Kannada NewsLatest

ಸಂಚಾರಿ ಐಸಿಯು ಬಸ್ ಗೆ ಚಾಲನೆ; ಏನಿದರ ವಿಶೇಷತೆ…?

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: “ಸಾರಿಗೆ ಸುರಕ್ಷಾ” ಎಂಬ ಹೆಸರಿನ ಸಂಚಾರಿ ಐಸಿಯು/ICU ON Wheels)ಬಸ್‌ ಆಂಬುಲೆನ್ಸ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದರು.

ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬಸ್ ಆಂಬುಲೆನ್ಸ್ ಗೆ ಚಾಲನೆ ನೀಡಿದರು. ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ 2ನೇ ಅಲೆಯು ಹರಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ವಾ.ಕ.ರ.ಸಾ. ಸಂಸ್ಥೆಯು ” ಸಾರಿಗೆ ಸುರಕ್ಷಾ” ಹೆಸರಿನ ಆಂಬುಲೆನ್ಸ್ ಪ್ರಾರಂಭಿಸಿದೆ.

ಈ ಆಂಬುಲೆನ್ಸ್ ನಿರ್ಮಾಣಕ್ಕೆ ಒಟ್ಟು ರೂ.7,88,000 (Overhead ಹೊರತುಪಡಿಸಿ) ವೆಚ್ಚ ತಗುಲಿದ್ದು,ಹುಬ್ಬಳ್ಳಿ ಯ ವಾ.ಕ.ರ.ಸಾ. ಸಂಸ್ಥೆಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ನಿರ್ಮಿಸಲಾಗಿದೆ.

ಆಂಬುಲೆನ್ಸ್ ನಲ್ಲಿ ವಿಶೇಷ ಚಿಕಿತ್ಸಾ ವ್ಯವಸ್ಥೆಗಳು :

“ಸಾರಿಗೆ ಸುರಕ್ಷಾ” ವಾಹನದಲ್ಲಿ ನಾಲ್ಕು ಹಾಸಿಗೆಗಳಿದ್ದು, ಐಸಿಯು ಸೌಲಭ್ಯ ಹೊಂದಿವೆ. ಪ್ರತಿಯೊಂದು ಬೆಡ್‌ಗೂ ಆಕ್ಸಿಜನ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರತಿ ಬೆಡ್ ಹಾಗೂ ಕಿಟಕಿಗಳಿಗೆ ಕರ್ಟನ್ ಅಳವಡಿಸಲಾಗಿದೆ. ಅಲ್ಲದೇ, ವಾಹನದಲ್ಲಿರುವ ಪ್ರತಿಯೊಂದು ಬೆಡ್ ಗಳಿಗೆ ಹಾಗೂ ವಾಹನದೊಳಗೆ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಾಹನದಲ್ಲಿರುವ 4 ಬೆಡ್‌ಗಳಿಗೂ ಪ್ಯಾನ್ ಅಳವಡಿಸಲಾಗಿದೆ.

ಪ್ರತಿ ಬೆಡ್‌ಗಳ ನಡುವೆ ಔಷಧಿ/ವಸ್ತುಗಳ ಸ್ಟೋರ್ ಸ್ಟಾಂಡ್ ಅಳವಡಿಸಲಾಗಿದ್ದು, ಐವಿ ವ್ಯವಸ್ಥೆ, ತುರ್ತು ಔಷಧಿ ವ್ಯವಸ್ಥೆ ಹಾಗೂ ಥರ್ಮಾಮೀಟರ್ ಮತ್ತು ಆಕ್ಸಿಮೀಟರ್ ಒದಗಿಸಲಾಗಿದೆ. ಡ್ಯೂಟಿ ಡಾಕ್ಟರ್/ನರ್ಸ್‌ಗಳಿಗೆ ಪ್ರತ್ಯೇಕ ಕೌಂಟರ್ ಮತ್ತು ಪ್ಯಾನ್ ಅಳವಡಿಸಿರುವುದು ಈ ವಾಹನದ ವಿಶೇಷವಾಗಿದೆ.

ಅನುಪಯುಕ್ತ ವಾಹನವನ್ನು ಬಳಸಿ ” ಸ್ತ್ರೀ ಶೌಚಾಲಯ ” ನಿರ್ಮಾಣ:

ಮಹಿಳಾ ಸ್ವಾಸ್ತ ಸಮಾಜದ ನಿರ್ಮಾಣಕ್ಕಾಗಿ ವಾ.ಕ.ರ.ಸಾ. ಸಂಸ್ಥೆಯು ಹುಬ್ಬಳ್ಳಿಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ಅನುಪಯುಕ್ತ ವಾಹನವನ್ನು “ಸ್ತ್ರೀ ಶೌಚಾಲಯ” ವನ್ನಾಗಿ ಪರಿವರ್ತಿಸಿದೆ.

ಈ ಶೌಚಾಲಯದ ನಿರ್ಮಾಣಕ್ಕೆ ಒಟ್ಟು ರೂ.8,13,962 (Overhead ಹೊರತುಪಡಿಸಿ) ವೆಚ್ಚ ತಗುಲಿದೆ.

“ಸ್ತ್ರೀ ಶೌಚಾಲಯ”ದ ವಿಶೇಷತೆಗಳು :

ವಾಹನದ ಒಳ ಹೋಗುವ ಸ್ಟೆಪ್‌ನ ಬಲಭಾಗದಲ್ಲಿ ಮಗುವಿಗೆ ಡೈಪರ್ ಬದಲಾಯಿಸುವ ಸಲುವಾಗಿ ಮಗು ಆರೈಕೆ ವ್ಯವಸ್ಥೆಯ ಕೊಠಡಿ ಕಲ್ಪಿಸಲಾಗಿದೆ ಹಾಗೂ ಮಗುವಿಗೆ ಹಾಲುಣಿಸುವ ಸಲುವಾಗಿ ಪ್ರತ್ಯೇಕ ಕೊಠಡಿಯನ್ನು ನಿರ್ಮಿಸಲಾಗಿದೆ.

ಈ ವಾಹನದಲ್ಲಿ 4 ಶೌಚಾಲಯಗಳಿದ್ದು, 2 ಶೌಚಾಲಯ ಇಂಡಿಯನ್ ಮಾದರಿ ಹಾಗೂ 2 ಶೌಚಾಲಯ ವೆಸ್ಟರ್ನ ಮಾದರಿಯಲ್ಲಿ ಇವೆ ಹಾಗೂ ಕೈ ತೊಳೆಯುವ ಸಲುವಾಗಿ ನೀರಿನ ನಳಗಳನ್ನು ಒಳಗೊಂಡಿರುವ 2 ಸಿಂಕ್‌ಗಳನ್ನು ಅಳವಡಿಸಲಾಗಿದೆ.

ವಿದ್ಯುತ್ ವ್ಯವಸ್ಥೆಗಾಗಿ 3.5 ಕೆವಿಎ ಸಾಮರ್ಥ್ಯದ ಯುಪಿಎಸ್ ಇನ್ವರ್ಟರ್ ಅಳವಡಿಸಲಾಗಿದೆ ಮತ್ತು ಸಂಚಾರಿ ಶೌಚಾಲಯಕ್ಕೆ ಸ್ಥಳೀಯವಾಗಿ ಲಭ್ಯವಿರುವ ಎಕ್ಟ್ಸರನಲ್ ಎ.ಸಿ. ಪವರ್ ಸಪ್ಲೈ ನಿಂದ ಸಂಪರ್ಕ ಪಡೆದುಕೊಳ್ಳಲು ಬೇಕಾದ ಸ್ವಿಚ್ ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತಗೊಂಡಲ್ಲಿ 3 ಗಂಟೆಗಳವರೆಗೆ ಬ್ಯಾಕಪ್ ಇರುತ್ತದೆ. ವಾಹನದ ಎಲ್ಲಾ ಕೊಠಡಿಗಳಿಗೆ ಬೆಳಕು ಮತ್ತು ಪ್ಯಾನ್‌ನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಶೌಚಾಲಯದಲ್ಲಿ ನೀರಿನ ರಭಸವನ್ನು ಹೆಚ್ಚಿಸಲು ಪ್ರೆಶರ್ ಪಂಪ್ ಅಳವಡಿಸಲಾಗಿದೆ. ಚಾಲಕರ ಕ್ಯಾಬಿನನಲ್ಲಿ 1,000 ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಟ್ಯಾಂಕ್ ನ್ನು ಅಳವಡಿಸಲಾಗಿದೆ.

ಈ ಸಂದರ್ಭದಲ್ಲಿ ,ಉಪ ಮುಖ್ಯಮಂತ್ರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಇಲಾಖೆಯ ಸಚಿವರಾದ ಲಕ್ಷ್ಮಣ ಸವದಿ,ಗೃಹಸಚಿವರಾದ ಬಸವರಾಜ ಬೊಮ್ಮಾಯಿ, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ್ ಕತ್ತಿ, ಆರೋಗ್ಯ ಇಲಾಖೆಯ ಸಚಿವರಾದ ಡಾ.ಕೆ.ಸುಧಾಕರ್ ಹಾಗೂ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಹೇಗಿರಲಿದೆ ಎಸ್.ಎಸ್.ಎಲ್ ಸಿ ಪರೀಕ್ಷಾ ವ್ಯವಸ್ಥೆ? – ಇಲ್ಲಿದೆ ಮಾಹಿತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button