ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೋವಿಡ್ ನಿರ್ವಹಣೆಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡದೇ ರಾಜ್ಯ ಸರ್ಕಾರ ಅವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ಶ್ರಮಿಸಿದ 16 ಮಂದಿ ಆಶಾ ಕಾರ್ಯಕರ್ತೆಯರು ಈ ವರೆಗೆ ಸಾವನ್ನಪ್ಪಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಕೊರೋನಾ ವೈರಸ್ ಸೋಂಕಿತರಾಗಿದ್ದಾರೆ. ಕೊರೋನಾ ವಾರಿಯರ್ಸ್ ಎಂದು ಹಣೆಪಟ್ಟಿ ಹಚ್ಚಿದ ಸರ್ಕಾರ ಒಬ್ಬ ಆಶಾ ಕಾರ್ಯಕರ್ತೆಗೆ ಮಾತ್ರ 50 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಉಳಿದ 15 ಮಂದಿಗೆ ಪರಿಹಾರ ಕೊಟ್ಟಿಲ್ಲ. ಸರ್ಕಾರದ ಇಂತಹ ಬೇಜವಾಬ್ದಾರಿಗಳಿಂದ ಬೇಸತ್ತು ಆಶಾ ಕಾರ್ಯಕರ್ತೆಯರು ದೂರ ಉಳಿದರೆ ಕೋವಿಡ್ ನಿಯಂತ್ರಣ ಕೈ ಮೀರುತ್ತದೆ. ಸರ್ಕಾರಕ್ಕೆ ಇದು ಎಚ್ಚರಿಕೆಯ ಗಂಟೆ ಕೂಡ ಆಗಿದೆ ಎಂದು ಹೇಳಿದ್ದಾರೆ.
3 ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಇಲ್ಲ. ಸಂಬಳವನ್ನೆ ನಂಬಿರುವ ಅವರ ಬದುಕು ದುಸ್ತರವಾಗಿದೆ. ಕೋವಿಡ್ ಮೊದಲ ಅಲೆಯಲ್ಲಿ ಜೀವಪಣಕ್ಕಿಟ್ಟು ದುಡಿದ ಆಶಾ ಕಾರ್ಯಕರ್ತೆಯರಿಗೆ ಗೌರವ ಧನದ ಜೊತೆಗೆ ತಲಾ 3 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದ್ದ ಸರ್ಕಾರ ಶೇಕಡಾ 50ರಷ್ಟು ಮಂದಿಗೆ ಕೊಟ್ಟು ಉಳಿದವರಿಗೆ ವಂಚಿಸಿದೆ. ಕೋವಿಡ್ ನಿರ್ವಹಣೆಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಕ್ಷಣವೇ ರಾಜ್ಯ ಸರ್ಕಾರ ಬಾಕಿ ಇರುವ ಗೌರವಧನವನ್ನು ಬಿಡುಗಡೆ ಮಾಡಬೇಕು ಎಂದು ಸರಣಿ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಉತ್ತರ ಕನ್ನಡ: ವಾರದಲ್ಲಿ ಎರಡೇ ದಿನ ಖರೀದಿಗೆ ಅವಕಾಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ