ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ರಮೇಶ್ ದೂರು ನೀಡಲು ತಡವಾಗಿದೆ. ಪ್ರಕರಣ ಬೆಳಕಿಗೆ ಬಂದ ದಿನವೇ ದೂರು ನಿಡಿದ್ದರೆ ಇಷ್ಟೊತ್ತಿಗೆ ಆರೋಪಿಗಳು ಜೈಲಿನಲ್ಲಿರುತ್ತಿದ್ದರು ಎಂದಿದ್ದಾರೆ.
ಸಿಡಿ ಪ್ರಕರಣದಲ್ಲಿ ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತೇವೆ. ಆದರೆ ಇದರಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಈ ಪ್ರಕರಣದ ಹಿಂದೆ ದೊಡ್ಡ ಜಾಲವಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗವಾಗಬೇಕಿದೆ ಎಂದರು.
ಎಸ್ ಐಟಿ ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದೆ. ತನಿಖೆ ಬಳಿಕ ಸಿಡಿ ಪ್ರಕರಣದ ಹಿಂದಿನ ನಿರ್ದೇಶಕರು, ನಿರ್ಮಾಪಕರು, ವಿಲನ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊರಬರಲಿದೆ. ರಮೇಶ್ ಜಾರಕಿಹೊಳಿ ಮೊದಲೇ ಕಂಪ್ಲೇಂಟ್ ಕೊಟ್ಟಿದ್ದರೆ ಇಷ್ಟೊತ್ತಿಗೆ ಸಿಡಿ ಹಿಂದಿನ ಆರೋಪಿಗಳು ಜೈಲು ಪಾಲಾಗುತ್ತಿದ್ದರು ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ವಿರುದ್ಧ ಎಫ್ ಐಆರ್ ದಾಖಲಾಗಿರುವುದರಿಂದ ನಿರೀಕ್ಷಣಾ ಜಾಮೀನಿನ ಬಗ್ಗೆ ವಕೀಲರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ