Kannada NewsLatest

ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ ಜಾರಿ ; ಏನೇನು ಷರತ್ತು?

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಸುವರ್ಣ ವಿಧಾನ ಸೌಧದ ಸುತ್ತಲೂ ಸುಮಾರು ೧ ಕಿ.ಮೀ ಸುತ್ತಳತೆಯಲ್ಲಿ ಏ.೧೦ ರಿಂದ ಮೇ.೯ ಮಧ್ಯರಾತ್ರಿಯವರೆಗೆ ಸಿ.ಆರ್.ಪಿ.ಸಿ ೧೯೭೩ ಕಲಂ ೧೪೪ ಪ್ರಕಾರ ನಿಷೇಧಾಜ್ಞೆಯನ್ನು ವಿಧಿಸಿ, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಪೊಲೀಸ್ ಆಯುಕ್ತರಾದ ಡಾ|| ಕೆ. ತ್ಯಾಗರಾಜನ್ ಅವರು ಆದೇಶ ಹೊರಡಿಸಿದ್ದಾರೆ.
ಹಿರೇಬಾಗೇವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸುವರ್ಣ ವಿಧಾನ ಸೌಧದ ಬಳಿ ಕೆಲವು ಸಂಘ ಸಂಸ್ಥೆಯವರು, ಪ್ರತಿಭಟನಾಕಾರರು ಹಲವು ಬೇಡಿಕೆಗಳ ಈಡೇರಿಕೆಗಾಗಿ, ಚಿಕ್ಕಪುಟ್ಟ ವಿಷಯಗಳಿಗೆ ಪದೇ ಪದೇ ಸುವರ್ಣ ಸೌಧದ ಬಳಿಗೆ ಬಂದು ಪ್ರತಿಭಟನೆ ಮಾಡುತ್ತಿರುತ್ತಾರೆ. ಆದುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಸುವರ್ಣ ವಿಧಾನ ಸೌಧದ ಸುತ್ತಲೂ ಯಾವುದೇ ಪ್ರತಿಭಟನೆಗಳು ನಡೆಯದಂತೆ ನೋಡಿಕೊಳ್ಳುವುದು ಅವಶ್ಯಕವಿರುವ್ಯದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುವರ್ಣ ವಿಧಾನ ಸೌಧದ ಪಶ್ಚಿಮ ದಿಕ್ಕಿನ ಮುಖ್ಯ ಗೇಟ್ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ-೪ (೬ ಲೇನ್) ರಸ್ತೆಗೆ ಹೊಂದಿಕೊಂಡಿರುತ್ತದೆ. ಈ ಸ್ಥಳವು ಹೆಚ್ಚಿನ ಅಪಘಾತಗಳು ನಡೆಯುವ ಪ್ರದೇಶ ಸಹ ಆಗಿರುತ್ತದೆ. ಸುವರ್ಣ ವಿಧಾನ ಸೌಧದ ಮುಂದುಗಡೆ ಪ್ರತಿಭಟನೆಗಳು ನಡೆದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗುತ್ತದೆ.
ಬೆಳಗಾವಿ ನಗರದಲ್ಲಿ ಕೆ.ಎಲ್.ಇ ಆಸ್ಪತ್ರೆ, ಬಿಮ್ಸ್ ಆಸ್ಪತ್ರೆ, ಲೇಕ್‌ವ್ಯೂವ್ ಆಸ್ಪತ್ರೆ ಇನ್ನೂ ಅನೇಕ ದೊಡ್ಡ ಪ್ರಮಾಣದ ಆಸ್ಪತ್ರೆಗಳಿರುವುದರಿಂದ ಹೊರಗಿನ ರೋಗಿಗಳನ್ನು/ಅಪಘಾತದ ಗಾಯಾಳುಗಳನ್ನು ಅಂಬುಲೆನ್ಸ್‌ಗಳಲ್ಲಿ ಸಾಗಿಸುವಾಗ, ಪ್ರತಿಭಟನೆಗಳು ನಡೆದಲ್ಲಿ ಅಂಬುಲೆನ್ಸ್‌ಗಳ ಸಂಚಾರಕ್ಕೆ ತೊಂದರೆಯಾಗುತ್ತದೆ ಹಾಗೂ ಸಾವು ನೋವು ಸಂಭವಿಸುವ ಸಾಧ್ಯತೆ ಇರುತ್ತದೆ.
ಸುವರ್ಣ ವಿಧಾನ ಸೌಧ ಎದುರುಗಡೆ ಇರುವ ರಾಷ್ಟ್ರಿಯ ಹೆದ್ದಾರಿ-೪ರಲ್ಲಿ ಅವಶ್ಯಕ ವಸ್ತುಗಳು ಮತ್ತು ಜೀವನಾವಶ್ಯಕ ಸಾಮಗ್ರಿಗಳು ಸಾಗಿಸುವ ವಾಹನಗಳು ಸಂಚರಿಸುತ್ತಿದ್ದು ಪ್ರತಿಭಟನೆ ಸಂದರ್ಭದಲ್ಲಿ ಸಾಗಾಣ ಕೆಗೆ ಅನಾನುಕೂಲವಾಗುತ್ತದೆ. ಸರಕಾರದ ಆದೇಶದ ಮೇರೆಗೆ ಸುವರ್ಣ ವಿಧಾನ ಸೌಧದಲ್ಲಿ ಈಗಾಗಲೇ ೨೪ ಸರ್ಕಾರಿ ಕಛೇರಿಗಳು ಕಾರ್ಯನಿರ್ವಹಿಸುತ್ತಿವೆ. ಮೇಲಿಂದ ಮೇಲೆ ಸುವರ್ಣ ವಿಧಾನ ಸೌಧದ ಹತ್ತಿರ ಪ್ರತಿಭಟನೆ ಮಾಡುವುದರಿಂದ ಕಛೇರಿಗಳ ದಿನನಿತ್ಯದ ಕಾರ್ಯಕಲಾಪಗಳಿಗೆ ತೊಂದರೆಯಾಗುತ್ತದೆ.
ಸುವರ್ಣ ವಿಧಾನ ಸೌಧದ ಸುತ್ತಮುತ್ತ ಹಲಗಾ, ಬಸ್ತವಾಡ, ಕೆ. ಕೆ. ಕೊಪ್ಪ, ಹಾಗೂ ಕೆಲವು ಗ್ರಾಮಗಳು ಭಾಷಾವಾರು ಆಧಾರದ ಮೇಲೆ ಸೂಕ್ಷ್ಮ ಗ್ರಾಮಗಳಾಗಿರುವುದರಿಂದ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತತೆ ಕಾಪಾಡುವ ಹಿತದೃಷ್ಟಿಯಿಂದ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಪೊಲೀಸ್ ಆಯುಕ್ತರಾದ ಡಾ|| ಕೆ. ತ್ಯಾಗರಾಜನ್ ಅವರು ತಿಳಿಸಿದ್ದಾರೆ.

ನಿಷೇಧಾಜ್ಞೆ ಜಾರಿ ಪ್ರದೇಶದಲ್ಲಿ ಷರತ್ತುಗಳು:

ನಿಷೇಧಾಜ್ಞೆ ಜಾರಿ ಪ್ರದೇಶದಲ್ಲಿ ಸಿ.ಆರ್.ಪಿ.ಸಿ ೧೯೭೩ ಕಲಂ ೧೪೪ ಪ್ರಕಾರ ಈ ಕೆಳಕಂಡ ಷರತ್ತುಗಳನ್ನು ವಿಧಿಸಲಾಗಿದೆ.
ಬೆಳಗಾವಿ ನಗರದ ಸುವರ್ಣ ಸೌಧದ ಎಡಬದಿಯಿಂದ ಟೋಯಟಾ ಶೋರೂಮ್‌ವರೆಗೆ ಮತ್ತು ಸುವರ್ಣ ಸೌಧದ ಬಲಬದಿಯಿ ಂದ ಹಲಗಾ ಗ್ರಾಮದವರೆಗೆ ಅದೇ ರೀತಿ ಎದರುಗಡೆ ಜೀನಗೌಡಾ ಆಸ್ಪತ್ರೆವರೆಗೆ ೧ ಕೀ.ಮಿ ವ್ಯಾಪ್ತಿಯಲ್ಲಿ ೦೫ ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೇರವಣ ಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಲಾಗಿದೆ.
ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ.
ಕಲ್ಲುಗಳನ್ನು, ಕ್ಷಾರಪದಾರ್ಥ, ಪಟಾಕಿ ಇಲ್ಲವೆ ಸ್ಪೋಟಕ ವಸ್ತುಗಳು ಅಥವಾ ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ನಿಷೇಧಿತ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.ಕಲ್ಲುಗಳನ್ನು ಮತ್ತು ಎಸೆಯುವಂತಹ ವಸ್ತುಗಳನ್ನು ಅಥವಾ ಬಿಡುವ ಸಾಧನಗಳನತ್ನು ತೆಗೆದುಕೊಂಡು ಹೋಗುವುದನ್ನು ಪ್ರತಿಬಂಧಿಸಲಾಗಿದೆ.
ಸುವರ್ಣ ಸೌಧದ ಸುತ್ತಮುತ್ತಲಿನ ೧ ಕೀ. ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕರ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ಪ್ರತಿಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಡಾ|| ಕೆ. ತ್ಯಾಗರಾಜನ್ ಅವರು ತಿಳಿಸಿದ್ದಾರೆ.
ಯಾವುದೇ ರೀತಿಯ ವಿಜಯೋತ್ಸವ, ಸಾರ್ವಜನಿಕ ಮೆರವಣ ಗೆ, ಸಾರ್ವಜನಿಕ/ರಾಜಕೀಯ ಸಭೆ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಿದೆ.
ಯಾವುದೇ ವ್ಯಕ್ತಿ ಸಾರ್ವಜನಿಕರಾಗಲಿ ಈ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಪೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡುಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಂತಹ ಮಾರಕಾಸ್ತ್ರಗಳನ್ನು ಸರಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು. ಅಲ್ಲದೇ, ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣ ಗೆಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣ ಗೆಗಳು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಿಯಮಗಳನ್ನು ಪಾಲಿಸಬೇಕು.
ರಾಷ್ಟ್ರೀಯ ಹೆದ್ದಾರಿ-೦೪ರಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುವುದು, ರಾಷ್ಟ್ರೀಯ ಹೆದ್ದಾರಿಯ ಸಂಚಾರಕ್ಕೆ ತಡೆ ಒಡ್ಡಿ ಹೆದ್ದಾರಿಯಲ್ಲಿ ಓಡಾಡುತ್ತಿರುವ ಅವಶ್ಯಕ ರೋಗಿಗಳನ್ನು ಸಾಗಿಸುವ ಅಂಬುಲೆನ್ಸ್ ಹಾಗೂ ಇತರೆ ಅವಶ್ಯಕ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ತಡೆದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವದು ಎಂದು ಅವರು ತಿಳಿಸಿದ್ದಾರೆ.
ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಕಲಂ ೧೮೮ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಪೊಲೀಸ್ ಆಯುಕ್ತರಾದ ಡಾ|| ಕೆ. ತ್ಯಾಗರಾಜನ್ ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button