Kannada NewsLatest

ಚಂಬಲ್ ಕಣಿವೆ ಡಕಾಯಿತರಂತೆ ರಮೇಶ್ ಜಾರಕಿಹೊಳಿ ಗೂಂಡಾಪಡೆ ವರ್ತನೆ; ಕಾಂಗ್ರೆಸ್ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರ ವರ್ತನೆಗೆ ಕಿಡಿಕಾರಿರುವ ಕಾಂಗ್ರೆಸ್, ಚಂಬಲ್ ಕಣಿವೆ ಡಕಾಯಿತರಂತೆ ರಮೇಶ್ ಜಾರಕಿಹೊಳಿ ಗೂಂಡಾಪಡೆ ವರ್ತನೆ ಮಾಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಲು ಮುರಿದು ಮೂಲೆಯಲ್ಲಿ ಕುಳಿತಿದೆ ಗೃಹ ಸಚಿವ ಬೊಮ್ಮಾಯಿಯವರೇ ಎಲ್ಲಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಬೆಳಗಾವಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ವಾಹನದ ಗಾಜನ್ನು ಪುಡಿಗೈದು ಗೂಂಡಾವರ್ತನೆ ಮೆರೆದಿರುವ ರಮೇಶ್ ಜಾರಕಿಹೊಳಿ ಬೆಂಬಲಿಗರ ನಡೆಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ರಾಜ್ಯದ ಕಾನೂನು ಸುವ್ಯವಸ್ಥೆ ಕಾಲು ಮುರಿದು ಮೂಲೆಯಲ್ಲಿ ಕುಳಿತಿರುವುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ವಿರೋಧ ಪಕ್ಷದ ಅಧ್ಯಕ್ಷರೊಬ್ಬರ ಎದುರು ಚಂಬಲ್ ಕಣಿವೆಯ ಡಕಾಯಿತರಂತೆ ವರ್ತಿಸುತ್ತಿದೆ ರಮೇಶ್ ಜಾರಕಿಹೊಳಿಯ ಗೂಂಡಾಪಡೆ. ಇಷ್ಟಾದರೂ ಗೃಹ ಸಚಿವರಾದ ಬೊಮ್ಮಾಯಿಯವರೇ ನೀವು ಅತ್ಯಾಚಾರಿಯ ಈ ನಾಟಕ ನೋಡಿ ಮಜಾ ಅನುಭವಿಸುತ್ತಾ ಕುಳಿತಿದ್ದೀರಾ? ಎಂದು ಪ್ರಶಿಸಿದೆ.

ರಮೇಶ್ ಜಾರಕಿಹೊಳಿಯ ಚಡ್ಡಿಯ ಲಾಡಿಯೂ ಸಡಿಲ, ನಾಲಿಗೆಯೂ ಸಡಿಲ, ಬುದ್ದಿಯೂ ಸಡಿಲ ಎನ್ನುವುದನ್ನ ಜಗತ್ತು ನೋಡಿದೆ. ರಾಜ್ಯದ ಮರ್ಯಾದೆ ದಿನದಿನಕ್ಕೂ ಕುಸಿಯುತ್ತಿದೆ. ಹೀಗಿದ್ದರೂ ಅತ್ಯಾಚಾರಿ ಆರೋಪಿಯನ್ನು ಗೂಳಿಯಂತೆ ತಿರುಗಲು ಬಿಟ್ಟಿದ್ದು ಸರ್ಕಾರದ ನೀಚತನವೋ ಅಥವಾ ಪೊಲೀಸರ ಹೇಡಿತನವೋ ಎಂಬುದನ್ನು ಗೃಹ ಸಚಿವರೇ ಉತ್ತರಿಸಬೇಕು ಎಂದು ಹೇಳಿದೆ.

ಸರ್ಕಾರಕ್ಕೆ ಬೆದರಿಕೆ ಹಾಕಿ, ಪುಂಡ ಪೋಕರಿಗಳಿಗೆ ಹಣ ಕೊಟ್ಟು ದಾಂಧಲೆ ಎಬ್ಬಿಸಿದಾಕ್ಷಣ ಅತ್ಯಾಚಾರಿ ಸದಾಚಾರಿಯಾಗಿ ಬದಲಾಗುವುದಿಲ್ಲ. ಆರೋಪಿಯನ್ನು ಬಂಧಿಸದೇ ಕಲ್ಲೆಸೆದು, ದಾಂಧಲೆ ಎಬ್ಬಿಸುವ ಭಯೋತ್ಪಾದಕ ಕೃತ್ಯವೆಸಗಲು ಕಳಿಸಿದ್ದೀರಾ ಎಂದು ಕಿಡಿಕಾರಿದೆ.

ಡಿ.ಕೆ.ಶಿವಕುಮಾರ್ ಎಸ್ಕಾರ್ಟ್ ವಾಹನದ ಮೇಲೆ ಕಲ್ಲು, ಚಪ್ಪಲಿ ಎಸೆದ ರಮೇಶ್ ಜಾರಕಿಹೊಳಿ ಬೆಂಬಲಿಗರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button