ಪ್ರಗತಿವಾಹಿನಿ ಸುದ್ದಿ, ಕಾರವಾರ : ಕಾರವಾರ ಮೆಡಿಕಲ್ ಕಾಲೇಜಿನ ೨೭ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದೆ.
ಕಾಲೇಜಿನ ಮೂವರು ವಿದ್ಯಾರ್ಥಿನಿಯರಿಗೆ ಎರಡು ದಿನಗಳ ಹಿಂದೆ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆ ನಡೆಸಲಾಯಿತು. ಪ್ರಥಮ ಮತ್ತು ದ್ವಿತೀಯ ವರ್ಷದ ೨೪ ಎಂಬಿಬಿಎಸ್ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಸುಮಾರು ೪೫೦ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ಪರೀಕ್ಷೆ ಸಮೀಪಿಸಿರುವ ಹಿನ್ನೆಲೆಯಲ್ಲಿ ಅಂತಿಮ ಎಂಬಿಬಿಎಸ್ನ ಸುಮಾರು ೧೫೦ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳು ಮುಂದುವರೆದಿದೆ.
ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಲಸಿಕೆ ಪಡೆದಿರಲಿಲ್ಲ, ಅಲ್ಲದೇ ಪಿಕ್ನಿಕ್ ಸ್ಪಾಟ್ಗೆ ಭೇಟಿ ನೀಡಿದ್ದರು. ಈ ವಿದ್ಯಾರ್ಥಿನಿಯರಿಗೆ ಸೋಂಕು ತಗುಲಿದೆ. ಬಳಿಕ ಉಳಿದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿ ಲಸಿಕೆಯ ಮೊದಲ ಡೋಸ್ ಪಡೆದಿರುವ ೨೪ ವಿದ್ಯಾರ್ಥಿಗಳಲ್ಲೂ ಸೋಂಕು ಪತ್ತೆಯಾಗಿದೆ. ಆದರೆ ಈ ಲಸಿಕೆ ಪಡೆದ ವಿದ್ಯಾರ್ಥಿಗಳಲ್ಲಿ ಯಾವುದೇ ತರಹದ ರೋಗ ಲಕ್ಷಣವೂ ಇರಲಿಲ್ಲ. ಆರೋಗ್ಯ ಸ್ಥಿತಿ ತೀರಾ ಸಹಜವಾಗಿದೆ.
ಇನ್ನು ಕಾಲೇಜಿನ ಉಳಿದ ಬಹುತೇಕ ವಿದ್ಯಾರ್ಥಿಗಳಲ್ಲಿ ಕೋವಿಡ್ ನೆಗೆಟಿವ್ ವರದಿ ಬಂದಿದೆ. ಈ ಪೈಕಿ ಅಂತಿಮ ಎಂಬಿಬಿಎಸ್ನ ೧೫೦ ವಿದ್ಯಾರ್ಥಿಗಳಿಗೆ ಏ. ೧೮ರಿಂದ ಪರೀಕ್ಷೆಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅವರನ್ನು ಉಳಿಸಿಕೊಳ್ಳಲಾಗಿದ್ದು ನೆಗೆಟಿವ್ ವರದಿ ಬಂದ ಉಳಿದ ಎಲ್ಲ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ ಎಂದು ಕಾಲೇಜಿನ ನಿರ್ದೇಶಕ ಡಾ. ಗಜಾನನ ನಾಯಕ ಅವರು ಮಾಹಿತಿ ನೀಡಿದರು.
ಮತ್ತೊಂದು ಬೆತ್ತಲೆ ವಿಡಿಯೋ ಪ್ರಕರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ