ಡಿ.ಕೆ.ಶಿವಕುಮಾರ್ ಎಸ್ಕಾರ್ಟ್ ವಾಹನದ ಮೇಲೆ ಕಲ್ಲು, ಚಪ್ಪಲಿ ಎಸೆದ ರಮೇಶ್ ಜಾರಕಿಹೊಳಿ ಬೆಂಬಲಿಗರು
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ, ವಿರೋಧದ ನಡುವೆಯೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಂದಾನಗರಿ ಬೆಳಗಾವಿಗೆ ಭೇಟಿ ನೀಡಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸುರೇಶ್ ಅಂಗಡಿಯವರ ಅಕಾಲಿಕ ಮರಣದಿಂದ ಬೆಳಗಾವಿಯಲ್ಲಿ ಉಪಚುನಾವಣೆ ಬಂದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಲಿದೆ. ನಮ್ಮ ಹೈಕಮಾಂಡ್, ರಾಜ್ಯ ನಾಯಕರು, ಜಿಲ್ಲಾ ಶಾಸಕರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿ ಒಮ್ಮತದಿಂದ ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿಯವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದೇವೆ ಎಂದರು.
ಸತೀಶ್ ಜಾರಕಿಹೊಳಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಅವರೊಬ್ಬ ಸೌಮ್ಯ, ಸಜ್ಜನ ರಾಜಕಾರಣಿ. ನಾವೆಲ್ಲರೂ ಸೇರಿ ಅವರನ್ನು ಸಂಸತ್ತಿಗೆ ಕಳುಹಿಸಬೇಕು. ರಾಜ್ಯದಲ್ಲಿ ಬಿಜೆಪಿ 25 ಸಂಸದರಿದ್ದರೂ ಯಾವುದೇ ಪ್ರಯೋಜನವಿಲ್ಲ. ರಾಜ್ಯದ ಸಮಸ್ಯೆ ಬಗ್ಗೆ ಸಂಸತ್ ನಲ್ಲಿ ಧ್ವನಿಯೆತ್ತುತ್ತಿಲ್ಲ. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಗಮನಿಸಿ ಜನರೇ ನಿರ್ಧಾರಗಳನ್ನು ಕೈಗೊಂಡು ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಜನರ ದ್ವನಿಯಾಗಿ ಸತೀಶ್ ಜಾರಕಿಹೊಳಿಯನ್ನು ಸಂಸತ್ತಿಗೆ ಕಳುಹಿಸಬೇಕು ಎಂದು ಹೇಳಿದರು.
ದಾಂದಲೆ
ಡಿ.ಕೆ.ಶಿವಕುಮಾರ್ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ರಮೇಶ್ ಜಾರಕಿಹೊಳಿ ಬೆಂಬಲಿಗರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ವಿಮಾನ ನಿಲ್ದಾಣದಿಂದ ಡಿ.ಕೆ.ಶಿವಕುಮಾರ್ ತೆರಳುತ್ತಿದ್ದಂತೆಯೇ ಡಿಕೆಶಿ ಎಸ್ಕಾರ್ಟ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ, ಚಪ್ಪಲಿ ಎಸೆದ ಘಟನೆಯೂ ನಡೆಯಿತು. ಡಿಕೆಶಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಎಸ್ಕಾರ್ಟ್ ಸಿಬ್ಬಂದಿ ಒಬ್ಬರ ಮೇಲೆ ಹಲ್ಲೆ ನಡೆದಿದೆ. ಅವರನ್ನು ಎಳೆದಾಡಿ ಹಲ್ಲೆ ಮಾಡಲಾಗಿದೆ. ಕಲ್ಲು ತೂರಾಟದಿಂದ ಕಾರಿನ ಗಾಜುಗಳು ಪುಡಿಪುಡಿಯಾಗಿವೆ. ನೂರಾರು ಪ್ರತಿಭಟನಾಕಾರರು ಪೊಲೀಸ್ ಬಂದೋಬಸ್ತ್ ಬೇಧಿಸಿ ನುಗ್ಗಿ ಬಂದು ದಾಂದಲೆ ನಡೆಸಿದ್ದಾರೆ.
ಕಲ್ಲು, ಚಪ್ಪಲಿ ತೂರಾಟ ನಡೆದಿಲ್ಲ
ಆದರೆ ಡಿ.ಕೆ.ಶಿವಕುಮಾರ ಆಗಮಿಸಿದ ವೇಳೆ ಕಲ್ಲು ತೂರಾಟ, ಚಪ್ಪಲಿ ಎಸೆತ ನಡೆದೇ ಇಲ್ಲ ಎಂದು ಡಿಸಿಪಿ ವಿಕ್ರಂ ಅಮತೆ ಹೇಳಿದ್ದಾರೆ.
ಗಲಾಟೆಯ ದೃಶ್ಯಾವಳಿ ಪರಿಶೀಲಿಸುತ್ತಿದ್ದೇವೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಬಿಜೆಪಿ ಸರಕಾರದ ವೈಫಲ್ಯವೇ ಕಾಂಗ್ರೆಸ್ ಪಕ್ಷದ ಸಕ್ಸಸ್ – ಡಿ.ಕೆ.ಶಿವಕುಮಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ