Kannada NewsLatest

ಕೋವಿಡ್ ಮಾದರಿ ಪರೀಕ್ಷೆ ಸಾಮರ್ಥ್ಯ ಹೆಚ್ಚಳಕ್ಕೆ ನಿರ್ಧಾರ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ಪತ್ತೆ ಹಚ್ಚಲು ಜನರಿಂದ ಸಂಗ್ರಹಿಸಲಾಗುವ ಮಾದರಿಯನ್ನು ಸಂಪೂರ್ಣವಾಗಿ ಇಲ್ಲಿಯೇ ಪರೀಕ್ಷಿಸಲು ಸಾಧ್ಯವಾಗುವಂತೆ ಮಾದರಿ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುವ ಕುರಿತು ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಇಲ್ಲಿನ ನೆಹರೂ ನಗರದಲ್ಲಿರುವ ಐ.ಸಿ.ಎಂ.ಆರ್-ರಾಷ್ಟ್ರೀಯ ಚಿಕಿತ್ಸಾ ವಿಜ್ಞಾನ ಸಂಸ್ಥೆಯಲ್ಲಿ ಬುಧವಾರ (ಏ.21) ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಎನ್.ಐ.ಟಿ.ಎಂ ಅಧಿಕಾರಿಗಳ ಸಭೆಯನ್ನು ನಡೆಸಲಾಯಿತು.

ಕೋವಿಡ್ ಪತ್ತೆಗಾಗಿ ಜಿಲ್ಲೆಯಲ್ಲಿ ಸಂಗ್ರಹಿಸಲಾಗುವ ಮಾದರಿಯ ಪರೀಕ್ಷೆಗೆ ಬೇರೆ ಜಿಲ್ಲೆಗಳ ಪ್ರಯೋಗಾಲಯಕ್ಕೆ‌ ಕಳಿಸುವ ಬದಲು ಎಲ್ಲ ಮಾದರಿಗಳನ್ನು ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಹಾಗೂ ಎನ್.ಐ.ಟಿ.ಎಂ. ಪ್ರಯೋಗಾಲಯದಲ್ಲಿಯೇ ಪರೀಕ್ಷಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸದ್ಯಕ್ಕೆ ಜಿಲ್ಲೆಯಲ್ಲಿ ಪ್ರತಿದಿನ ಆರು ಸಾವಿರ ಜನರಿಂದ ಮಾದರಿ ಸಂಗ್ರಹಿಸಲಾಗುತ್ತಿದೆ. ಅದರಲ್ಲಿ ಬಿಮ್ಸ್ ಹಾಗೂ ಎನ್.ಐ.ಟಿ.ಎಂ ಪ್ರಯೋಗಾಲಯದಲ್ಲಿ ಪ್ರತಿದಿನ ಮೂರು‌‌ಸಾವಿರ‌ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದ್ದು, ಇನ್ನುಳಿದ ಮಾದರಿಯನ್ನು ಬೇರೆ ಜಿಲ್ಲೆಗಳಿಗೆ ಕಳಿಸಲಾಗುತ್ತಿದೆ. ಇದರಿಂದ ವರದಿ ಬರುವುದು ವಿಳಂಬವಾಗುತ್ತಿದೆ. ಈ ರೀತಿಯ ವಿಳಂಬವನ್ನು ತಪ್ಪಿಸುವ ಕುರಿತು ಚರ್ಚೆ ನಡೆಯಿತು.

ಬಿಮ್ಸ್ ಹಾಗೂ ಎನ್.ಐ.ಟಿ.ಎಂ. ಪ್ರಯೋಗಾಲಯದಲ್ಲಿ ತಪಾಸಣಾ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಎಲ್ಲ ಮಾದರಿಗಳನ್ನು ಸ್ಥಳೀಯವಾಗಿ ಪರೀಕ್ಷಿಸಲು ಇರುವ ಎಲ್ಲ‌ ಮಾರ್ಗೋಪಾಯಗಳನ್ನು ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಸಭೆಯಲ್ಲಿ ವಿವರಿಸಿದರು.

ಬಿಮ್ಸ್ ಹಾಗೂ ಎನ್.ಐ.ಟಿ.ಎಂ. ಪ್ರಯೋಗಾಲಯದಲ್ಲಿ ತಪಾಸಣಾ ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯವಿರುವ ವೈದ್ಯಕೀಯ ಪರಿಕರ ಹಾಗೂ ಆರ್ಥಿಕ ನೆರವು ಸೇರಿದಂತೆ ಎಲ್ಲ ರೀತಿಯ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು ಎಂದು ಡಾ.ಕೆ.ಹರೀಶ್ ಕುಮಾರ್ ತಿಳಿಸಿದರು.
ಮಾದರಿ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಉಳಿದ ಮೂರು ಸಾವಿರ ಮಾದರಿಗಳನ್ನು ಕೂಡ ಇಲ್ಲಿಯೇ ಪರೀಕ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇದಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಕೂಡಲೇ ಮಾಡಿಕೊಂಡು ಮುಂಬರುವ ದಿನಗಳಲ್ಲಿ ಎಲ್ಲ ಮಾದರಿಗಳನ್ನು ಸ್ಥಳೀಯವಾಗಿಯೇ ಪರೀಕ್ಷಿಸಿ ಆದಷ್ಟು ಬೇಗನೇ ವರದಿ ನೀಡಲು ಅನುಕೂಲವಾಗುವಂತೆ ಒಂದು ವಾರದೊಳಗೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದೇ ವೇಳೆ ಮಾತನಾಡಿದ ಐ.ಸಿ.ಎಂ.ಆರ್-ರಾಷ್ಟ್ರೀಯ ಚಿಕಿತ್ಸಾ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಚಟ್ಟೋಪಾಧ್ಯಾಯ ಅವರು, ಎನ್.ಐ.ಟಿ.ಎಂ. ಪ್ರಯೋಗಾಲಯದಲ್ಲಿ ಮಾದರಿ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ, ಎನ್.ಐ.ಟಿ.ಎಂ. ವಿಜ್ಞಾನಿ ಬನ್ನಪ್ಪ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button