ಪ್ರಗತಿವಾಹಿನಿ ಸುದ್ದಿ; ಧಾರವಾಡ: ಕರೋನಾ ಮಹಾಮಾರಿಯ 2ನೇ ಅಲೆಯಲ್ಲಿ ಅಧಿಕ ಸಾವು-ನೋವುಗಳಿಂದಾಗಿ ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ ರಾಜ್ಯಗಳಲ್ಲಿ ಶ್ರೀ ಕಾಶಿ ಜಗದ್ಗುರು ಪೀಠದಿಂದ ಸಹನಿವಾಸದ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಲಾಗುವುದು ಎಂದು ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀಕಾಶಿ ಜ್ಞಾನ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ.
ರಾಜ್ಯದ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಿಸನಹಳ್ಳಿ ಗ್ರಾಮ ಮತ್ತು ಗದಗ ನಗರದಲ್ಲಿ ಪರಂಪರಾಗತ ಕಾಶಿ ಪೀಠದ ಗುರುಕುಲಗಳಿವೆ. ಅದರಂತೆ ಮಹಾರಾಷ್ಟ್ರದ ಲಾತೂರ ನಗರದಲ್ಲಿ ಮತ್ತು ತೆಲಂಗಾಣದ ಶಾದನಗರಗಳಲ್ಲಿಯೂ ಶ್ರೀಕಾಶಿ ಜಗದ್ಗುರು ಪೀಠದ ಗುರುಕುಲಗಳಿವೆ. ಅಲ್ಲಿ ಪಾರಂಪರಿಕ ಶಿಕ್ಷಣವಾದ ವೇದ, ಸಂಸ್ಕೃತ, ಯೋಗ, ಸಂಗೀತದ ಜೊತೆಗೆ ಆಧುನಿಕ ಶಿಕ್ಷಣವನ್ನೂ ಸಹ ಮಕ್ಕಳಿಗೆ ಕೊಡಲಾಗುತ್ತಿದೆ. ಶ್ರೀ ಪೀಠದ ಗುರುಕುಲಗಳಲ್ಲಿ ಉತ್ತಮ ಊಟ ಹಾಗೂ ವಸತಿಯ ವ್ಯವಸ್ಥೆ ಇರುತ್ತದೆ. ಪ್ರಸ್ತುತ ಕರೋನಾ ಮಹಾಮಾರಿಯ ಸಾವುಗಳ ಮೂಲಕ ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಮಾತ್ರ ಇಲ್ಲಿ ಸಂಪೂರ್ಣ ಉಚಿತ ವಸತಿ ವ್ಯವಸ್ಥೆ, ಊಟ ಜೊತೆಗೆ ವ್ಯಾಸಂಗದ ಅವಕಾಶದ ಮೂಲಕ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಕೋವಿಡ್-19 ಸಂತ್ರಸ್ತರಿಗಾಗಿ ಈಗಾಗಲೇ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವೇಡಾ ನಗರದಲ್ಲಿ 300 ಹಾಸಿಗೆಗಳ ಒಂದು ಕೋವಿಡ್ ಕೇರ್ ಸೆಂಟರನ್ನು ತೆರೆಯಲಾಗಿದ್ದು ಅದರ ಸದುಪಯೋಗವನ್ನು ಆ ಭಾಗದ ಜನತೆ ಈಗ ಪಡೆದುಕೊಳ್ಳುತ್ತಿದ್ದಾರೆ. ಕರೋನಾ ಹೆಮ್ಮಾರಿಯ ಮೂಲಕ ತಂದೆ-ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳ ವಿವರಗಳೊಂದಿಗೆ ಮಕ್ಕಳ ಪಾಲಕರು ಇಲ್ಲವೇ ಪೋಷಕರು ಮುಂದೆ ಹೇಳಲಾದ ಮೂರು ರಾಜ್ಯಗಳ ಗುರುಕುಲಗಳ ವ್ಯವಸ್ಥಾಪಕರನ್ನು ಸಂಪರ್ಕ ಮಾಡಿ ಅನಾಥ ಮಕ್ಕಳನ್ನು ಸೇರಿಸಬಹುದಾಗಿದೆ.
ವ್ಯವಸ್ಥಾಪಕರ ಸಂಪರ್ಕ : ರಾಜ್ಯದ ಗದಗ ನಗರದ ಗುರುಕುಲಕ್ಕಾಗಿ ವ್ಯವಸ್ಥಾಪಕ ಮಂಜುನಾಥ್ ಬೆಲೇರಿ (ಮೊ : 9448027291) ಹಾಗೂ ಹಾವೇರಿ ಜಿಲ್ಲೆ ಬಿಸನಹಳ್ಳಿಯ ಗುರುಕುಲಕ್ಕಾಗಿ ವ್ಯವಸ್ಥಾಪಕ ಗದಿಗೆಪ್ಪ ಮಾಮೂಲೆ ಪಟ್ಟಣಶೆಟ್ಟರ (ಮೊ: 9113824678 ), ಮಹಾರಾಷ್ಟ ರಾಜ್ಯದ ಲಾತೂರ ಗುರುಕುಲಕ್ಕಾಗಿ ವ್ಯವಸ್ಥಾಪಕ ಮನ್ಮಥಪ್ಪ ಪಂಚಾಕ್ಷರಿ (ಮೊ: 9403542221 ) ಹಾಗೂ ತೆಲಂಗಾಣ ರಾಜ್ಯದ ಶಾದನಗರ ಗುರುಕುಲಕ್ಕಾಗಿ ಜಗದೇವ ಹಿರೇಮಠ (ಮೊ : 9246581653 ) ಅವರನ್ನು ಸಂಪರ್ಕಿಸುವ0ತೆ ಶ್ರೀಕಾಶಿ ಜ್ಞಾನ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಕುಟುಂಬದವರಿಗೂ ಕೊರೊನಾ ಲಸಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ