುವುದೂ ಅತೀ ಕಷ್ಟದ ಮಾತು. ತಿನ್ನಲು ಆಹಾರವಿಲ್ಲದಿದ್ದರೂ ಸಹ ಕುಡಿಯುವ ನೀರು ನಮ್ಮ ಜೀವವನ್ನು ಹಲವು ದಿನಗಳ ಕಾಲ ಉಳಿಸುವ ಸಂಜೀವಿನಿಯೇ ಸರಿ. ಈ ಸತ್ಯ ಸಂಗತಿಯಿಂದಾಗಿಯೇ, ಪ್ರತೀ ಜೀವ ಸಂಕುಲಕ್ಕೆ ನೀರು ಎಂಬುದು ಪ್ರಕೃತಿ ನೀಡಿರುವ ಜೀವಹನಿ, ಇದುವೇ ಅಮೃತ. ಹಿಂದೆ ಹಣವನ್ನು ನೀರಿನಂತೆ ಬಳಸಬೇಡ ಎಂದು ಹಿರಿಯರು ಹೇಳುತ್ತಿದ್ದರು. ಆದರೆ ಇವತ್ತು ನೀರನ್ನು ಹಣದಂತೆ ಬಳಸಬೇಡ ಎನ್ನುವಾಗ ನೀರಿನ ಮಹತ್ವದ ಅರಿವಾಗುತ್ತದೆ. ನಿಸರ್ಗದತ್ತವಾಗಿ ದೊರಕುವ ಜಲದ ಪ್ರಾಮುಖ್ಯತೆ, ಮಹತ್ವ, ಅಗತ್ಯತೆ ಹಾಗೂ ಅಮೂಲ್ಯತೆಯನ್ನು ವಿಶ್ವದ ಮನುಕುಲಕ್ಕೆ ಅರ್ಥವಾಗಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 22ರಂದು ವಿಶ್ವ ಜಲ ದಿನವನ್ನಾಗಿ ಪ್ರಪಂಚದೆಲ್ಲೆಡೆ ಆಚರಿಸಲಾಗುತ್ತದೆ. ಆದರೆ, ಪ್ರಸ್ತುತ ಸ್ಥಿತಿಯಲ್ಲಿ ಜಲ ದಿನವನ್ನು ಪ್ರತಿ ದಿನ ಆಚರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿರುವುದಂತೂ ಸತ್ಯ. ವೈಜ್ಞಾನಿಕ ವಿಧಾನವನ್ನು ಜೀವನದಲ್ಲಿ ಅಳವಡಿಸಿಕೊಂಡು, ಈ ನೆಲ,ಜಲ ಗಳನ್ನು ರಕ್ಷಿಸಬೇಕು. ಕೆರೆಗಳ-ಕಟ್ಟೆಗಳ ಸಂರಕ್ಷಣೆಯಾಗಬೇಕು. ದೊಡ್ಡ ಸಮುದ್ರಕ್ಕೂ ಕೆರೆಯ ನೀರೇ ಆಸರೆ. ಇನ್ನೇನು ಮಳೆಗಾಲ ಆರಂಭವಾಗುವುದರಿಂದ ತಕ್ಷಣದಿಂದಲೇ ರಾಜ್ಯದಲ್ಲಿರುವ ಕೆರೆಗಳನ್ನು ಸಂಪೂರ್ಣ ಸ್ವಚ್ಛಗೊಳಿಸುವುದರ ಮೂಲಕ ಮಲೀನ ಮುಕ್ತಗೊಳಿಸಿ ಹೂಳೆತ್ತುವ ಕಾರ್ಯ ಕೈಗೊಳ್ಳಬೇಕು. ಮಳೆ ನೀರು ಕೊಯ್ಲು ಕಡ್ಡಾಯವಾಗಬೇಕು. ಶಾಲಾ ಕಾಲೇಜುಗಳಲ್ಲಿ ಮಳೆ ನೀರು ಕೊಯ್ಲು ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳಲು ಪ್ರೇರೇಪಿಸುವುದು. ಸರಕಾರಿ ಅಥವಾ ಸರಕಾರೇತರ ಸಂಸ್ಥೆಗಳಲ್ಲಿ, ಕಟ್ಟಡಗಳಿಗೆ ಪರವಾಣಿಗೆ ಕೊಡುವಾಗ ಮಳೆ ನೀರು ಕೊಯ್ಲು ವಿಧಾನ ಕಡ್ಡಾಯವಾಗಿ ಅಳವಡಿಸಲು ಆದೇಶಿಸಬೇಕು. ಮನುಷ್ಯನ ಅತಿಯಾದ ದುರಾಸೆಯಿಂದಾಗಿ ತೀವ್ರಗತಿಯ ಅರಣ್ಯ ನಾಶ, ಮಿತಿಮೀರಿದ ಮಾಲಿನ್ಯ, ಪ್ರಾಕೃತಿಕ ಸಂಪನ್ಮೂಲಗಳ ಅವ್ಯಾಹತ ಬಳಕೆ, ಪರಿಸರದ ಮೇಲೆ ತೋರುತ್ತಿರುವ ಕ್ರೌರ್ಯದಿಂದಾಗಿ ಪ್ರತೀ ಕ್ಷಣ ಹಸಿರು ಮನೆಯ ಪರಿಣಾಮ ಹೆಚ್ಚಾಗುತ್ತ ಸಾಗಿದೆ. ಇದರಿಂದಾಗಿ ಭೂಮಿ ಮೇಲಿನ ತಾಪಮಾನ ದಿನೇ ದಿನೇ ತ್ವರಿತಗತಿಯಲ್ಲಿ ಏರಿಕೆಯಾಗುತ್ತಿದೆ. ನಾವೆಲ್ಲಾ ನವೀನ ನೀರು ಸಂಪನ್ಮೂಲಗಳನ್ನು ಶೋಧಿಸುವ ಭರದಲ್ಲಿ ಸಾಗುತ್ತಿದ್ದೇವೆ. ಆದರೆ ಲಭ್ಯವಿರುವ ದೈನಂದಿನ ಬದುಕಿನಲ್ಲಿ ವಿನಾಕಾರಣ ಪೋಲಾಗುತ್ತಿರುವ ನೀರನ್ನು ಸದುಪಯೋಗಪಡಿಸಿಕೊಳ್ಳುವತ್ತ ಹೆಚ್ಚು ಗಮನ ನೀಡುತ್ತಿಲ್ಲ. ಗಿಡ-ಮರಗಳ ಸಂತತಿ ಕ್ಷೀಣವಾಗಿ ಎಲ್ಲೆಡೆ ಬಹು ಮಹಡಿಗಳ ಕಟ್ಟಡಗಳೇ ತಲೆ ಎತ್ತಿ ನಿಂತಿರುವುದನ್ನು ನಾವು ದಿನ ನಿತ್ಯ ನೋಡುತ್ತಿದ್ದೇವೆ. ಲಭ್ಯವಿರುವ ಅತ್ಯಲ್ಪ ಜೀವಜಲವನ್ನು ಸುರಕ್ಷಿತವಾಗಿ ಸಂರಕ್ಷಿಸುವುದರ ಜತೆಗೆ ಮುಂಬರುವ ದಿನಗಳಲ್ಲಿ ಸಮೃದ್ಧ ಮಳೆಯಾಗಲು ಹಾಗೂ ಭೂಮಿ ಸದಾಕಾಲ ತಂಪಾಗಿರುವಂತೆ ಮಾಡಲು ನಾವು ಪ್ರಯತ್ನ ಪಡಲೇ ಬೇಕು. ನೀರಿದ್ದರೆ ಮಾತ್ರವೇ ನಮ್ಮೆಲ್ಲರ ಉಳಿವು. ನೀರಿಲ್ಲವಾದರೆ ನಮ್ಮೆಲ್ಲರ ಶಾಶ್ವತ ಅಳಿವು ಎಂಬುದನ್ನು ಎಲ್ಲರೂ ನೆನಪಿಡಬೇಕಾದ ಸಂಗತಿ. ಅಮೃತ ಸಮಾನವಾದ ನೀರನ್ನು ನಾವು ಮಾತ್ರವಲ್ಲದೆ, ನಮ್ಮ ಮುಂದಿನ ಜನಾಂಗಕ್ಕೂ ಕೂಡ ಜತನದಿಂದ ಉಳಿಸುವ ಪ್ರಯತ್ನವನ್ನು ಈಗಿನಿಂದಲೇ ಶುರು ಮಾಡ ಬೇಕಾಗಿದೆ. ಬನ್ನಿ ನಾವೆಲ್ಲರೂ ನೀರನ್ನು ಸುಖಾ ಸುಮ್ಮನೆ ಪೋಲು ಮಾಡದೇ ಜೀವಕ್ಕೆ ಆಸರೆಯಾಗಿತ್ತುವಂತಹ ಜಲವನ್ನು ಅಂದರೆ ನೀರನ್ನು ಉಳಿಸುವತ್ತ ಕೈ ಜೋಡಿಸೋಣ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ