Latest

ವಸಂತ ಕುಷ್ಠಗಿ ನಿಧನ: ಹಲವರ ಸಂತಾಪ

ಪ್ರಗತಿವಾಹಿನಿ ಸುದ್ದಿ, ಕಲಬುರಗಿ –  ಹಿರಿಯ ಸಾಹಿತಿ, ವಿದ್ವಾಂಸ, ವಿಮರ್ಶಕ, ಭಾಷಾಜ್ಞಾನಿ, ದಾಸ ಸಾಹಿತ್ಯ ಸಂಶೋಧಕ ಪ್ರೊ.ವಸಂತ ಕುಷ್ಟಗಿ(85)  ನಿಧನರಾಗಿದ್ದಾರೆ.
ವಾರದ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶುಕ್ರವಾರ ಕೊನೆಯುಸಿರೆಳೆದರು.
ಹೈದ್ರಾಬಾದ್‌ನಲ್ಲಿರುವ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಮಾಡಿ ಸ್ನಾತಕೋತ್ತರ ಪದವೀಧರರಾಗಿದ್ದ ಕುಷ್ಟಗಿಯವರು 8 ಕವನ ಸಂಕಲನ, 30ಕ್ಕೂ ಗದ್ಯ ಸಂಕಲನ, 16ಕ್ಕೂ ಹೆಚ್ಚು ಸಂಪಾದನೆ ಕೃತಿಗಳು, 25ಕ್ಕೂ ಹೆಚ್ಚು ಸಂಪಾದಿತ ಕೃತಿಗಳನ್ನು ನಾಡಿಗೆ ಅರ್ಪಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.
 ಪ್ರೊ. ವಸಂತ ಕುಷ್ಟಗಿ ಅವರ ನಿಧನಕ್ಕೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ  ಸಂತಾಪ ವ್ಯಕ್ತಪಡಿಸಿದ್ದಾರೆ.

ತಮ್ಮ ಅನನ್ಯ ಕಾವ್ಯ ಪ್ರತಿಭೆಯಿಂದ ಕನ್ನಡ ಸಾರಸ್ವತಲೋಕಕ್ಕೆ ಮಹತ್ವದ ಕೊಡುಗೆ ಕೊಟ್ಟ ಲೇಖಕರು. ನನ್ನೊಂದಿಗೆ ಬಹಳ ಆತ್ಮೀಯರಾಗಿ ಸಹೋದರರಂತಿದ್ದ ವಸಂತ ಕುಷ್ಟಗಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಎಂ. ಎ. ಪದವಿ ಪಡೆದ ನಂತರ ಬೀದರ್ ನ ಭೂಮ ರೆಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು.
ಆನಂತರ ವಿವಿಧ ಕಾಲೇಜುಗಳಲ್ಲಿ ಅನೇಕ ಹಂತದ ಹುದ್ದೆಗಳನ್ನು ನಿರ್ವಹಿಸಿ, ಪ್ರಾಂಶುಪಾಲರಾಗಿ ನಿವೃತ್ತರಾದರು. ರಮಾನಂದ ತೀರ್ಥ ಸಂಶೋಧನಾ ಸಂಸ್ಥೆಯ ಗೌರವ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಒಲವು ಹೊಂದಿದ್ದ ಕುಷ್ಟ್ಟಗಿ ಹಲವಾರು ಸಂದರ್ಭದಲ್ಲಿ ಈ ಕ್ಷೇತ್ರದ ಸಮಸ್ಯೆಗಳ ಕುರಿತು ತಮ್ಮೊಂದಿಗೆ ಚರ್ಚಿಸಿದ್ದನ್ನು ಹೊರಟ್ಟಿ ಸ್ಮರಿಸಿದ್ದಾರೆ.

ಕುಷ್ಟಗಿಯವರು ಭಕ್ತಿ ಗೋಪುರ, ಹೊಸ ಹೆಜ್ಜೆ, ಗಾಂಧಾರಿಯ ಕರುಣೆ, ಬೆತ್ತಲೆಯ ಬಾನು, ಚಂದ್ರಲಾ, ಮಾನ್ಯಖೇಟ ಮತ್ತು ಇತ್ತೀಚೆಗಿನ ಅಪ್ ಅಂಡ್ ಡೌನ್ ಋತುಚಕ್ರ ಮುಂತಾದ ಬಹು ಜನಪ್ರಿಯ  ಕೃತಿಗಳನ್ನು ರಚಿಸಿದ್ದು, ಪ್ರತಿಷ್ಠಿತ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ, ಸರ್ ಎಂ ವಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ವಸಂತ ಕುಷ್ಟಗಿ ಅವರ ನಿಧನದಿಂದ ಕನ್ನಡ ಸಾಹಿತ್ಯಲೋಕ ಒಬ್ಬ ಅತ್ಯುತ್ತಮ ಲೇಖಕನನ್ನು ಕಳೆದುಕೊಂಡಿದೆ. ಭಗವಂತ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ ಮತ್ತು ಅಭಿಮಾನಿ ಬಳಗಕ್ಕೆ ನೀಡಲಿ ಎಂದು ಸಭಾಪತಿ ಬಸವರಾಜ ಹೊರಟ್ಟಿ  ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಮುರುಗೇಶ ನಿರಾಣಿ ಸೇರಿದಂತೆ ಹಲವರು ಕುಷ್ಠಗಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button