Kannada NewsKarnataka NewsLatest

ಬಿಜೆಪಿಗೆ ಶಾಕ್ ಕೊಡುತ್ತಾ ಕಾಂಗ್ರೆಸ್ ಅಂಡರ್ ಕರೆಂಟ್?

ಬಿಜೆಪಿ ಟಿಕೆಟ್ ಪಡೆಯಲು ಪೈಪೋಟಿ ನಡೆಸಿದ್ದ 35 ಜನರ ಪೈಕಿ 4 -5 ಜನರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಗಾಯಬ್ ಆಗಿದ್ದಾರೆ. ಮುಖಂಡರು ಬಂದಾಗ ಮಾತ್ರ ಮುಖ ತೋರಿಸಲು ಬರುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ಬೆಳಗಾವಿ ಲೋಕಸಭಾ ಉಪಚುನಾವಣೆ ಈ ಬಾರಿ 2 -3 ಕಾರಣದಿಂದ ಕುತೂಹಲ ಮೂಡಿಸಿದೆ. ಈ ಹಿಂದಿನ ಅನೇಕ ಚುನಾವಣೆಗಳಂತೆ ಇದು ಒನ್ ಸೈಡೆಡ್ ಅಲ್ಲ. ಕಾಂಗ್ರೆಸ್ ಕ್ಷೇತ್ರವನ್ನು ಮರಳಿ ಪಡೆಯುವ ಪ್ರಯತ್ನ ನಡೆಸಿದ್ದರೆ, ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳಲು ಹೆಣಗಾಟ ನಡೆಸಿದೆ.

ಬಿಜೆಪಿ ಈ ಚುನಾವಣೆಯಲ್ಲಿ ನೆಚ್ಚಿಕೊಂಡಿದ್ದು ಅನುಕಂಪದ ಅಲೆ ಮತ್ತು ಲಿಂಗಾಯತ ಮಗಳನ್ನು. ಅನುಕಂಪದ ಅಲೆ ಎಷ್ಟರರಮಟ್ಟಿಗೆ ಕೈ ಹಿಡಿಯುತ್ತದೆ ಎನ್ನುವ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಲಿಂಗಾಯತ ಮತಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಹೋಗಿ ಇತರ ವರ್ಗಗಳ ಮತಗಳನ್ನು ಕಳೆದುಕೊಳ್ಳುವ ಆತಂಕ ಕಾಡುತ್ತಿದೆ. ಹಾಗಾಗಿಯೇ ಕೊನೆಯ ಹಂತದಲ್ಲಿ ಹತ್ತಾರು ರೀತಿಯ ಕಸರತ್ತು ನಡೆಸುತ್ತಿದೆ.

ಇನ್ನು ಜಾರಕಿಹೊಳಿ ಅವರ ತವರಾಗಿರುವ ಗೋಕಾಕ ಮತ್ತು ಅರಬಾವಿ ಮತಗಳು ಬಿಜೆಪಿಗೆ ಇನ್ನೂ ಕಬ್ಬಿಣದ ಕಡಲೆಯಾಗಿಯೇ ಉಳಿದಿವೆ. ಗೋಕಾಕ್ ಹೆಚ್ಚಿನ ಜನತೆ ಜಾರಕಿಹೊಳಿ ಕುಟುಂಬ ಬಿಟ್ಟು ಮತ ಚಲಾಯಿುಸುತ್ತಾರೆ ಎನ್ನುವ ವಿಶ್ವಾಸವಿಲ್ಲ. ಜೊತೆಗೆ ರಮೇಶ ಜಾರಕಿಹೊಳಿ ವಿರುದ್ಧ ಹೋರಾಟ ಮಾಡುತ್ತ ಬಂದಿರುವ ಅಶೋಕ ಪೂಜಾರಿ ಈ ಬಾರಿ ಕಾಂಗ್ರೆಸ್ ಬೆಂಬಲಿಸಿದ್ದಾರೆ.

ಇದರ ಜೊತೆಗೆ ಮರಾಠಿ ಭಾಷಿಕ ಮತಗಳು ಬಿಜೆಪಿಗೆ ಈ ಬಾರಿ ದೊಡ್ಡ ಹೊಡೆತ ನೀಡಬಹುದು. ಮರಾಠಿ ಅಭ್ಯರ್ಥಿ ಗೆಲ್ಲಲು ಸಾಧ್ಯವೆ ಇಲ್ಲ ಎನ್ನುವುದು ಅವರಿಗೂ ಗೊತ್ತಿದೆ. ಆದರೆ ಬಿಜೆಪಿಗೆ ಹೊಡೆತ ಕೊಡುವ ಉದ್ದೇಶದಿಂದಲೇ ದೊಡ್ಡ ಪ್ಲ್ಯಾನ್ ಹಾಕಿದಂತೆ ಕಾಣುತ್ತಿದೆ.

ಬಿಜೆಪಿ ಈ ಬಾರಿ ಜಗದೀಶ್ ಶೆಟ್ಟರ್ ಗೆ ಚುನಾವಣೆಯ ನೇತೃತ್ವ ವಹಿಸಿದೆ. ಅವರು ಬೆಳಗಾವಿಯಲ್ಲೇ ಮೊಕ್ಕಾಂ ಮಾಡಿ ಎಲ್ಲವನ್ನೂ ನಿರ್ವಹಿಸುತ್ತಿದ್ದಾರೆ. ಆದರೆ ಬೆಳಗಾವಿ ರಾಜಕಾರಣ ಹುಬ್ಬಳ್ಳಿ -ಧಾರವಾಡ ರಾಜಕಾರಣಕ್ಕಿಂತ ಭಿನ್ನವಾಗಿದೆ. ಇಲ್ಲಿಯ ಒಳ ಸುಳಿಗಳನ್ನು ಅರಿಯುವುದು ಅಷ್ಟು ಸುಲಭವಲ್ಲ.

ಆರಂಭದಲ್ಲಿ ಬಿಜೆಪಿ ಲಿಂಗಾಯತ ಮತಗಳನ್ನು ಕ್ರೋಢೀಕರಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡಿತು. ಆದರೆ ಬರಬರುತ್ತ ಕಾಂಗ್ರೆಸ್ 3 -4 ತಿಂಗಳಿಂದಲೇ ಇತರ ವರ್ಗಗಳ ಮತಗಳಿಗಾಗಿ ಹಾಕಿರುವ ಸ್ಕೆಚ್ ಬಿಜೆಪಿಗೆ ಅರ್ಥವಾಗತೊಡಗಿತು. ಬೇರೆ ವರ್ಗಗಳನ್ನು ಕಡೆಗಣಿಸಿ ಲಿಂಗಾಯತರನ್ನು ಅತಿಯಾಗಿ ಓಲೈಸಲು ಹೋದರೆ ಆಗುವ ಅಪಾಯದ ಅರಿವಾಯಿತು. (ಈ ಕ್ಷೇತ್ರದಲ್ಲಿ ಅಂದಾಜು 7 ಲಕ್ಷ ಲಿಂಗಾಯತರು, 11 ಲಕ್ಷ ಇತರ ವರ್ಗಗಳ ಮತಗಳಿವೆ. ಲಿಂಗಾಯತರ ಮತದಾನ ಪ್ರಮಾಣ ಕಡಿಮೆ).

ಗೋಕಾಕ ಮತ್ತು ಅರಬಾವಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಬಾರದಿದ್ದುದು ಬಿಜೆಪಿಗೆ ದೊಡ್ಡ ಆತಂಕ ಸೃಷ್ಟಿಸಿತು. ಈ ಎರಡೂ ಕ್ಷೇತ್ರಗಳು ಕೈಕೊಡಲಿವೆ ಎನ್ನುವ ಸೂಕ್ಷ್ಮತೆಯನ್ನು ಅರಿತು ಮುಖ್ಯಮಂತ್ರಿಗಳನ್ನು ಆಹ್ವಾನಿಸಿತು. ಅಷ್ಟೊತ್ತಿಗೆ ಬಾಲಚಂದ್ರ ಜಾರಕಿಹೊಳಿ ಆಖಾಡಕ್ಕಿಳಿದರು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿಯನ್ನು ಬೆಂಬಲಿಸಿದ ಮತದಾರರೆಲ್ಲ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಾರೆಂದುಕೊಂಡರೆ ದೊಡ್ಡ ಮೂರ್ಖತನವಾದೀತು. ಏಕೆಂದರೆ ಅಲ್ಲಿ ಸತೀಶ್  ಜಾರಕಿಹೊಳಿ ಕೂಡ ಸಾಕಷ್ಟು ಮತಬ್ಯಾಂಕ್ ಹೊಂದಿದ್ದಾರೆ.

ಬಿಜೆಪಿಗೆ ಈ ಬಾರಿ ಹೆಚ್ಚಿನ ಮತಗಳನ್ನು ತಂದುಕೊಡಲು ಯಾವುದೇ ಅಲೆ ಕೈಹಿಡಿಯುತ್ತಿಲ್ಲ. ಅಲ್ಲದೆೆ ಬೆಲೆ ಏರಿಕೆ ಬಿಸಿಯಿಂದ ಜನರು ತತ್ತರಿಸಿಹೋಗಿದ್ದಾರೆ. ಹಾಗಾಗಿ ಜನರನ್ನು ಕನ್ವಿನ್ಸ್ ಮಾಡುವುದರಲ್ಲಿ ತತ್ತರಿಸಿಹೋಗುತ್ತಿದ್ದಾರೆ. ಜೊತೆಗೆ ಬಿಜೆಪಿ ಟಿಕೆಟ್ ಪಡೆಯಲು ಪೈಪೋಟಿ ನಡೆಸಿದ್ದ 35 ಜನರ ಪೈಕಿ 4 -5 ಜನರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಗಾಯಬ್ ಆಗಿದ್ದಾರೆ. ಮುಖಂಡರು ಬಂದಾಗ ಮಾತ್ರ ಮುಖ ತೋರಿಸಲು ಬರುತ್ತಿದ್ದಾರೆ.

ಆದರೆ ದೇಶದ ಬೇರೆ ಬೇರೆ ಭಾಗಗಳಿಂದ ಬಿಜೆಪಿ ಹಾಗೂ ಆರ್ ಎಸ್ಎಸ್ ಕಾರ್ಯಕರ್ತರು ಆಗಮಿಸಿ ಬೆಳಗಾವಿಯಲ್ಲೇ ಕೆಲಸ ಮಾಡುತ್ತಿರುವುದು ಸ್ವಲ್ಪಮಟ್ಟಿಗೆ ಆಶಾಕಿರಣ ಮೂಡಿಸಿದೆ. ಕಳೆದ ಬಾರಿ ಕಾಂಗ್ರೆಸ್ ವೀಕ್ ಅಭ್ಯರ್ಥಿ ಕಣಕ್ಕಿಳಿಸಿತ್ತು. ಆಗ ಸುರೇಶ ಅಂಗಡಿ 7 ಲಕ್ಷ ಮತ ಪಡೆದು, 4 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಅದೇ ಗುಂಗಿನಲ್ಲಿ ನಾಯಕರು ತೇಲಾಡುತ್ತಿದ್ದಾರೆ. ಈ ಬಾರಿ ಪರಿಸ್ಥಿತಿ ಆ ರೀತಿ ಇಲ್ಲ. ಇನ್ನೆರಡು ದಿನದಲ್ಲಿ  ಏನೇನು ಕರಾಮತ್ತು ನಡೆಯುತ್ತದೆ ಕಾದು ನೋಡಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button