ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆದ್ದು ಸೋತಿದೆ, ಕಾಂಗ್ರೆಸ್ ಸೋತು ಗೆದ್ದಿದೆ.
ಭಾರತೀಯ ಜನತಾ ಪಾರ್ಟಿ 8ರಲ್ಲಿ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಹೆಚ್ಚಿನ ಮತ ಪಡೆಯುವ ಮೂಲಕ ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ. ಇದು ಮುಂದಿನ ವಿಧಾನಸಭೆ ಚುನಾವಣೆಗೆ ಕೂಡ ಬಿಜೆಪಿಗೆ ದೊಡ್ಡಮಟ್ಟದ ಆತಂಕ ಸೃಷ್ಟಿಸಿದೆ.
ಮಂಗಲಾ ಅಂಗಡಿ ಸೌಮ್ಯ ಸ್ವಭಾವದ ಸಜ್ಜನ ಮಹಿಳೆ. ಹಾಗೆ ನೋಡಿದರೆ ಅವರಿಗೆ ಚುನಾವಣೆಗೆ ಸ್ಪರ್ಧಿಸುವ ಯಾವ ಅಪೇಕ್ಷೆಯೂ ಇರಲಿಲ್ಲ. ಕಾರ್ಯಕರ್ತರ ಹಾಗೂ ಮುಖಂಡರ ಒತ್ತಾಯಕ್ಕಾಗಿ ಮಗಳನ್ನು ಕಣಕ್ಕಿಳಿಸುವ ಯೋಚನೆ ಮಾಡಿದ್ದರು. ಆದರೆ ಕಾಂಗ್ರೆಸ್ ಯಾವಾಗ ಸತೀಶ್ ಜಾರಕಿಹೊಳಿಯಂತಹ ಪ್ರಭಲ ನಾಯಕನನ್ನು ಕಣಕ್ಕಿಳಿಸಿತೋ ಆಗ ಬಿಜೆಪಿಗೆ ಅನುಕಂಪವೊಂದೇ ಕೈ ಹಿಡಿಯಬಲ್ಲದು ಎನ್ನುವುದು ಖಾತ್ರಿಯಾಯಿತು. ಹಾಗಾಗಿ ಬೆಳಗಾವಿಯ ಭವಿಷ್ಯದ ದೃಷ್ಟಿಯಿಂದಲೂ ಯೋಚಿಸದೆ ಅಭ್ಯರ್ಥಿ ಘೋಷಿಸಿತು.
ಕಳೆದ ಚುನಾವಣೆಯಲ್ಲಿ 4 ಲಕ್ಷದಷ್ಟು ದೊಡ್ಡ ಅಂತರದಿಂದ ಗೆದ್ದಿದ್ದ ಬಿಜೆಪಿ ಆರಂಭದಲ್ಲಿ ಈ ಚುನಾವಣೆ ಒನ್ ಸೈಡೆಡ್ ಎಂದುಕೊಳ್ಳುತ್ತಿತ್ತು. ಯಾರನ್ನೇ ಕಣಕ್ಕಿಳಿಸಿದರೂ ಈ ಬಾರಿ ಸುಲಭ ಗೆಲುವು ಎಂದುಕೊಂಡಿದ್ದರು. ಹಾಗಾಗಿ 35ಕ್ಕೂ ಹೆಚ್ಚು ಜನರು ಕಣಕ್ಕಿಳಿಯಲು ಪೈಪೋಟಿ ನಡೆಸಿದ್ದರು. ಆದರೆ ಹಲವು ಕಾರಣಗಳಿಗಾಗಿ ಇನ್ಯಾರನ್ನೋ ನಿಲ್ಲಿಸಿದ್ದರೆ ಸುಲಭವಾಗಿ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗುತ್ತಿತ್ತು. ಕೊನೆಯ ಕ್ಷಣದಲ್ಲಿ ಪರಿಸ್ಥಿತಿ ನೋಡಿ ಕ್ಷೇತ್ರ ಉಳಿಸಿಕೊಳ್ಳಲು ಆರ್ ಎಸ್ಎಸ್ ಮತ್ತು ವಿಶ್ವಹಿಂದೂ ಪರಿಷತ್ ನಾಯಕರು, ಕಾರ್ಯಕರ್ತರು ನೇರವಾಗಿ ಆಖಾಡಕ್ಕಿಳಿಯಬೇಕಾಯಿತು.
ಈಗ ಅಂತೂ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದೆ. ಆದರೆ ಜನತಿರಸ್ಕಾರಕ್ಕೆ ಕಾರಣ ಅರಿತುಕೊಳ್ಳಬೇಕು. ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಜವಾಬ್ದಾರಿಯುತವಾಗಿ ಪಕ್ಷ ಸಿದ್ಧವಾಗಬೇಕಿದೆ.
ಬಿಜೆಪಿ ಗೆದ್ದು ಸೋಲಲು ಪ್ರಮುಖವಾಗಿ ಈ ಹನ್ನೊಂದು ಕಾರಣಗಳನ್ನು ಪಟ್ಟಿ ಮಾಡಬಹುದು –
- ಕೊರೋನಾ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಸರಕಾರದ ಅಸಮರ್ಪಕ ನಿರ್ವಹಣೆ
- ಹೊರಗಿನವರಿಗೆ ಬೆಳಗಾವಿ ಚುನಾವಣೆ ಉಸ್ತುವಾರಿ ವಹಿಸಿದ್ದು
- ಬೆಳಗಾವಿಯ ಭವಿಷ್ಯದ ದೃಷ್ಟಿಯಿಂದ ಅಭ್ಯರ್ಥಿ ಕಣಕ್ಕಿಳಿಸದಿರುವುದು
- ಕಾಂಗ್ರೆಸ್ ಅಭ್ಯರ್ಥಿಯ ವಯಕ್ತಿಕ ಸಾಮರ್ಥ್ಯ, ಸಂಪರ್ಕ
- ಅಭ್ಯರ್ಥಿ ಆಯ್ಕೆಯಲ್ಲಿ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು
- ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಹೇಳಿ ಮತ್ತೆ ಅದಕ್ಕೇ ಶರಣಾಗಿದ್ದು
- ಜಿಲ್ಲೆಯ ನಾಯಕರಲ್ಲಿನ ಹೊಂದಾಣಿಕೆ ಕೊರತೆ
- ಮರಾಠಿ ಭಾಷಿಕ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಗದಿದ್ದುದು
- ಬೆಳಗಾವಿ ದಕ್ಷಿಣ (ಗೋಕಾಕದ್ದು ಪ್ರತ್ಯೇಕ ಕಾರಣ) ಹೊರತುಪಡಿಸಿ ಇತರ ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಸೂಕ್ತ ಸ್ಪಂದನೆ ಸಿಗದಿರುವುದು
- ಅನುಕಂಪ ಮತ್ತು ಲಿಂಗಾಯತ ಮತಗಳನ್ನು ಅತಿಯಾಗಿ ನೆಚ್ಚಿಕೊಂಡಿದ್ದು
- ಆಪರೇಶನ್ ಕಮಲದ ಮೂಲಕ ಸರಕಾರ ರಚಿಸಿದ್ದಕ್ಕೆ ಜನರ ಅಸಮ್ಮತಿ
ಮಂಗಲಾ ಅಂಗಡಿ ಗೆಲುವಿನ ಅಂತರ ಕೇವಲ ಶೇ.1
ಹೆಣದ ಮೇಲೆ ಹಣ ಮಾಡಿ ಯಾವ ಸಾಮ್ರಾಜ್ಯ ಕಟ್ಟಲು ಹೊರಟಿದ್ದೀರಾ ಸ್ವಾಮಿ? – ಲಕ್ಷ್ಮಿ ಹೆಬ್ಬಾಳಕರ್ ಪ್ರಶ್ನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ