ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣಾ ಅಖಾಡ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ಮಂಗಲಾ ಅಂಗಡಿ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಕುಟುಂಬದ ಒಟ್ಟು ಆಸ್ತಿ 30.71 ಕೋಟಿ ರೂಪಾಯಿ. ಈ ಪೈಕಿ ಚರಾಸ್ತಿ 5.36 ಕೋಟಿ ರೂ, ಸ್ಥಿರಾಸ್ತಿ 25.35 ಕೋಟಿ ರೂಪಾಯಿ.
ವಿವಿಧ ಬ್ಯಾಂಕ್ ಗಳಲ್ಲಿ 7.55 ಕೋಟಿ ರೂ ಸಾಲ ಪಡೆದಿದ್ದು ಬೆಳಗಾವಿ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ನಿವೇಶನ, ಮನೆ ಹಾಗೂ ಹಲವು ಕಂಪನಿಗಳಲ್ಲಿ ಷೇರು ಹೊಂದಿದ್ದು, ಶಿಕ್ಷಣ ಸಂಸ್ಥೆಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ.
ಮಂಗಲಾ ಅಂಗಡಿ ತಮ್ಮ ಸ್ವಂತ ಹೆಸರಲ್ಲಿ 3.74 ಕೋಟಿ ಚರಾಸ್ತಿ, 11.3 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು 14.77 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. 60.23 ಲಕ್ಷ ರೂಪಾಯಿ ಸಾಲವಿದೆ. ಪತಿ ದಿ.ಸುರೇಶ್ ಅಂಗಡಿ ಅವರ ಹೆಸರಲ್ಲಿ 1.62 ಕೋಟಿ ರೂಪಾಯಿ ಚರಾಸ್ತಿ, 14.32 ಕೋಟಿ ರೂಪಾಯಿ ಸ್ಥಿರಾಸ್ತಿ ಸೇರಿದಂತೆ ಒಟ್ಟು 15.94ಕೋಟಿ ರೂಪಾಯಿ ಆಸ್ತಿ ಇದೆ.
ಮಂಗಲಾ ಬೆಳಗಾವಿ ವಿವಿಧ ಸೊಸೈಟಿಗಳಲ್ಲಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 37.62 ಲಕ್ಷ ರೂ ಠೇವಣಿ, ವಿವಿಧ ಕಂಪನಿಗಳಲ್ಲಿ 16.48 ಲಕ್ಷ ರೂಪಾಯಿ ವಿಮೆ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ