ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಜಾಗತಿಕ ಮಟ್ಟದಲ್ಲಿ ಮಹಿಳೆಯರು ಸರ್ವ ಕ್ಷೇತ್ರಗಳಲ್ಲಿ ಸಬಲರಾಗುತ್ತಿದ್ದು, ರಾಜಕೀಯ, ಸಾಂಸ್ಕೃತಿಕ ಹಾಗೂ ಇನ್ನುಳಿದ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡುತ್ತಿರುವುದು ಖುಷಿಯ ವಿಚಾರವಾಗಿದೆ. ಇನ್ನೊಂದೆಡೆ ಇವತ್ತಿನ ನಾಗರಿಕ ಸಮಾಜದಲ್ಲಿ ಮಹಿಳೆಯ ಮೇಲೆ ಆಗುತ್ತಿರುವ ದೌರ್ಜನ್ಯದಿಂದಾಗಿ ಇಡೀ ಸಮಾಜ ನಾಚಿಕೊಳ್ಳುವಂತಾಗಿದೆ. ಸಮಾಜದಲ್ಲಿ ದೇವದಾಸಿ ಪದ್ಧತಿಯಂತಹ ಹೇಯ ಕೃತ್ಯಗಳಿಂದ ಹೊರಬಂದು ಸುಂದರ ಬದುಕು ಕಟ್ಟಿಕೊಳ್ಳಲು ಅವಕಾಶವಾಗಿದೆ ಎಂದು ಘಟಪ್ರಭಾದ ಮಾಸ್ (ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ) ಸಂಸ್ಥೆಯ ಕಾನೂನು ಸಲಹೆಗಾರರಾದ ಐರಾವತಿ ಮಾಂಗ್ ತಿಳಿಸಿದರು.
ಅವರು ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಯ್.ಕ್ಯೂ.ಎ.ಸಿ. ಅಡಿಯಲ್ಲಿ ಸಾಂಸ್ಕೃತಿಕ ಹಾಗೂ ಮಹಿಳಾ ವೇದಿಕೆ ಆಶ್ರಯದಲ್ಲಿ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ರಾಶಿ ಎನ್ನುವಂತೆ ಮಾಸ್ ಸಂಸ್ಥೆ ಒಟ್ಟುಗೂಡಿ ಕೆಲಸ ಮಾಡಿದ ಪರಿಣಾಮ ಪದ್ಮಶ್ರೀ ಪುರಸ್ಕಾರ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದರು.
ಇಂದು ಸಾರ್ವಜನಿಕ ಬದುಕಿನಲ್ಲಿ ಮಹಿಳೆಯರು ತಮ್ಮ ಸಾಧನೆಯ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರೆ ಇಂದಿನ ಯುವ ಪೀಳಿಗೆಗೆ ಪ್ರೇಣೆಯಾಗಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ. ಆರ್. ಬಿ. ಕೊಕಟನೂರ ಮಾತನಾಡಿ, ಮಹಿಳಾ ದಿನಾಚರಣೆ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೆ ವರ್ಷವೀಡಿ ಮಹಿಳಾ ಸಬಲೀಕರಣವಾಗುವಂಥ ಕಾರ್ಯಗಳು ಜರುಗಬೇಕು. ಸರಕಾರ ಮತ್ತು ಅನೇಕ ಸಂಘ ಸಂಸ್ಥೆಗಳು ಮಹಿಳಾ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅವುಗಳನ್ನು ಸರಿಯಾಗಿ ಬಳಸಿಕೊಂಡು ಸರಕಾರಿ ಯೋಜನೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ತಮ್ಮ ಭವಿಷ್ಯದ ಎಳಿಗೆಯತ್ತ ಗಮನ ಹರಿಸಬೇಕೆಂದರು.
ಘಟಪ್ರಭಾದ ಮಾಸ್ ಸಂಸ್ಥೆ ಮಹಿಳೆಯರ ಸಾಧನೆಯನ್ನು ಉನ್ನತಕ್ಕೇರಿಸಲು ಸಂಸ್ಥೆಯ ಪರಿಶ್ರಮ ಶ್ಲಾಘನೀಯವಾಗಿದೆ. ಸಾವಿರಾರು ಮಹಿಳೆಯರ ಬದುಕಿಗೆ ದಾರಿದೀಪವಾಗಿರುವ ಈ ಸಂಸ್ಥೆ ನಡೆಸುವ ಎಲ್ಲಾ ಕಾರ್ಯಗಳಲ್ಲೂ ನಮ್ಮ ಮಹಾವಿದ್ಯಾಲಯದ ಸಹಕಾರವಿದೆ ಎಂದರು.
ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಶಿವಲೀಲಾ ಎಚ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಚಂಡಕೆ, ಮಾಸ್ತಿಯವರು ಉಪಸ್ಥಿತರಿದ್ದರು. ಮಹಿಳಾ ವೇದಿಕೆ ಸಂಚಾಲಕಿ ಗಾಯತ್ರಿ ಸಾಳೋಖೆ ಸ್ವಾಗತಿಸಿದರು. ಶಾನೂರಕುಮಾರ ಗಾಣಿಗೇರ ವಂದಿಸಿದರು. ಶಿವಕುಮಾರ ನಿರೂಪಿಸಿದರು.