ಕನಕಪುರಕ್ಕೆ ರಮೇಶ್ ಎಂಟ್ರಿ; ಗೋಕಾಕದಲ್ಲಿ ಲಖನ್ ಸ್ಪರ್ಧೆ; 2023ರ ಚುನಾವಣೆಗೆ ಹೊಸ ರಂಗು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಿರುದ್ಧ ಜಿದ್ದಾಜಿದ್ದಿನ ರಾಜಕಾರಣ ಘೋಷಿಸಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ, ಕನಕಪುರದಲ್ಲಿ ಯಾರೊಂದಿಗೆ ಬೇಕಾದರೂ ಸೇರಿಕೊಂಡು ಡಿಕೆಶಿ ಸೋಲಿಸುವುದಾಗಿ ಪಣತೊಟ್ಟಿದ್ದಾರೆ.
ಜೊತೆಗೆ, ಕನಕಪುರದಲ್ಲಿ ಡಿಕೆಶಿ ಸೋಲಿಸುವ ಕೆಲಸ ಮಾಡಬೇಕಿರುವುದರಿಂದ ಗೋಕಾಕಲ್ಲಿ ತಾವು ಸ್ಪರ್ಧಿಸುವ ಬದಲು ತಮ್ಮ ಲಖನ್ ಜಾರಕಿಹೊಳಿ ಕಣಕ್ಕಿಳಿಸುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ 2023ರ ವಿಧಾನಸಭೆ ಚುನಾವಣೆ ಕುತೂಹಲ ಮೂಡಿಸುವಂತಾಗಿದೆ.
ಶನಿವಾರ ಪತ್ರಕರ್ತರೊಂದಿಗೆ ಮಾತನಾಡುವಾಗ ರಮೇಶ ಜಾರಕಿಹೊಳಿ ಉದ್ವೇಗದಲ್ಲಿ ಇಂತಹ ಘೋಷಣೆ ಮಾಡಿದ್ದಾರೆ. ಇದರಲ್ಲಿ ಎರಡು ಪ್ರಮುಖ ಅಂಶಗಳು ಅಡಗಿದ್ದು, ಬಿಜೆಪಿ ನಿಲುವು ರಮೇಶ್ ಗೆ ಸಾಥ್ ನೀಡಲಿದೆಯೇ ಎನ್ನುವ ಪ್ರಶ್ನೆ ಎದ್ದಿದೆ.
ಗೋಕಾಕದಲ್ಲಿ ರಮೇಶ ಜಾರಕಿಹೊಳಿ ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ಸಹೋದರ ಲಖನ್ ವಿರುದ್ಧವೇ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿದ್ದ ಲಖನ್, ರಮೇಶ್ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ಹಲವಾರು ಗುರುತರ ಆರೋಪಗಳನ್ನು ಮಾಡಿದ್ದರು. ಮುಂದಿನ ಚುನಾವಣೆಯಲ್ಲಿ ಅಣ್ಣನ ಪರವಾಗಿ ಅವರು ಸ್ಪರ್ಧಿಸಿದರೆ ಜನರನ್ನು ಹೇಗೆ ಎದುರಿಸಲಿದ್ದಾರೆ ಎನ್ನುವ ಪ್ರಶ್ನೆ ಒಂದೆಡೆಯಾದರೆ ಬಿಜೆಪಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡಲಿದೆಯೇ ಎನ್ನುವ ಪ್ರಶ್ನೆ ಮತ್ತೊಂದೆಡೆ.
ಇನ್ನು ಕನಕಪುರದಲ್ಲಿ ಎಚ್,ಡಿ.ಕುಮಾರಸ್ವಾಮಿ ಸೇರಿದಂತೆ ಯಾರೊಂದಿಗೆ ಬೇಕಾದರೂ ಸೇರಿಕೊಂಡು ಡಿ.ಕೆ.ಶಿವಕುಮಾರ ಸೋಲಿಸುವುದಾಗಿ ರಮೇಶ ಜಾರಕಿಹೊಳಿ ಘೋಷಿಸಿದ್ದಾರೆ. ರಮೇಶ ಜಾರಕಿಹೊಳಿ ಅವರ ವಯಕ್ತಿಕ ಹಾಗೂ ಏಕಾಏಕಿ ಈ ಘೋಷಣೆಗೆ ಬಿಜೆಪಿ ಬೆಂಬಲ ನೀಡಲಿದೆಯೇ? ಎನ್ನುವುದೂ ಪ್ರಶ್ನೆಯಾಗಿದೆ.
ರಮೇಶ ಜಾರಕಿಹೊಳಿ ಜಿದ್ದಿನ ಮನುಷ್ಯ. ಹಠವನ್ನು ಹೇಗೆ ಸಾಧಿಸುತ್ತಾರೆ ಎನ್ನುವುದಕ್ಕೆ ಸಮ್ಮಿಶ್ರ ಸರಕಾರ ಕೆಡವಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ತಂದಿರುವುದೇ ಸಾಕ್ಷಿ. ಸಾಧಿಸಬೇಕೆಂದುಕೊಂಡಿರುವುದನ್ನು ಯಾವ ಮಟ್ಟಕ್ಕೆ ಇಳಿದಾದರೂ ಸಾಧಿಸುವ ಛಲ ಅವರಲ್ಲಿದೆ. ಹಾಗಾಗಿ ಅವರ ಈ ಘೋಷಣೆ 2023ರ ಚುನಾವಣೆಯನ್ನು ಕಲರ್ ಫುಲ್ ಮಾಡುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಅವರ ಈ ಜೋಶ್ ಅಲ್ಲಿಯವರೆಗೂ ಉಳಿದುಕೊಳ್ಳಲಿದೆಯಾ? ರಾಜಕೀಯದಲ್ಲಿ ಏನೆಲ್ಲ ಬದಲಾವಣೆಯಾಗಬಹುದು ಎನ್ನುವುದನ್ನು ಕಾದು ನೋಡಬೇಕಿದೆ.
ಗೋಕಾಕಲ್ಲಿ ತಮ್ಮನನ್ನು ನಿಲ್ಲಿಸಿ, ಕನಕಪುರದಲ್ಲಿ ಡಿಕೆಶಿ ಸೋಲಿಸುತ್ತೇನೆ – ರಮೇಶ ಜಾರಕಿಹೊಳಿ
ಬೆಳಗಾವಿಗೆ ಇಂದು ಡಿ.ಕೆ.ಶಿವಕುಮಾರ್ ಎಂಟ್ರಿ; ಕುತೂಹಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ