ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಲಸಿಕೆ ವಿರುದ್ಧ ಮಾತನಾಡಿದ ಕಾಂಗ್ರೆಸ್ ನಾಯಕರೇ ಇಂದು ಲಸಿಕೆ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು, ರಾಜ್ಯದ 25 ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದರು. 25 ಸಂಸದರು ಸೇರಿ ಬಿಜೆಪಿ ನಾಯಕರು ಏನು ಮಾಡುತ್ತಿದ್ದಾರೆ ಎಂಬುದನ್ನು ನಾನು ವಿವರಿಸುತ್ತೇನೆ. ಕೊರೊನಾ ಎರಡನೇ ಅಲೆ ಆರಂಭವಾದಾಗಿನಿಂದ ಸೋಂಕಿನ ವಿರುದ್ಧ ಹೋರಾಟ ನಡೆಸುವುದರಿಂದ ಹಿಡಿದು, ವ್ಯಾಕ್ಸಿನ್ ಕೊಡುವವರೆಗೂ ಕೇಂದ್ರ ಸರ್ಕಾರ, ಬಿಜೆಪಿ ನಾಯಕರು ಹೋರಾಟ ನಡೆಸಿದ್ದರೆ, ಕಾಂಗ್ರೆಸ್ ನಾಯಕರು ಇದು ಬಿಜೆಪಿ ವ್ಯಾಕ್ಸಿನ್ ಎಂದು ಅಪಪ್ರಾಚಾರ ನಡೆಸುತ್ತಾ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಈಗ ತಾವೇ ಲಸಿಕೆ ಪಡೆದು ಪೋಸ್ಟ್ ಮಾಡುತ್ತಿದ್ದಾರೆ. ನೈತಿಕತೆ ಇಲ್ಲದ ನಾಯಕರು ಎಂದು ಕಿಡಿಕಾರಿದರು.
ಕೊರೊನಾ ಎರಡನೇ ಅಲೆ ಆರಂಭವಾಗುವ ಮೊದಲು ಮಾರ್ಚ್ 17ರಂದು ಪ್ರಧಾನಿ ಮೋದಿ ಎಲ್ಲರಿಗೂ ಸೂಚನೆ ನೀಡಿದ್ದರು. ಪ್ರತಿ ಹಂತದಲ್ಲೂ ಕೋವಿಡ್ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಕೊರೊನಾ ಎದುರಿಸಲು ನಮಗಿರುವುದು ವ್ಯಾಕ್ಸಿನೇಷನ್ ಅಸ್ತ್ರ ಮಾತ್ರ. ಮೊದಲ ಅಲೆಯಲ್ಲಿ ವೈದ್ಯರು, ನರ್ಸ್ ಗಳಿಗೂ ವ್ಯಾಕ್ಸಿನ್ ಇರಲಿಲ್ಲ. ಸಪ್ಟೆಂಬರ್ ಅಂತ್ಯದ ವೇಳೆಗೆ ತಿಂಗಳಿಗೆ 10 ಕೋಟಿ ವ್ಯಾಕ್ಸಿನ್ ನೀಡುವ ಕೆಲಸ ಆಗಲಿದೆ. ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಎದುರಾದಾಗ ಬಿಜೆಪಿ ಸಂಸದರು ಕೇಂದ್ರದ ಜೊತೆ ನಿರಂತರ ಸಂಪರ್ಕ ಸಾಧಿಸಿ ಅಗತ್ಯ ಆಕ್ಸಿಜನ್ ತರುವ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.
ಇನ್ಮುಂದೆ ಮನೆಯಲ್ಲಿಯೇ ಮಾಡಿಕೊಳ್ಳಬಹುದು ಕೋವಿಡ್ ಟೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ