ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊರೋನಾ ಸೋಂಕಿನಿಂದ ಸಾವು ನೋವುಗಳು ಹೆಚ್ಚಾಗುತ್ತಿದ್ದು, ಸೋಂಕಿತರ ಆಹಾಯಕ್ಕಾಗಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಬೆಳಗಾವಿ ಜಿಲ್ಲೆಗೆ ಎರಡು ಅಂಬುಲೆನ್ಸ್ ಳನ್ನು ನೀಡಿದ್ದು, ಅವುಗಳನ್ನು ಉಪಯೋಗ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಹುಕ್ಕೇರಿ ಹಿರೇಮಠದ ಪ್ರತಿಷ್ಠಾನದಿಂದ ಜಿಲ್ಲಾಡಳಿತಕ್ಕೆ ನೀಡಲಾದ ಅಂಬುಲೆನ್ಸ್ ಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕೊರೋನಾ ಸಂಸದರ್ಭದಲ್ಲಿ ಶ್ರೀಮಠದಿಂದ ನೀಡಿರುವ ಎರಡೂ ಅಂಬುಲೆನ್ಸ್ ಗಳನ್ನು ಕರ್ನಾಟಕ ಸರಕಾರದಿಂದ ಸ್ವೀಕಾರ ಮಾಡಿ ಅದನ್ನು ಜಿಲ್ಲಾಧಿಕಾರಿಗಳಿಗೆ ವಹಿಸಿದ್ದೇನೆ. ಸಂಕಷ್ಟದಲ್ಲಿರುವ ಜನರನ್ನು ಆಸ್ಪತ್ರೆಗೆ ಕರೆ ತರಲು, ಕಳುಹಿಸಲು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದ್ದೇನೆ ಎಂದರು.
ರಾಜ್ಯ ಸರಕಾರದ ಕೇಂದ್ರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಮಾತನಾಡಿ, ರಾಜ್ಯ, ಸಮಾಜ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಸದಾ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬೆಳಗಾವಿ ಜಿಲ್ಲೆಗೆ ಆದರ್ಶ ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೆಳಗಾವಿ ಹುಕ್ಕೇರಿ ಹಿರೇಮಠದ ವತಿಯಿಂದ ಬೆಳಗಾವಿ ನಗರ ಹಾಗೂ ಹುಕ್ಕೇರಿ ತಾಲೂಕಿನ ಭಾಗದ ಜನರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಎರಡು ಅಂಬುಲೆನ್ಸ್ ಗಳನ್ನು ನೀಡಲಾಯಿತು. ಕೋವಿಡ್-19 ಎರಡನೇ ಅಲೆ ಭೀಕರವಾಗಿದೆ. ಹುಕ್ಕೇರಿ ಹಿರೇಮಠದ ಗುರುಶಾಂತೇಶ್ವರ ಜಾತ್ರಾಮಹೋತ್ಸವವನ್ನು ಬಿಟ್ಟು ಜನರ ಸೇವೆ ಮಾಡುವ ಮೂಲಕ ಹೀಗೆಯೂ ಜನಸೇವೆ ಮಾಡಬಹುದು ಎಂದು ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಅವರ ಮೂಲಕ ಜಿಲ್ಲಾಡಳಿತಕ್ಕೆ ಎರಡು ಅಂಬುಲೆನ್ಸ್ ನೀಡಲಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಜನರು ಜಾತ್ರೆ, ಮದುವೆ ಮಾಡುವುದನ್ನು ಬಿಡಬೇಡಿ ಎಂದು ನಾವು ಹೇಳುವುದಿಲ್ಲ. ಆದರೆ ಜನರಿಗೆ ಉಪಯೋಗವಾಗುವ ಹಾಗೆ ಏನಾದರೂ ಮಾಡಿ. ಸರಕಾರ ಮದುವೆಯಲ್ಲಿ ಜನ ಸೇರಿಸದಂತೆ ಆದೇಶ ಹೊರಡಿಸಿದೆ. ಮದುವೆ ಮಾಡಿ ಆದರೆ ಹೊರಗಡೆ ಹಸಿದ ಜನರಿಗೆ ಅನ್ನದಾನ ಮಾಡಿ ಎಂದು ಕರೆ ನೀಡಿದರು.
ಹುಕ್ಕೇರಿ ಹಿರೇಮಠದಿಂದ ಕೊರೋನಾದ ಮೊದಲನೇ ಅಲೆಯಲ್ಲಿ ಸುಮಾರು 12 ಲಕ್ಷ ಆಹಾರದ ಕಿಟ್ಗಳನ್ನು ಒದಗಿಸಲಾಗಿದೆ. ಪ್ರವಾಹದ ಸಂದರ್ಭದಲ್ಲಿಯೂ ಸಹ ಶ್ರೀಮಠ ಜನರ ಸೇವೆ ಮಾಡಿದೆ. ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಹಳ್ಳಿಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಅದಕ್ಕಾಗಿ ಎಲ್ಲರೂ ಕೂಡ ತಜ್ಞ ವೈದ್ಯರು ಹೆಚ್ಚು ಹಳ್ಳಿ ಕಡೆ ಹೋಗಿ ಜನರ ಪ್ರಾಣ ಉಳಿಸುವ ಕೆಲಸ ಮಾಡಬೇಕೆಂದು ಸರಕಾರಕ್ಕೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ, ಎಸ್ಪಿ ಲಕ್ಣ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಎಚ್ಓ ಶಶಿಕಾಂತ ಮುನ್ಯಾಳ, ಚಂದ್ರಶೇಖರ ಬಾಗೇವಾಡಿ, ಬುಡಾ ಎಂಜನಿಯರ್ ಮಹಾಂತೇಶ ಹಿರೇಮಠ, ಅರುಣ ಐಹೋಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಲೈಂಗಿಕ ದೌರ್ಜನ್ಯ ಕೇಸ್; ತೆಹಲ್ಕಾ ಮಾಜಿ ಸಂಪಾದಕನಿಗೆ ಬಿಗ್ ರಿಲೀಫ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ