ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾ.ಇಬ್ರಾಹಿಂ ಖಾಲಿಫುಲ್ಲಾ, ಶ್ರೀ ರವಿಶಂಕರ್ ಗುರೂಜಿ, ಶ್ರೀರಾಮ್ ಪಂಚು ಅವರನ್ನೊಳಗೊಂಡ ತ್ರಿಸದ್ಯ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿದ್ದು, ಸಂಧಾನ ಪ್ರಕ್ರಿಯೆಯನ್ನು 4 ವಾರದೊಳಗೆ ಆರಂಭಿಸಿ, 8 ತಿಂಗಳೊಳಗೆ ಮುಗಿಸುವಂತೆ ಆದೇಶಿಸಿದೆ.
ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವ ಕುರಿತಂತೆ ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದೆ.
ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿ, ತೀರ್ಪನ್ನು ಕಾಯ್ದಿರಿಸಿತ್ತು. ಪೀಠದಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ ಎಸ್ ಎ ಬೊಬ್ದೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್, ಎಸ್ ಅಬ್ದುಲ್ ನಾಜೀರ್ ಇದ್ದಾರೆ.
ಸಂಧಾನ ಪ್ರಕ್ರಿಯೆ, ತೀರ್ಪು ಬಂದ ನಾಲ್ಕು ವಾರದೊಳಗೆ ಆರಂಭವಾಗಿ, ಎಂಟು ವಾರದೊಳಗೆ ಮುಕ್ತಾಯವಾಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಸ್ಲಿಂ ಅರ್ಜಿದಾರರು ಸಂಧಾನಕ್ಕೆ ಒಪ್ಪಿದ್ದಾರೆ ಎಂದು ಮುಸ್ಲಿಂ ಪರ ವಕೀಲ ನ್ಯಾ. ರಾಜೀವ್ ಧವನ್ ಹೇಳಿದ್ದರು. ಮಧ್ಯಸ್ಥಿಕೆ ವಹಿಸಲು ಯಾರಿಗೆ ಹೇಳಬೇಕು ಅಥವಾ ಯಾವ ಸಮಿತಿಗೆ ಹೇಳಬೇಕು ಎಂಬ ಬಗ್ಗೆ ಅರ್ಜಿದಾರರೇ ಒಮ್ಮತದ ನಿರ್ಧಾರಕ್ಕೆ ಬರಬೇಕು ಎಂದು ಮುಖ್ಯನ್ಯಾಯ ಮೂರ್ತಿ ರಂಜನ್ ಗೊಗೊಯ್ ಹೇಳಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ