ಯಾರೇ ಆಯ್ಕೆಯಾದರೂ ಗೋಕಾಕದಲ್ಲಿ ಸಂಭ್ರಮ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಏಪ್ರಿಲ್ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಈ ಬಾರಿ ಕುತೂಹಲ ಕೆರಳಿಸಲು ಹಲವು ಕಾರಣಗಳಿವೆ.
ವಿಶೇಷವೆಂದರೆ, ಎಲ್ಲದಕ್ಕೂ ಕೇಂದ್ರ ಬಿಂದು ಗೇಕಾಕ.
10 ಅಭ್ಯರ್ಥಿಗಳು ಕಣದಲ್ಲಿದ್ದರೂ ಪೈಪೋಟಿ ಕಾಂಗ್ರೆಸ್ – ಬಿಜೆಪಿ ಮಧ್ಯೆಯೇ. ಗೋಕಾಕದ ಮಗ, ಜಾರಕಿಹೊಳಿ ಕುಟುಂಬದ ದ್ವಿತೀಯ ಪುತ್ರ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ. ಗೋಕಾಕದ ಮಗಳು, ದಿವಂಗತ ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಬಿಜೆಪಿ ಅಭ್ಯರ್ಥಿ.
ಹಾಗಾಗಿ ಇಬ್ಬರ ಮೂಲವೂ ಗೋಕಾಕ. ಯಾರೇ ಗೆದ್ದರೂ ಗೋಕಾಕ ಜನರಿಗೆ ಸಂಭ್ರಮವೇ.
ಗೋಕಾಕದ ಜಾರಕಿಹೊಳಿ ಕುಟುಂಬದ ಇನ್ನೂ ನಾಲ್ವರು ಸಹೋದರರು ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ರಮೇಶ ಜಾರಕಿಹೊಳಿ ಸಿಡಿ ಹಗರಣದಿಂದಾಗಿ ಪ್ರಚಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಸಧ್ಯ ಕೊರೋನಾದಿಂದಾಗಿ ದೂರವೇ ಉಳಿಯಬೇಕಾಗಿದೆ. ಆದರೆ ಅವರ ಬೆಂಬಲಿಗರೆಲ್ಲ ಈಗಾಗಲೆ ಬಿಜೆಪಿ ಪರ ಪ್ರಚಾರ ಕಣದಲ್ಲಿದ್ದಾರೆ.
ಬಾಲಚಂದ್ರ ಜಾರಕಿಹೊಳಿ ಪ್ರಚಾರಕ್ಕೆ ಬರಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಲಖನ್ ಜಾರಕಿಹೊಳಿ ಸಧ್ಯ ಕಾಂಗ್ರೆಸ್ ನಲ್ಲಿದ್ದು, ಬಿಜೆಪಿಗೆ ಶೀಘ್ರ ಸೇರ್ಪಡೆಯಾಗಿ ಪ್ರಚಾರ ಕಣಕ್ಕಿಳಿಯಬಹುದು. ಭೀಮಶಿ ಜಾರಕಿಹೊಳಿ ಬಿಜೆಪಿಯಲ್ಲಿದ್ದು, ಪ್ರಚಾರಕ್ಕೆ ಇಳಿಯಲಿದ್ದಾರೆ ಎಂದು ಸಚಿವ ಉಮೇಶ ಕತ್ತಿ ಹೇಳಿಕೆ ನೀಡಿದ್ದಾರೆ.
ಅಂದರೆ ಜಾರಕಿಹೊಳಿ ಕುಟುಂಬದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವಿರುದ್ಧ ಇನ್ನುಳಿದ ನಾಲ್ವರು ಸಹೋದರರು ಪ್ರಚಾರ ನಡೆಸಲಿದ್ದಾರೆ. ಗೋಕಾಕ ಮತ್ತು ಅರಬಾವಿ ಜನತೆ ಕಾಂಗ್ರೆಸ್ ಗೆ ಮತ ನೀಡಲಿದ್ದಾರೋ ಅಥವಾ ಜಾರಕಿಹೊಳಿ ಕುಟುಂಬದ ಅಭ್ಯರ್ಥಿ ಬಿಟ್ಟು ಬಿಜೆಪಿಗೆ ಮತ ನೀಡಲಿದ್ದಾರೋ ಎನ್ನುವ ಕುತೂಹಲ ಮೂಡಿಸಿದೆ.
ಇನ್ನೊಂದು ವಿಶೇಷವೆಂದರೆ ಇಲ್ಲಿ ಪೈಪೋಟಿ ಇರುವುದು ರಮೇಶ್ ಜಾರಕಿಹೊಳಿ V/S ಸತೀಶ್ ಜಾರಕಿಹೊಳಿ ಮಧ್ಯೆ. ಇಬ್ಬರೂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಗೋಕಾಕ ಅರಬಾವಿ ಹೊರತುಪಡಿಸಿ ಉಳಿದೆಲ್ಲಡೆ ಬಿಜೆಪಿ ಹೆಚ್ಚಾಗಿ ಲಿಂಗಾಯತ ಮತಗಳ ಮೇಲೆ ವಿಶ್ವಾಸವಿಟ್ಟರೆ, ಕಾಂಗ್ರೆಸ್ ಇತರ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿದೆ. ಸುಮಾರು 7 ಲಕ್ಷ ಲಿಂಗಾಯತ ಮತಗಳಿದ್ದರೆ, 11 ಲಕ್ಷದಷ್ಟು ಇತರ ವರ್ಗಗಳ ಮತಗಳಿವೆ.
ಇಲ್ಲಿ ಮರಾಠಿ ಭಾಷಿಕರ ಮತಗಳು ಸಹ ನಿರ್ಣಾಯಕವಾಗಲಿವೆ. ಲಕ್ಷಕ್ಕಿಂತ ಹೆಚ್ಚು ಮರಾಠಿ ಭಾಷಿಕ ಮತಗಳಿದ್ದು, ಅವು ಬಿಜೆಪಿ ಬದಲು ಸ್ವತಂತ್ರ (ಎಂಇಎಸ್) ಅಭ್ಯರ್ಥಿಗೆ ಬಿದ್ದರೆ ಕಾಂಗ್ರೆಸ್ ಗೆ ಲಾಭವಾಗಲಿದೆ.
ಈ ಬಾರಿ ಬಿಜೆಪಿ ಹೆಚ್ಚಾಗಿ ಅನುಕಂಪದ ಅಲೆಯ ಮೇಲೆ ಗೆಲ್ಲುವ ವಿಶ್ವಾಸ ಹೊಂದಿದೆ. ಜೊತೆಗೆ ಕಳೆದ ಚುನಾವಣೆಯಲ್ಲಿ ಸುರೇಶ ಅಂಗಡಿ 7 ಲಕ್ಷಕ್ಕಿಂತ ಹೆಚ್ಚಿನ ಮತ ಪಡೆದಿರುವುದು ಸಹ ಬಿಜೆಪಿಯಲ್ಲಿ ವಿಶ್ವಾಸ ಉಲಿಸಿದೆ. ಬೇರೆ ಯಾವುದೇ ಪ್ರಬಲ ಅಲೆ ಈ ಬಾರಿ ಕಾಣಿಸುತ್ತಿಲ್ಲ. ಪಕ್ಷದೊಳಗಿನ ಗೊಂದಲ, ಬೆಲೆ ನಿಯಂತ್ರಣದಲ್ಲಿ ವಿಫಲ ಮತ್ತಿತರ ಕಾರಣಗಳು ಪಕ್ಷಕ್ಕೆ ಹಿನ್ನಡೆಯುಂಟು ಮಾಡಿವೆ. ಜಗದೀಶ್ ಶೆಟ್ಟರ್ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿರುವ 3 ಗುಂಪುಗಳನ್ನು ಒಗ್ಗೂಡಿಸಿ ಮುನ್ನಡೆಯುವುದೇ ಅವರಿಗೆ ಸವಾಲಾಗಿದೆ. ಲಿಂಗಾಯತರ ಮತದಾನ ಪ್ರಮಾಣ ಕಡಿಮೆ ಇರುವುದು ಸಹ ಬಿಜೆಪಿಗೆ ಸಮಸ್ಯೆಯಾಗಿದೆ.
ಕಾಂಗ್ರೆಸ್ ಬೆಲೆ ಏರಿಕೆಯಂತಹ ಬಿಜೆಪಿ ಸರಕಾರದ ಜನವಿರೋಧಿ ಧೋರಣೆಗಳನ್ನು ಹೈಲೈಟ್ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರಿಗೆ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ ಎಂದು ಪ್ರಚಾರ ನಡೆಸುತ್ತಿದೆ. ಸತೀಶ್ ಜಾರಕಿಹೊಳಿ ಜಿಲ್ಲೆಯಾದ್ಯಂತ ಓಟ್ ಬ್ಯಾಂಕ್ ಹೊಂದಿರುವ ಪ್ರಬಲ ನಾಯಕನಾಗಿರುವುದು ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್. ಮುಸ್ಲಿಂ ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಪೂರ್ಣವಾಗಿ ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಆದರೆ ಕಳೆದ ಬಾರಿ ಸುರೇಶ ಅಂಗಡಿ ಪಡೆದಿದ್ದ ಸುಮಾರು 7 ಲಕ್ಷ ಮತಗಳಲ್ಲಿ ಅರ್ಧದಷ್ಟನ್ನಾದರೂ ಟರ್ನ್ ಮಾಡುವುದು ಅವರ ಸವಾಲಾಗಿದೆ. ಹಲವಾರು ತಂತ್ರಗಳ ಮೂಲಕ ಅವರು ಪ್ರಚಾರ ನಡೆಸಿದ್ದಾರೆ.
ಒಟ್ಟಾರೆ ಈ ಬಾರಿ ಬೆಳಗಾವಿ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಎರಡೂ ಪಕ್ಷಗಳಲ್ಲಿ ಪ್ಲಸ್ – ಮೈನಸ್ ಇರುವುದರಿಂದ ಸಧ್ಯದ ಟ್ರೆಂಡ್ ಸಮಬಲದ ಓಟದಂತೆ ಕಾಣುತ್ತಿದೆ. ಬಿಜೆಪಿ ಪ್ರಚಾರಕ್ಕೆ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ಪ್ರಚಾರಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ಅನೇಕ ನಾಯಕರು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತಗಳು ಹೇಗೆ ಟರ್ನ್ ಆಗಲಿವೆ ನೋಡಬೇಕಿದೆ.
ಯಾವ ಕ್ಷೇತ್ರದಲ್ಲಿ ಹೆಚ್ಚು, ಯಾವ ಕ್ಷೇತ್ರದಲ್ಲಿ ಕಡಿಮೆ ಮತದಾರರು; ಸಮಗ್ರ ಮಾಹಿತಿ ಇಲ್ಲಿದೆ
ಏಪ್ರಿಲ್ 7ರಂದು ಬೆಳಗಾವಿಗೆ ಡಿ.ಕೆ.ಶಿವಕುಮಾರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ