ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಹಣ ಜನರಿಗೆ ತಲುಪಿದಾಗ ನಮಗೆ ಸಮಾಧಾನವಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಸುಮ್ಮನೆ ಪ್ಯಾಕೇಜ್ ಘೋಷಣೆ ಮಾಡುವುದರಿಂದ ಪ್ರಯೋಜನವಿಲ್ಲ. ಅರ್ಹರಿಗೆ ಆ ಹಣ ತಲುಪಬೇಕು. ಕಳೆದ ಬಾರಿ ಘೋಷಣೆ ಮಾಡಿದ ಹಣ ಇನ್ನುವರೆಗೂ ಕೂಡ ಜನರಿಗೆ ತಲುಪಿಲ್ಲ. ಹೀಗಾಗಿ, ನಮಗೆ ಆತಂಕವಿದೆ. ಸರ್ಕಾರ ಈ ಬಾರಿ ಜನರಿಗೆ ಪ್ಯಾಕೇಜ್ ಹಣ ತಲುಪಿಸಬೇಕು ಎಂದರು.
ಸರ್ಕಾರಕ್ಕೆ ವಿವಿಧ ಸಲಹೆ ನೀಡಿದ್ದೇವೆ:
ಸದ್ಯ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಸರ್ಕಾರ ಹಾಗೂ ಜಿಲ್ಲಾಡಳಿತದ ಮೇಲೆ ಈಗ ಒತ್ತಡವಿಲ್ಲ. ಮುಂದಿನ 5 ವರ್ಷಗಳಲ್ಲಿ ಸರ್ಕಾರ ಯಾವ ರೀತಿ ಸಜ್ಜಾಗಬೇಕು ಎಂಬುದರ ಬಗ್ಗೆ ನಾವು ಸಭೆಯಲ್ಲಿ ಸಲಹೆ ನೀಡಿದ್ದೇವೆ. ಜಿಲ್ಲೆ ಮಾತ್ರವಲ್ಲದೇ ರಾಜ್ಯಾದ್ಯಂತ ಎಲ್ಲ ಆಸ್ಪತ್ರೆಗಳಲ್ಲಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಂತೆ ತಿಳಿಸಿದ್ದೇವೆ. ಆಸ್ಪತ್ರೆಗಳನ್ನು ಮೇಲ್ದರ್ಗೆಗೇರಿಸುವಂತೆ ಆಗ್ರಹ ಮಾಡಿದ್ದೇವೆ” ಎಂದು ಮಾಹಿತಿ ನೀಡಿದರು.
ಬೆಳಗಾವಿಯಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು. ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯಗೊಳಿಸಬೇಕು. ಎಲ್ಲ ಹೊಸ ತಾಲೂಕುಗಳಿಗೆ ನೂರು ಹಾಸಿಗೆ ಆಸ್ಪತ್ರೆ ಮಂಜೂರು ಮಾಡಬೇಕು. ಆಯುಷ್ಮಾನ್-ಆರೋಗ್ಯ ಭಾರತ ಯೋಜನೆಯಡಿ ಸೇವೆ ಒದಗಿಸಿದ ಖಾಸಗಿ ಆಸ್ಪತ್ರೆಗಳ ಬಿಲ್ ಪಾವತಿಸಬೇಕು. ಆರ್.ಎಂ.ಪಿ. ವೈದ್ಯರಿಗೂ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕು. ಕೋವಿಡ್ ಟೆಸ್ಟಿಂಗ್ ಗೆ ಖಾಸಗಿಯವರಿಗೂ ಅವಕಾಶ ನೀಡುಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದರು.
ಬ್ಲ್ಯಾಕ್ ಫಂಗಸ್ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ:
ಜಿಲ್ಲೆಯಲ್ಲಿ ಇತ್ತೀಚೆಗೆ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ, ಬ್ಲ್ಯಾಕ್ ಫಂಗಸ್ ನಿಯಂತ್ರಣಕ್ಕೆ ವಿಶೇಷ ಒತ್ತು ನೀಡಬೇಕು. ಫಂಗಸ್ ಚಿಕಿತ್ಸೆಗೆ ಬಿಮ್ಸ್ ನಲ್ಲಿ ತಜ್ಞ ವೈದ್ಯರ ನೇಮಕ ಮಾಡಬೇಕು. ಲಸಿಕೆಗಳ ಪೂರೈಕೆ ಮಾಡಬೇಕು ಎಂದು ಆಗ್ರಹ ಮಾಡಿದ್ದೇವೆ ಎಂದು ತಿಳಿಸಿದರು.
ಬಿಸ್ವಾಸ್ ಉತ್ತಮ ಅಧಿಕಾರಿ:
ಬಿಮ್ಸ್ ಗೆ ಹೊಸದಾಗಿ ನೇಮಿಸಿರುವ ಆಮ್ಲಾನ್ ಆದಿತ್ಯ ಬಿಸ್ವಾಸ್ ಉತ್ತಮ ಅಧಿಕಾರಿಯಾಗಿದ್ದಾರೆ. ಅವರ ಮೇಲೆ ವಿಶ್ವಾಸವಿದೆ. ಬಿಮ್ಸ್ ನಲ್ಲಿನ ವ್ಯವಸ್ಥೆಯನ್ನು ಅವರು ಸರಿಪಡಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಹಾಜರಿದ್ದರು.
ಪಿಯುಸಿ ಪರೀಕ್ಷೆ ರದ್ದಾದರೇ, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಯಾಕೆ?: ಸರ್ಕಾರಕ್ಕೆ ಸತೀಶ ಜಾರಕಿಹೊಳಿ ಪ್ರಶ್ನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ